Wednesday, August 17, 2022
spot_img
Homeಸ್ಥಳೀಯ ಸುದ್ದಿಮುಸ್ಲಿಂ ಮಹಿಳೆಯರ ವಿವಾಹದ ಹಕ್ಕುಗಳ ಸಂರಕ್ಷಣೆ ಅಧಿನಿಯಮ 2019 – ಕಾನೂನು ಮಾಹಿತಿ

ಮುಸ್ಲಿಂ ಮಹಿಳೆಯರ ವಿವಾಹದ ಹಕ್ಕುಗಳ ಸಂರಕ್ಷಣೆ ಅಧಿನಿಯಮ 2019 – ಕಾನೂನು ಮಾಹಿತಿ

ಭಾರತ ದೇಶದ ವಿವಾಹಿತ ಮುಸ್ಲಿಂ ಮಹಿಳೆಯರ ವಿವಾಹದ ಹಕ್ಕಿನ ರಕ್ಷಣೆಗಾಗಿ ಮತ್ತು ವಿವಾಹಿತ ಮುಸ್ಲಿಂ ಮಹಿಳೆಯರ ಗಂಡಂದಿರು ತಮ್ಮ ಇಚ್ಚಾನುಸಾರ ತಲಾಕ್ ಮೂಲಕ ವಿವಾಹ ವಿಚ್ಛೇದನ ನೀಡುವುದನ್ನು ನಿಷೇಧಿಸಲು ಮತ್ತು ಇವುಗಳಿಗೆ ಸಂಬಂಧಪಟ್ಟ ಅಥವಾ ಪ್ರಾಸಂಗಿಕವಾದ ವಿಷಯಗಳಿಗೆ ಉಪಬಂಧ ಕಲ್ಪಿಸುವ ನಿಟ್ಟಿನಲ್ಲಿ ಭಾರತ ಸರಕಾರವು ದಿನಾಂಕ 19-09-2018 ರಿಂದ ಜಾರಿಗೆ ಬರುವಂತೆ “ಮುಸ್ಲಿಂ ಮಹಿಳೆಯರ ವಿವಾಹದ ಹಕ್ಕುಗಳ ಸಂರಕ್ಷಣೆ ಅಧಿನಿಯಮ 2019” ಎಂಬ ವಿಶೇಷವಾದ ಕಾನೂನನ್ನು ಜಾರಿಗೆ ತಂದಿರುತ್ತದೆ.
ಈ ಕಾನೂನಿನ ಪ್ರಕಾರ ಯಾವುದೇ ಮುಸ್ಲಿಂ ಪತಿಯು ತನ್ನ ಪತ್ನಿಗೆ ಬಾಯ್ದೆರೆಯಾಗಿ ಅಂದರೆ ಮಾತುಗಳಲ್ಲಿ ಅಥವಾ ಲಿಖಿತ ಪದಗಳಲ್ಲಿ ಅಂದರೆ ಬರವಣಿಗೆ ಮೂಲಕ ಅಥವಾ ವಿದ್ಯುನ್ಮಾನ ನಮೂನೆಯಲ್ಲಿ ಅಥವಾ ಯಾವುದೇ ಇತರ ರೀತಿಯಲ್ಲಾದರೂ ಉಚ್ಚರಿಸಿದ ತಲಾಖ್ ಅನೂರ್ಜಿತ ಹಾಗೂ ಕಾನೂನು ಬಾಹಿರ ಆಗುತ್ತದೆ ಮತ್ತು ಈ ರೀತಿಯ ತಲಾಖ್ ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗುತ್ತದೆ. ಯಾರೇ ಮುಸ್ಲಿಂ ಪತಿಯು ಆತನ ಪತ್ನಿಗೆ ತಲಾಖ್ ಎಂತ ಉಚ್ಚರಿಸಿದರೆ ಆತನು ಮೂರು ವರ್ಷಗಳಿಗೆ ವಿಸ್ತರಿಸಬಹುದಾದ ಅವಧಿಯ ಜೈಲುಶಿಕ್ಷೆಗೆ ಮತ್ತು ದಂಡನೆ ಪಾವತಿಗೆ ಗುರಿಯಾಗಬೇಕಾಗುತ್ತದೆ.
ಒಂದು ವೇಳೆ ಮುಸ್ಲಿಂ ಪತಿಯು ಆತನ ಮುಸ್ಲಿಂ ಪತ್ನಿಗೆ ಈ ಕಾನೂನು ಜಾರಿಗೆ ಬರುವುದಕ್ಕಿಂತ ಮುಂಚೆಯೇ ತಲಾಖ್ ನೀಡಿ ಆಕೆಯನ್ನು ವಿಚ್ಛೇದಿಸಿದಲ್ಲಿ ವಿಚ್ಛೇದನೆ ಹೊಂದಿರುವ ಅಂತಹ ಮುಸ್ಲಿಂ ಮಹಿಳೆಯು ತನ್ನ ಮತ್ತು ಮಕ್ಕಳ ಜೀವನ ನಿರ್ವಹಣೆ ಬಗ್ಗೆ ಸೂಕ್ತ ಮೊಬಲಗನ್ನು ಜೀವನಾಂಶವನ್ನು ಆಕೆಯ ಪತಿಯಿಂದ ಕಾನೂನು ಬದ್ಧವಾಗಿ ವಸೂಲು ಮಾಡುವ ಹಕ್ಕನ್ನು ಹೊಂದಿರುತ್ತಾಳೆ. ಈ ಬಗ್ಗೆ ಆಕೆಯು ಸಂಬಂಧಪಟ್ಟ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ತನ್ನ ಪತಿಯ ವಿರುದ್ಧ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
