ಬಾಗಲಕೋಟೆ : ಹಲ್ಲೆ ಸಂತ್ರಸ್ತರು ವಿಪಕ್ಷ ನಾಯಕ ಸಿದ್ದರಾಮಯ್ಯ ನೀಡಿದ ಪರಿಹಾರ ಹಣವನ್ನು ಅವರ ಕಾರಿನ ಮೇಲೆಸೆದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಬಾಗಲಕೋಟೆಯಲ್ಲಿಂದು ಸಂಭವಿಸಿದೆ.
ಕುಲಗೇರಿಯಲ್ಲಿ ಇತ್ತೀಚೆಗೆ ನಡೆದ ಹಲ್ಲೆಯಲ್ಲಿ ಗಾಯಗೊಂಡ ಮಹಮ್ಮದ್ ಹನೀಫ್ ಸೇರಿ ನಾಲ್ವರು ಸಂತ್ರಸ್ತರಿಗೆ ಸಿದ್ದರಾಮಯ್ಯ ಇಂದು ಸಾಂತ್ವನ ಹೇಳಿ ತಲಾ 50 ಸಾವಿರ ರೂ. ಪರಿಹಾರ ಧನ ವಿತರಿಸಿದರು. ಆದರೆ ಹಲ್ಲೆ ನಡೆದಾಗ ಬಂದು ಸಾಂತ್ವನ ಹೇಳದೆ ಈಗ ಬಂದು ಕಾಟಾಚಾರಕ್ಕೆ 50,000 ರೂ. ಕೊಟ್ಟಿರುವುದರಿಂದ ಆಕ್ರೋಶಗೊಂಡ ಸಂತ್ರಸ್ತರು ಸಿದ್ದರಾಮಯ್ಯ ನಿರ್ಗಮಿಸುವಾಗ ಹಣವನ್ನು ಅವರ ಕಾರಿನ ಮೇಲೆಸೆದು ಪ್ರತಿಭಟಿಸಿದರು. ಪರಿಹಾರ ಧನ ವಿತರಿಸಿದ ಬಳಿಕ ಕೆಳಗೆ ಬಂದು ಸಿದ್ದರಾಮಯ್ಯ ನಿರ್ಗಮಿಸುತ್ತಿರುವಾಗ ಸಂತ್ರಸ್ತರು ಅವರ ಬಳಿ ಬಂದು ಮಾತನಾಡಲು ಪ್ರಯತ್ನಿಸಿದರು.ಆದರೆ ಸಿದ್ದರಾಮಯ್ಯ ನಿಲ್ಲದೆ ಮುಂದೆ ಹೋದಾಗ ಹಣವನ್ನು ಕಾರಿನ ಮೇಲೆ ಎಸೆದರು.