Saturday, October 1, 2022
spot_img
Homeಸ್ಥಳೀಯ ಸುದ್ದಿಕಾರ್ಕಳ, ಹೆಬ್ರಿಯಲ್ಲಿ ಅಪಘಾತ ಹೆಚ್ಚಳ

ಕಾರ್ಕಳ, ಹೆಬ್ರಿಯಲ್ಲಿ ಅಪಘಾತ ಹೆಚ್ಚಳ


ಕಾರ್ಕಳ : ಕಾರ್ಕಳ ಮತ್ತು ಹೆಬ್ರಿ ತಾಲೂಕಿನಲ್ಲಿ ಇತ್ತೀಚೆಗಿನ ದಿನಗಳಲ್ಲಿ ಅಪಘಾತಗಳು ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ. ಬಹುತೇಕ ರಸ್ತೆಗಳೆಲ್ಲ ಅಭಿವೃದ್ಧಿಗೊಂಡು ಅಗಲ ಕೂಡ ಆಗಿದೆ. ಹೀಗಿದ್ದರೂ ಅಪಘಾತಗಳ ಸಂಖ್ಯೆ ಮಾತ್ರ ಹೆಚ್ಚುತ್ತಿದೆ. ಪೊಲೀಸ್‌ ಇಲಾಖೆಯ ಅಂಕಿಅಂಶವೇ ಇದನ್ನು ತಿಳಿಸುತ್ತದೆ. ಹೆಚ್ಚಿನ ಅಪಘಾತಗಳಲ್ಲಿ ಯುವಕರೇ ಬಲಿಯಾಗುತ್ತಿರುವುದು ಕೂಡ ಗಮನಾರ್ಹ ಅಂಶ. ಹೆಚ್ಚಿನ ಅಪಘಾತಗಳಿಗೆ ಅಜಾಗರೂಕತೆಯ ಮತ್ತು ಅತಿ ವೇಗದ ಚಾಲನೆ ಕಾರಣವಾಗುತ್ತಿದೆ.
ಉಭಯ ತಾಲೂಕಿನಲ್ಲಿ ಒಂದೇ ವರ್ಷದಲ್ಲಿ 50 ಮಂದಿ ಅಪಘಾತಗಳಿಗೆ ಬಲಿಯಾಗಿದ್ದಾರೆ ಎಂದು ತಿಳಿಸುತ್ತದೆ ಪೊಲೀಸ್‌ ದಾಖಲೆಗಳು. 45 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, 481 ಮಂದಿ ಸಣ್ಣಪುಟ್ಟ ಗಾಯಗೊಂಡಿರುತ್ತಾರೆ. ಕಾರ್ಕಳ ಗ್ರಾಮಾಂತರ ವ್ಯಾಪ್ತಿಯಲ್ಲೆ 18 ಮಂದಿ ಮೃತಪಟ್ಟಿದ್ದು, 17 ಮಂದಿ ಗಂಭೀರವಾಗಿ ಹಾಗೂ 152 ಮಂದಿ ಸಣ್ಣಪುಟ್ಟ ಗಾಯಗೊಂಡಿರುತ್ತಾರೆ.
ಕಾರ್ಕಳ ನಗರ ಠಾಣಾ ವ್ಯಾಪ್ತಿಯಲ್ಲಿ 17 ಮಂದಿ ಮೃತಪಟ್ಟಿದ್ದು, 16 ಮಂದಿ ಗಂಭೀರ, 145 ಮಂದಿಗೆ ಗಾಯವಾಗಿರುತ್ತದೆ. ಹೆಬ್ರಿ ಠಾಣಾ ವ್ಯಾಪ್ತಿಯಲ್ಲಿ 12 ಮಂದಿ ಮೃತಪಟ್ಟಿದ್ದು, 9 ಮಂದಿ ಗಂಭೀರವಾಗಿ, 95 ಮಂದಿ ಗಾಯಗೊಂಡಿರುತ್ತಾರೆ. ಅಜೆಕಾರು ಠಾಣಾ ವ್ಯಾಪ್ತಿಯಲ್ಲಿ 3 ಮಂದಿ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ, 26 ಮಂದಿ ಗಾಯಗೊಂಡಿರುತ್ತಾರೆ.
ಮನ ಕಲಕಿದ ಒಂದೇ ಮನೆಯ ಇಬ್ಬರ ಸಾವು
ಕಾರ್ಕಳ ತಾಲೂಕು ನಂದಳಿಕೆ ಗ್ರಾಮದ ಒಂದೇ ಮನೆಯ ಇಬ್ಬರು ಸಾವಿಗೀಡಾದ ದಾರುಣ ಘಟನೆ ಜು. 10ರಂದು ನಡೆದಿತ್ತು. ನಂದಳಿಕೆಯಿಂದ ಕೆದಿಂಜೆಗೆ ಸ್ಕೂಟಿಯಲ್ಲಿ ಸಹೋದರರಾದ ಸಂದೀಪ್‌ ಹಾಗೂ ಸತೀಶ್‌ ಕುಲಾಲ್‌ ಸಾಗುತ್ತಿದ್ದಾಗ ಮಾವಿನಕಟ್ಟೆ ಎಂಬಲ್ಲಿ ಪಡುಬಿದ್ರೆಯ ಮೊಹಮ್ಮದ್‌ ಮುಸ್ತಫಾ ಎಂಬವರಿಗೆ ಸೇರಿದ ಇನ್ನೋವಾ ಕಾರು ಢಿಕ್ಕಿಯಾಗಿತ್ತು. ದುರ್ಘಟನೆಯಲ್ಲಿ ಸಂದೀಪ್‌ ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಸತೀಶ್‌ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಸಾಮಾಜಿಕವಾಗಿ ಸಕ್ರಿಯರಾಗಿದ್ದ ಈ ಸಹೋದರರ ಸಾವು ಮನ ಕಲಕಿದೆ.
