ಏಕಬಳಕೆ ಪ್ಲಾಸ್ಟಿಕ್‌ ನಿಷೇಧ ಕುರಿತು ಸಭೆ

ಕಾರ್ಕಳ : ಪ್ಲಾಸ್ಟಿಕ್‌ ಬಳಸದಂತೆ ಅರಿವು ಮೂಡಿಸುವ ನಿಟ್ಟಿನಲ್ಲಿ ಹತ್ತಾರು ಸಭೆ, ಪ್ರಚಾರ ಮಾಡುವ ಬದಲು ಪ್ಲಾಸ್ಟಿಕ್‌ ತಯಾರಿಕಾ ಘಟಕದ ಅನುಮತಿ ರದ್ದುಗೊಳಿಸುವುದು ಸುಲಭ ಉಪಾಯ ಎಂದು ಪುರಸಭಾ ಸದಸ್ಯೆ ಪ್ರತಿಮಾ ಸಲಹೆ ನೀಡಿದರು.
ಅವರು ಜು. 16ರಂದು ಕಾರ್ಕಳ ಪುರಸಭಾ ಸಭಾಂಗಣದಲ್ಲಿ ಏಕಬಳಕೆ (ಎಸ್‌ಯುಪಿ) ನಿಷೇಧಿಸುವ ಕುರಿತು ನಡೆದ ಸಭೆಯಲ್ಲಿ ಮಾತನಾಡಿ, ಪ್ಲಾಸ್ಟಿಕ್‌ ನಿಷೇಧ ಕುರಿತಂತೆ ಹತ್ತಾರು ಸಭೆ, ಪತ್ರಿಕಾ ಪ್ರಕಟನೆ, ಧ್ವನಿವರ್ಧಕದ ಮೂಲಕ ಪ್ರಚಾರ ನಡೆಸಲಾಗುತ್ತಿದೆ. ಇದರ ಬದಲು ಬದಲು ಪ್ಲಾಸ್ಟಿಕ್‌ ಉತ್ಪಾದನಾ ಘಟಕಕ್ಕೆ ಬೀಗ ಜಡಿದಲ್ಲಿ ಸಮಸ್ಯೆ ಸಂಪೂರ್ಣವಾಗಿ ಪರಿಹಾರವಾಗುವುದು ಎಂದರು.
ಪುರಸಭಾ ಮಾಜಿ ಅಧ್ಯಕ್ಷ ಚಂದ್ರಹಾಸ ಸುವರ್ಣ ಮಾತನಾಡಿ, ಪ್ಲಾಸ್ಟಿಕ್‌ ಬಳಕೆ ಬದಲು ಈ ಹಿಂದೆ ಬಳಸುತ್ತಿದ್ದಂತಹ ಬಟ್ಟೆ ಚೀಲ ಬಳಸಬೇಕು. ನಮ್ಮ ಹಿರಿಯರು ಆ ಕಾಲದಲ್ಲಿ ಮೀನು, ತರಕಾರಿ ಪೇಟೆಯಿಂದ ತರಲು ಮಾರ್ಕೆಟ್‌ ಬ್ಯಾಗ್‌ ಬಳಸುತ್ತಿದ್ದರು. ಅದನ್ನೇ ಮತ್ತೆ ಎಲ್ಲರೂ ಉಪಯೋಗಿಸುವಂತಾಗಬೇಕೆಂದರು.
ಪುರಸಭಾ ಮುಖ್ಯಾಧಿಕಾರಿ ಮಾತನಾಡಿ, ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಪ್ಲಾಸ್ಟಿಕ್ ಬ್ಯಾನರ್‌, ಪ್ಲಾಸ್ಟಿಕ್ ಬಂಟಿಂಗ್ಸ್, ಪ್ಲಾಸ್ಟಿಕ್ ಫ್ಲೆಕ್ಸ್ ಪ್ಲೇಟ್‌ಗಳು, ಪ್ಲಾಸ್ಟಿಕ್ ಧ್ವಜಗಳು, ಪ್ಲಾಸ್ಟಿಕ್ ಕಪ್‌ಗಳು, ಪ್ಲಾಸ್ಟಿಕ್ ಸ್ಪೂನ್‌ಗಳು, ಡೈನಿಂಗ್ ಟೇಬಲ್‌ನಲ್ಲಿ ಹರಡುವ ಪ್ಲಾಸ್ಟಿಕ್ ಹಾಳೆಗಳು, ಸ್ಟ್ರಾಗಳನ್ನು ಜು. 1ರಿಂದ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈಗಲೂ ಹಲವಾರು ಮಂದಿ ಹಸಿ ಕಸವನ್ನು ಪ್ಲಾಸ್ಟಿಕ್‌ಗೆ ಕಟ್ಟಿ ಕಸ ವಿಲೇವಾರಿ ವಾಹನಕ್ಕೆ ನೀಡುತ್ತಿದ್ದಾರೆ. ಪ್ಲಾಸ್ಟಿಕ್‌ ಬದಲು ಬಕೆಟ್‌ನಲ್ಲಿ ಹಸಿ ಕಸ ನೀಡುವಂತೆ ಮನವಿ ಮಾಡಿಕೊಂಡರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪುರಸಭಾ ಅ‍ಧ್ಯಕ್ಷೆ ಸುಮಾ ಕೇಶವ್, ಪ್ರತಿ ಮನೆಯಲ್ಲೂ ಹಸಿ ಕಸ, ಒಣ ಕಸ ವಿಂಗಡಿಸಿ ಪುರಸಭಾ ಕಸ ವಿಲೇವಾರಿ ವಾಹನಕ್ಕೆ ನೀಡಿದಲ್ಲಿ ನಿರ್ವಹಣೆ ಸುಲಭವಾಗುವುದು. ಈ ನಿಟ್ಟಿನಲ್ಲಿ ಪುರಸಭಾ ವ್ಯಾಪ್ತಿಯ ಜನತೆ ಸಹಕರಿಸಬೇಕೆಂದರು. ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕಿ ಲೈಲಾ ಥಾಮಸ್‌ ಸರಕಾರದ ಸುತ್ತೋಲೆಯಲ್ಲಿರುವ ನಿಷೇಧಿತ ಪ್ಲಾಸ್ಟಿಕ್‌ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಪುರಸಭಾ ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್‌, ಸ್ಥಾಯಿ ಸಮಿತಿ ಅಧ್ಯಕ್ಷ ಯೋಗೀಶ್‌ ದೇವಾಡಿಗ ಉಪಸ್ಥಿತರಿದ್ದರು. ಸ್ವಚ್ಛ ಕಾರ್ಕಳ ಬ್ರಿಗೇಡ್‌, ಟಿಪ್‌ ಸೆಷನ್‌ ಬ್ರಹ್ಮಾವರ, ಜೈನ್‌ ಬ್ರಿಗೇಡ್‌ ಕಾರ್ಕಳ, ಬಟ್ಟೆ ತಯಾರಿಕಾ ಸಂಸ್ಥೆಯವರು ಸಭೆಯಲ್ಲಿ ಸಲಹೆಗಳನ್ನು ನೀಡಿದರು.





























































































































































































































error: Content is protected !!
Scroll to Top