Saturday, October 1, 2022
spot_img
Homeರಾಜ್ಯರಾಜ್ಯದ ಬಹುತೇಕ ಕಡೆ ಮುಂದಿನ 48 ಗಂಟೆ ಮಳೆಯಾಗುವ ಸಾಧ್ಯತೆ : ಹವಾಮಾನ ಇಲಾಖೆ

ರಾಜ್ಯದ ಬಹುತೇಕ ಕಡೆ ಮುಂದಿನ 48 ಗಂಟೆ ಮಳೆಯಾಗುವ ಸಾಧ್ಯತೆ : ಹವಾಮಾನ ಇಲಾಖೆ

ಬೆಂಗಳೂರು : ರಾಜ್ಯದ ಬಹುತೇಕ ಕಡೆಗಳಲ್ಲಿ ಮುಂದಿನ 48 ಗಂಟೆ ಮಳೆಯಾಗುವ ಸಾಧ್ಯತೆ ಇದ್ದು, ಜು.19 ರಿಂದ ರಾಜ್ಯದಲ್ಲಿ ಮಳೆ ಪ್ರಮಾಣ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಹವಾಮನ ಇಲಾಖೆ ತಿಳಿಸಿದೆ. ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಬೆಳಗಾವಿ, ಹಾಸನ, ಬೀದರ್‌, ಕಲಬುರಗಿ ಜಲ್ಲೆಗಳಲ್ಲಿ ನಾಳೆ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ.
ಛತ್ತೀಸ್‌ಗಡ, ಒಡಿಶಾ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್‌, ಮಹಾರಾಷ್ಟ್ರ, ಗೋವಾ ಮತ್ತು ಕೇರಳ ರಾಜ್ಯಗಳಲ್ಲಿ ತೀವ್ರ ಮಳೆಯಾಗಲಿದೆ. ಕರಾವಳಿ ಮಲೆನಾಡು ಪ್ರದೇಶದಲ್ಲಿ ಭಾರೀ ಮಳೆಯ ಹಿನ್ನೆಲೆಯಲ್ಲಿ ಹಲವಾರು ಜಲಾಶಯಗಳು ಉಕ್ಕಿ ಹರಿಯುತ್ತಿದೆ. ತುಂಗಾಭದ್ರಾ ಜಲಾಶಯವು ಭರ್ತಿಯಾಗಿದ್ದು, ನದಿಗೆ ನೀರು ಹರಿಬಿಡಲಾಗುತ್ತಿದೆ. ನದಿ ಪಾತ್ರದ ಜನರಲ್ಲಿ ಪ್ರವಾಹ ಭೀತಿ ಉಂಟಾಗಿದೆ. ಮಂತ್ರಾಲಯದ ರಾಯರ ಮಠದಲ್ಲಿ ಪುಣ್ಯಸ್ನಾನ ನಿಷೇದಿಸಲಾಗಿದೆ. ಮಹಾರಾಷ್ಟ್ರದ ವಿವಿಧೆಡೆ ಉತ್ತಮ ಮಳೆಯಾಗುತ್ತಿರುವುದರಿಂದ ಕೃಷ್ಣಾ ಮತ್ತು ಗೋದಾವರಿ ನದಿಗಳು ಉಕ್ಕಿ ಹರಿಯುತ್ತಿವೆ. ಕೊಡಗು ಜಿಲ್ಲೆಯಲ್ಲಿ ಮಳೆ ಅವಾಂತರ ಮುಂದುವರೆದಿದ್ದು, ಜಿಲ್ಲಾಧಿಕಾರಿ ಕಚೇರಿ ತಡೆಗೋಡೆ ಕುಸಿಯುವ ಆತಂಕ ಎದುರಾಗಿದೆ. ರಾಷ್ಟ್ರೀಯ ಹೆದ್ದಾರಿ ಕೊಚ್ಚಿಹೋಗುವ ಸಾಧ್ಯತೆ ಇದ್ದು, ವಾಹನಗಳು ಪರ್ಯಾಯ ಮಾರ್ಗದ ಮೂಲಕ ಸಂಚಾರ ನಡೆಸುತ್ತಿವೆ.
ಶಿವಮೊಗ್ಗದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಸಾಗರ, ಹೊಸನಗರ, ತೀರ್ಥಳ್ಳಿಯಲ್ಲಿ ಮಳೆಯಿಂದಾಗಿ ಗದ್ದೆಗಳು ಜಲಾವೃತಗೊಂಡಿದೆ. ವರದಾ ನದಿ ಉಕ್ಕಿ ಹರಿಯುತ್ತಿದೆ. ದಾವಣಗೆರೆ ಜಿಲ್ಲೆಯಲ್ಲಿ 120ಕ್ಕೂ ಹೆಚ್ಚಿನ ಮನೆಗಳು ಕುಸಿದಿವೆ. ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಶರಾವತಿ ನದಿ ಪ್ರವಾಹದಿಂದಾಗಿ ಎರಡು ಗ್ರಾಮಗಳು ಜಲಾವೃತವಾಗಿವೆ. 20ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಗಿದೆ. ಅಡಕೆ ತೋಟ, ಗದ್ದೆಗಳಿಗೆ ನೀರು ನುಗ್ಗಿ ಬೆಳೆ ನಾಶವಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟರ್‌ ಪಲ್ಟಿಯಾಗಿರುವ ಘಟನೆ ಚಾರ್ಮಾಡಿ ಘಾಟ್‌ ಸೋಮನಕಾಡು ಸಮೀಪ ನಡೆದಿದೆ. ಅದೃಷ್ಟವಶಾತ್‌ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಯಾದಗಿರಿ ಜಿಲ್ಲೆಯ ಪ್ರವಾಹ ಭೀತಿಯೊಂದಿಗೆ ಮೊಸಳೆ ಕಾಟವು ಪ್ರಾರಂಭವಾಗಿದೆ. ಕೃಷ್ಣಾ ನದಿ ತೀರದ ರೈತರಿಗೆ ಮೊಸಳೆಗಳ ಉಪಟಳ ಹೆಚ್ಚಾಗಿದ್ದು, ಭತ್ತದ ಜಮೀನಿಗೆ ಮೊಸಳೆಗಳು ನುಗ್ಗಿ ಬೆಳೆ ನಾಶಗೊಂಡಿದೆ.

LEAVE A REPLY

Please enter your comment!
Please enter your name here

Most Popular

error: Content is protected !!