ವಿವಾಹಿತ ಮುಸ್ಲಿಂ ಮಹಿಳೆಯು ತನ್ನ ಗಂಡನಿಂದ ವಿಚ್ಛೇದಿಸಲ್ಪಟ್ಟ ಸಂದರ್ಭದಲ್ಲಿ ಆಕೆ ನ್ಯಾಯಾಲಯದ ಮುಖಾಂತರ ತನ್ನ ಗಂಡನ ಬಳಿ ಇರುವ ಅಪ್ರಾಪ್ತ ವಯಸ್ಕ ಮಕ್ಕಳನ್ನು ತನ್ನ ಅಭಿರಕ್ಷೆಗೆ ಅಂದರೆ ಕಸ್ಟಡಿಗೆ ತೆಗೆದುಕೊಳ್ಳುವ ಕಾನೂನುಬದ್ಧ ಹಕ್ಕನ್ನು ಹೊಂದಿರುತ್ತಾಳೆ. ತಲಾಖ್ ಗೆ ಸಂಬಂಧಪಟ್ಟ ಅಪರಾಧದ ಕುರಿತು ಸಂಬಂಧಿತ ಮುಸ್ಲಿಂ ಮಹಿಳೆಯೇ ಸ್ವತಃ ಪೋಲೀಸರಿಗೆ ದೂರು ನೀಡಬೇಕೆನ್ನುವ ಕಡ್ಡಾಯವಾದ ನಿಯಮವಿರುವುದಿಲ್ಲ. ಆಕೆಯ ಪರವಾಗಿ ತಲಾಖ್ ನ ಮಾಹಿತಿ ಹೊಂದಿರುವ ಅವಳ ಯಾರಾದರೂ ಸಂಬಂಧಿಕರು ಸಹಾ ದೂರನ್ನು ತಲಾಖ್ ಅಪರಾಧಕ್ಕೆ ಸಂಬಂಧಪಟ್ಟ ಸರಹದ್ದಿನ ವ್ಯಾಪ್ತಿಯ ಪೋಲೀಸ್ ಠಾಣೆಗೆ ಮಾಹಿತಿಯನ್ನು ನೀಡಬಹುದು. ಈ ರೀತಿಯಾಗಿ ಮಾಹಿತಿಯನ್ನು ಪಡೆಯುವ ಪೋಲೀಸ್ ಠಾಣೆಯ ಅಧಿಕಾರಿಯು ತಲಾಖ್ ನೀಡಿದ ಆರೋಪಿತ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿ ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಬೇಕಾಗುತ್ತದೆ. ಈ ರೀತಿಯಾಗಿ ಬಂಧಿಸಲ್ಪಟ್ಟ ವ್ಯಕ್ತಿಯು ಜಾಮೀನಿಗಾಗಿ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ ಸಂದರ್ಭದಲ್ಲಿ ನ್ಯಾಯಾಧೀಶರು ಆತನಿಗೆ ಜಾಮೀನು ಮಂಜೂರು ಮಾಡುವ ಮೊದಲು ತಲಾಖ್ ಪಡೆದ ಆತನ ಪತ್ನಿಯ ಅಹವಾಲನ್ನು ಕೇಳಿ ಆ ನಂತರ ಬಂಧಿಸಲ್ಪಟ್ಟ ವ್ಯಕ್ತಿಗೆ ಜಾಮೀನು ನೀಡಲು ಸಾಕಷ್ಟು ಕಾರಣಗಳಿವೆಯೋ ಎಂಬ ಬಗ್ಗೆ ನಿರ್ಧರಿಸಿ ಆ ನಂತರ ಆತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬಹುದಾಗಿರುತ್ತದೆ.

ಕೆ. ವಿಜೇಂದ್ರ ಕುಮಾರ್,
ಹಿರಿಯ ವಕೀಲರು, ಕಾರ್ಕಳ
ಮೊ: 98452 32490/ 96116 82681

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!