Homeಸುದ್ದಿಶಿರಾಡಿ ಘಾಟಿಯಲ್ಲಿ ಸಾಲುಗಟ್ಟಿ ನಿಂತಿರುವ ವಾಹನಗಳು

Related Posts

ಶಿರಾಡಿ ಘಾಟಿಯಲ್ಲಿ ಸಾಲುಗಟ್ಟಿ ನಿಂತಿರುವ ವಾಹನಗಳು


*ಸಂಚಾರ ಸ್ಥಗಿತಗೊಂಡು ಮಂಗಳೂರು-ಬೆಂಗಳೂರು ಸಂಪರ್ಕ ಕಡಿತ
ಮಂಗಳೂರು: ಶಿರಾಡಿ ಘಾಟಿಯಲ್ಲಿ ಮತ್ತೆ ಭೂಕುಸಿತವಾಗಿ ಎಲ್ಲ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಿದ ಪರಿಣಾಮವಾಗಿ ಘಾಟಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ. ಕರಾವಳಿ ಮತ್ತು ಬೆಂಗಳೂರನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿ ಇದಾಗಿದ್ದು,ಈ ರಸ್ತೆ ಮುಚ್ಚಿರುವುದರಿಂದ ಎಲ್ಲ ರೀತಿಯ ಓಡಾಟಗಳಿಗೆ ಸಮಸ್ಯೆಯಾಗಿದೆ.
ಸಕಲೇಶಪುರ ಸಮೀಪ ದೋಣಿಗಲ್‌ ಎಂಬಲ್ಲಿ ಭೂಕುಸಿತವಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಬಸ್‌ಗಳ ಓಡಾಟ ಮತ್ತು ಸರಕು ಸಾಗಾಟ ಬಾಧಿತವಾಗಿರುವುದರಿಂದ ಜನಸಾಮಾನ್ಯರಿಗೂ ಸಂಕಷ್ಟ ಎದುರಾಗಿದೆ. ಮಂಗಳೂರಿಗೆ ಸರಕು ತರುವ ಲಾರಿಗಳು ಮತ್ತಿತರ ವಾಹನಗಳು ಘಾಟಿಯಲ್ಲಿ ಸಾಲುಗಟ್ಟಿ ನಿಂತಿವೆ.
ಲಘು ವಾಹನಗಳಿಗೆ ಪರ್ಯಾಯ ಮಾರ್ಗವನ್ನು ಸೂಚಿಸಲಾಗಿದೆ. ಘನ ವಾಹನಗಳಿಗೆ ಯಾವುದೇ ಮಾರ್ಗಸೂಚಿ ನೀಡದಿರುವುದರಿಂದ ಮತ್ತು ರಸ್ತೆ ಯಾವಾಗ ಸಂಚಾರಕ್ಕೆ ಮುಕ್ತವಾಗುತ್ತದೆ ಎಂಬ ಮಾಹಿತಿ ಇಲ್ಲದಿರುವುದರಿಂದ ಗೊಂದಲ ಉಂಟಾಗಿದೆ.
ಚೆನ್ನೈ ಮತ್ತಿತರೆಡೆಗಳಿಂದ ಬಂದಿರುವ ಸರಕು ಹಾಗೂ ಇನ್ನತರ ವಾಹನಗಳು ಘಾಟಿಯಲ್ಲಿ ಸಿಲುಕಿಕೊಂಡಿವೆ. ಶುಕ್ರವಾರ ಮಧ್ಯಾಹ್ನದಿಂದಲೇ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಕುಶಾಲನಗರ ಮಾರ್ಗದಲ್ಲೂ ಸಂಚಾರ ನಿರ್ಬಂಧವಿರುವುದರಿಂದ ವಾಹನ ಚಾಲಕರು ಏನು ಮಾಡಬೇಕೆಂದು ತಿಳಿಯದೆ ಚಿಂತೆಯಲ್ಲಿದ್ದಾರೆ. ವಾಹನದಲ್ಲಿದ್ದ ಆಹಾರ ಮತ್ತು ನೀರು ಸಂಗ್ರಹ ಸೀಮಿತವಾಗಿರುವುದರಿಂದ ಅತ್ತ ಮುಂದೂ ಹೋಗಲಾಗದೆ ಇತ್ತ ಹಿಂದಿರುಗಲೂ ಆಗದೆ ಸಮಸ್ಯೆ ಎದುರಿಸುತ್ತಿದ್ದಾರೆ. ಸಂಚಾರ ನಿಷೇಧ ಮುಂದುವರಿದರೆ ಹಸಿವು, ಬಾಯಾರಿಕೆ ತಣಿಸಲು ಕಷ್ಟವಾಗಬಹುದು ಎಂದು ಚಾಲಕರು ಚಿಂತಿತರಾಗಿದ್ದಾರೆ.
ಶಿರಾಡಿ ಘಾಟಿ ಸಂಚಾರ ನಿಷೇಧ ಆರ್ಥಿಕವಾಗಿಯೂ ಬಹಳ ನಷ್ಟವನ್ನುಂಟು ಮಾಡುತ್ತಿದೆ. ಬೆಂಗಳೂರು-ಮಂಗಳೂರು ನಡುವಿನ ಎಲ್ಲ ವಾಹನಗಳು ಈ ಮಾರ್ಗದಲ್ಲಿ ಓಡಾಡುವುದರಿಂದ ಆರ್ಥಿಕತೆಯ ಜೀವನಾಡಿಯೇ ಸ್ಥಗಿತಗೊಂಡಂತಾಗಿದೆ.

LEAVE A REPLY

Please enter your comment!
Please enter your name here

Latest Posts

error: Content is protected !!