Saturday, October 1, 2022
spot_img
Homeರಾಜ್ಯಅನಪೇಕ್ಷಿತ ಕರೆಗಳಿಂದ ಗ್ರಾಹಕರಿಗೆ ಲಾಭ!

ಅನಪೇಕ್ಷಿತ ಕರೆಗಳಿಂದ ಗ್ರಾಹಕರಿಗೆ ಲಾಭ!


ಹೊಸದಿಲ್ಲಿ: ಪ್ರತಿದಿನ ನಿಮ್ಮ ಬರುವ ಮೊಬೈಲ್‌ಗೆ ಬರುವ ಕಸ್ಟಮರ್‌ ಕೇರ್‌ ಸೆಂಟರ್‌ಗಳ ಕರೆ ಕಿರಿಕಿರಿಯಾಗುತ್ತಿದೆ ಎಂದು ಇನ್ನು ನೀವು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಕೇಂದ್ರ ಸರಾಕರದ ಪ್ರಸ್ತಾವ ಜಾರಿಗೆ ಬಂದರೆ ಇಂಥ ಕರೆಗಳು ನಿಮಗೆ ಒಂದಷ್ಟು ಆದಾಯ ತಂದುಕೊಡಬಹುದು.
ಲೆಕ್ಕವಿಲ್ಲದಷ್ಟು ಕಸ್ಟಮರ್‌ ಕೇರ್‌ ಕಾಲ್‌ಗಳು, ಸ್ಪ್ಯಾಮ್‌ ಕರೆಗಳು, ಸೇಲ್ಸ್‌ ಕಾಲ್‌ಗಳು ನಿಮ್ಮ ಮೊಬೈಲ್‌ಗೆ ಬರುತ್ತಿರಬಹುದು. ಇಂತಹ ಕರೆಗಳು ಮುಂದಿನ ದಿನಗಳಲ್ಲಿ ಬಂದರೆ ಲೆಕ್ಕವಿಟ್ಟುಕೊಳ್ಳುವುದು ಉತ್ತಮ. ಏಕೆಂದರೆ, ದಿನಕ್ಕೆ ಹತ್ತು ಸ್ಪ್ಯಾಮ್‌ ಕಾಲ್‌ಗಳು ಬಂದರೆ ನಿಮಗೆ ಒಂದು ಸಾವಿರ ರೂ. ಆದಾಯವಾಗಲಿದೆ.
ಪ್ರತಿ ಅನಪೇಕ್ಷಿತ ಕರೆಗಳಿಗೆ ಕರೆ ಮಾಡಿದವರಿಗೆ ಅಥವಾ ಕರೆ ಮಾಡಿಸಿದ ಕಂಪನಿಗಳಿಗೆ ನೂರು ರೂಪಾಯಿ ದಂಡ ವಿಧಿಸುವ ಯೋಚನೆ ಸರಕಾರದ ಮುಂದಿದೆ. ಈ ರೀತಿ ವಿಧಿಸಿದ ದಂಡ ಮೊತ್ತವನ್ನು ಕರೆ ಸ್ವೀಕರಿಸಿದ ಗ್ರಾಹಕರಿಗೆ ಪಾವತಿಸಲಾಗುವುದಂತೆ!
ಗ್ರಾಹಕರು ಅನಪೇಕ್ಷಿತ ಕರೆಗಳಲ್ಲಿ ತೊಡಗಿರುವವರು ಪ್ರತಿ ಕರೆಗೆ 100 ರೂ.ವರೆಗೆ ದಂಡ ಪಾವತಿಸಬೇಕಿದೆ ಎಂದು ಸಚಿವಾಲಯ ಪ್ರಸ್ತಾವ ಇಟ್ಟಿದೆ. ವಿಶೇಷವೆಂದರೆ ಈ ಹಣ ಸರಕಾರದ ಬೊಕ್ಕಸಕ್ಕೆ ಸೇರುವುದಿಲ್ಲ. ಈ ರೀತಿಯ ಅನಪೇಕ್ಷಿತ ಕರೆಗಳನ್ನು ಸ್ವೀಕರಿಸಿದ ಗ್ರಾಹಕರಿಗೆ ಹಣವನ್ನು ಜಮೆ ಮಾಡಲು ಉದ್ದೇಶಿಸಲಾಗಿದೆ.
