ಕಾರ್ಕಳ: ಸಮಾಜದ ಎಲ್ಲಾ ವರ್ಗದವರನ್ನೂ ಗೌರವಿಸಿದಾಗ ಜೀವನದಲ್ಲಿ ಯಶಸ್ಸು ಸಿಗುತ್ತದೆ ಎಂದು ಕಾರ್ಕಳ ಪುರಸಭೆಯ ಸದಸ್ಯ ಶುಭದ ರಾವ್ ಅಭಿಪ್ರಾಯಪಟ್ಟರು. ನೆಹರು ಯುವ ಕೇಂದ್ರ ಸಂಘಟನೆ ಉಡುಪಿ ಮತ್ತು ಯುವಕ ಮಂಡಲ (ರಿ.) ಸಾಣೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಸಾಣೂರು ಯುವಕ ಮಂಡಲದ ಸಭಾಂಗಣದಲ್ಲಿ ನಡೆದ 2021/22 ನೇ ಸಾಲಿನಲ್ಲಿ ದ್ವೀತಿಯ ಪಿಯುಸಿ ಅಂತಿಮ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಅಧಿಕ ಅಂಕ ಪಡೆದ ಸಾಣೂರು ಗ್ರಾಮದ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜು ಸಾಣೂರು ಇಲ್ಲಿನ ವಿದ್ಯಾರ್ಥಿಗಳಿಗೆ ನಡೆದ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಭೆಗಳನ್ನು ಪ್ರೋತ್ಸಾಹಿಸಿದಾಗ ಸಾಧನೆಗೆ ಪ್ರೇರಣೆಯಾಗುತ್ತದೆ. ಸನ್ಮಾನ ಗೌರವಗಳು ಸಮಾಜದಲ್ಲಿ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ಈ ನಿಟ್ಟಿನಲ್ಲಿ 68 ವರ್ಷಗಳ ಇತಿಹಾಸ ಇರುವ ಯುವಕ ಮಂಡಲ ಸಾಣೂರು ಇದರ ಸಾಮಾಜಿಕ ಚಟುವಟಿಕೆ ಮಾದರಿ ಎಂದರು.
ನಿವೃತ್ತ ಪ್ರಾಂಶುಪಾಲೆ ಮಿತ್ರಪ್ರಭಾ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೋಲನ್ನು ಸವಾಲಾಗಿ ಸ್ವೀಕರಿಸಿದಾಗ ಜೀವನದಲ್ಲಿ ಯಶಸ್ಸು ಸಿಗುತ್ತದೆ. ಅಂಕ ಗಳಿಕೆಯೊಂದಿಗೆ ಮಾನವೀಯ ಮೌಲ್ಯಗಳುಳ್ಳ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಪಡೆದ ಶಿಕ್ಷಣಕ್ಕೆ ಅರ್ಥ ಬರುತ್ತದೆ. ಸಮಾಜದಿಂದ ನಾವೇನಾದರೂ ಪಡೆದರೆ ಅದನ್ನು ಒಳ್ಳೆಯ ಕಾರ್ಯಗಳ ಮೂಲಕ ಹಿಂದಿರುಗಿಸುವ ಸ್ವಭಾವವನ್ನು ಸಂಘ ಸಂಸ್ಥೆಗಳ ಮುಖೇನ ಸೇರಿ ಮಾಡಿದಾಗ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು.
ನೆಹರು ಯುವ ಕೇಂದ್ರ ಸಂಘಟನೆಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಲೆಕ್ಕಧಿಕಾರಿ ವಿಷ್ಣುಮೂರ್ತಿ, ಸರಕಾರಿ ಪದವಿ ಪೂರ್ವ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕಿ ಡಾ. ಸುಮತಿ ಪಿ. ಸಾಣೂರು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಧು ಎಂ. ಸಿ., ಮಂಡಲದ ಪ್ರಧಾನ ಮಹಾ ಪೋಷಕ ರಮೇಶ್ ದೇವಾಡಿಗ ನಾರಾವಿ, ಶ್ರೀಧರ್ ನಾಯ್ಕ್ ನಿಟ್ಟೆ, ಸುದೀಪ್ ಶೆಟ್ಟಿ ಸಾಣೂರು ಪೊರ್ಲುಟ್ಟುಗುತ್ತು ಉಪಸ್ಥಿತರಿದ್ದರು.18 ವಿದ್ಯಾರ್ಥಿಗಳು ಗೌರವ ಅಭಿನಂದನೆ ಪಡೆದುಕೊಂಡರು. ವಿದ್ಯಾರ್ಥಿಗಳಾದ ಸ್ನೇಹಾ ಎಸ್. ಮತ್ತು ಛಾಯಾ ಸಿ. ಪೈ ಅನಿಸಿಕೆ ಹಂಚಿಕೊಂಡರು. ಯುವಕ ಮಂಡಲದ ಅಧ್ಯಕ್ಷ ಪ್ರಸಾದ್ ಪೂಜಾರಿ ಸ್ವಾಗತಿಸಿ, ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಕಾರ್ಯದರ್ಶಿ ಮೋಹನ್ ಶೆಟ್ಟಿ ನಿರೂಪಿಸಿ, ಸಮಿತಿ ಸದಸ್ಯ ಶುಭಕರ್ ಶೆಟ್ಟಿ ವಂದಿಸಿದರು.
ಪ್ರತಿಭೆಗಳನ್ನು ಪ್ರೋತ್ಸಾಹಿಸಿದಾಗ ಸಾಧನೆಗೆ ಪ್ರೇರಣೆ : ಶುಭದ ರಾವ್