ಅನ್ಯರ ಪ್ರಾಣದ ಬಗ್ಗೆ ಕಾಳಜಿಯಿರಲಿ
ಮಳೆಗಾಲದಲ್ಲಿ ಅಪಘಾತಗಳು ಹೆಚ್ಚು ಸಂಭವಿಸುತ್ತವೆ ಎನ್ನುವುದು ಪ್ರಕರಣಗಳನ್ನು ಗಮನಿಸಿದಾಗ ತಿಳಿಯುತ್ತಿದೆ. ಅದರಲ್ಲೂ ದ್ವಿಚಕ್ರ ವಾಹನಗಳು ಹೆಚ್ಚು ಅಪಘಾತಕ್ಕೀಡಾಗುತ್ತಿವೆ. ಹೀಗಾಗಿ ದ್ವಿಚಕ್ರ ಸವಾರರು ಬಹಳ ಎಚ್ಚರಿಕೆಯಿಂದ ಸವಾರಿ ಮಾಡಬೇಕು. ಲಾರಿ, ಬಸ್‌, ಕಾರು ಚಾಲಕರು ದ್ವಿಚಕ್ರ ವಾಹನಗಳು ಮತ್ತು ಪಾದಚಾರಿಗಳ ಪ್ರಾಣಗಳ ಬಗ್ಗೆ ಎಚ್ಚರಿಕೆ ವಹಿಸುವ ಅಗತ್ಯವಿದೆ. ಅನೇಕ ಅಪಘಾತಗಳು ನಿದ್ರೆಕಣ್ಣಲ್ಲಿ ಸಂಭವಿಸುತ್ತಿವೆ. ಮೊಬೈಲ್‌ ಬಳಕೆಯಿಂದ, ಓವರ್‌ಸ್ಪೀಡ್‌, ಬೇಜವಾಬ್ದಾರಿ ಚಾಲನೆಯಿಂದ ಉಂಟಾಗುತ್ತಿದೆ. ಯುವ ಸಮುದಾಯವಂತೂ ಮಿತಿಯಿಲ್ಲದ ವೇಗದಲ್ಲಿ ಸಾಗುತ್ತಿರುವುದು ಕಂಡುಬರುತ್ತಿದೆ. ಖಾಸಗಿ ಬಸ್‌ಗಳು ಓವರ್‌ಸ್ಪೀಡ್‌ನಲ್ಲಿ ಓಡುತ್ತಿವೆ ಎಂಬ ಆಕ್ರೋಶ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
ದಾಖಲೆಗಳು ಸಮರ್ಪಕವಾಗಿರಬೇಕು
ಪೊಲೀಸರು ಆಗಾಗ ವಾಹನಗಳನ್ನು ತಡೆದು ನಿಲ್ಲಿಸಿ ತಪಾಸಣೆ, ದಂಡ ವಿಧಿಸುವ ಕೆಲಸವನ್ನು ಮಾಡುತ್ತಾರೆ. ಆದರೆ ಅನೇಕ ಮಂದಿಯ ಬಳಿ ಡ್ರೈವಿಂಗ್‌ ಲೈಸೆನ್ಸ್‌ ಇರುವುದಿಲ್ಲ. ವಾಹನಕ್ಕೆ ಸಂಬಂಧಿಸಿದ ಸರಿಯಾದ ದಾಖಲೆ ಇರುವುದಿಲ್ಲ. ಜೀವವಿಮೆ ಮಾಡಿಸಿರುವುದಿಲ್ಲ. ಹೊಗೆ ಮಾಲಿನ್ಯ ಪರೀಕ್ಷೆ ಮಾಡಿಸಿಕೊಂಡಿರುವುದಿಲ್ಲ. ಈ ಎಲ್ಲ ದಾಖಲೆಗಳು ಇಲ್ಲದಿದ್ದರೆ ಅಪಘಾತ ಸಂಭವಿಸಿದರೆ ವಿಮೆ ಪರಿಹಾರ ಸಿಗುವುದಿಲ್ಲ.ಅಲ್ಲದೆ ಕೇಸು ಕೂಡ ಕೋರ್ಟಿನಲ್ಲಿ ನಿಲ್ಲುವುದಿಲ್ಲ. ಅಗತ್ಯ ದಾಖಲೆ, ಪರವಾನಿಗೆ ಚಾಲಕ, ಸವಾರರಿಗಾಗಿ ಇರಬೇಕೇ ಹೊರತು ಪೊಲೀಸರಿಗಾಗಿ ಅಲ್ಲ ಎನ್ನುವುದನ್ನು ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕು.

LEAVE A REPLY

Please enter your comment!
Please enter your name here

Most Popular

error: Content is protected !!