ಟ್ರಾಯ್‌ ಸ್ಪಷ್ಟ ನಿರ್ದೇಶನವಿದ್ದರೂ ಟೆಲಿ ಮಾರ್ಕೆಟಿಂಗ್‌ ಮತ್ತು ಸೇಲ್ಸ್‌ ಕರೆಗಳು ನಿತ್ಯ ಗ್ರಾಹಕರ ಮೊಬೈಲ್‌ಗೆ ಬರುತ್ತಿವೆ. ಈಗಾಗಲೇ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು ಪೆಸ್ಕಿ ಕರೆಗಳು ಮತ್ತು ಅನಪೇಕ್ಷಿತ ಎಸ್‌ಎಂಎಸ್‌ಗಳನ್ನು ಡಿಎನ್‌ಡಿ ರಿಜಿಸ್ಟರ್‌ ಮೂಲಕ ನಿಯಂತ್ರಿಸುತ್ತಿದೆ.
ಪ್ರತಿದಿನ ಹೊಸ ಹೊಸ ಮೊಬೈಲ್‌ ನಂಬರ್‌ಗಳಿಂದ ಕರೆ ಮಾಡಿ ಹಲೋ, ನಾವು ಈ ಬ್ಯಾಂಕ್‌ನಿಂದ ಕರೆ ಮಾಡುತ್ತಿದ್ದೇವೆ, ನಿಮ್ಮ ಹೆಸರಿಗೆ ಉಚಿತ ಕ್ರೆಡಿಟ್‌ ಕಾರ್ಡ್‌ ನೀಡುತ್ತಿದ್ದೇವೆ ಎಂದೆಲ್ಲ ಕಾಲ್‌ ಮಾಡಿ ತಲೆ ತಿನ್ನುವವರಿಂದ ಮುಂದಿನ ದಿನಗಳಲ್ಲಿ ಗ್ರಾಹಕರು ಪಾರಾಗಬಹುದು. ಕೆಲವೊಮ್ಮೆ ಯಾವುದೋ ತುರ್ತು ಕರೆಯ ನಿರೀಕ್ಷೆಯಲ್ಲಿದ್ದಾಗ ಇಂತಹ ಕರೆಗಳು ಸಾಕಷ್ಟು ಕಿರಿಕಿರಿ ಮಾಡುತ್ತಿರುತ್ತವೆ.
ಕಳೆದ ವರ್ಷವೇ ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರವು ರಾಷ್ಟ್ರೀಯ ಗ್ರಾಹಕ ಆದ್ಯತಾ ನೋಂದಣಿಯಲ್ಲಿ ಸಂಪೂರ್ಣ ಕರೆ ನಿಷೇಧ ಆಯ್ಕೆ ನೀಡಿತ್ತು. ಹೀಗಿದ್ದರೂ, ಬಹುತೇಕ ಗ್ರಾಹಕರ ಮೊಬೈಲ್‌ಗೆ ಪ್ರತಿನಿತ್ಯ ಅನಪೇಕ್ಷಿತ ಕರೆಗಳು ಬರುತ್ತವೆ. ಅನಪೇಕ್ಷಿತ ಎಸ್‌ಎಂಎಸ್‌ಗಳೂ ಬಲ್ಕ್‌ ಆಗಿ ಬರುತ್ತವೆ. ಇಂತಹ ಸಮಯದಲ್ಲಿ ಪ್ರತಿಕರೆಗೆ ನೂರು ರೂ. ದಂಡ ವಿಧಿಸುವ ಕ್ರಮ ಹೆಚ್ಚು ಪರಿಣಾಮಕಾರಿ ಎನ್ನಲಾಗಿದೆ.

LEAVE A REPLY

Please enter your comment!
Please enter your name here

Most Popular

error: Content is protected !!