ಕಾರ್ಕಳ : ನಗರದ ಬಂಡಿಮಠದಿಂದ ಬಂಗ್ಲೆಗುಡ್ಡೆ ಜಂಕ್ಷನ್ ಮುಖ್ಯರಸ್ತೆ ಬದಿ ಪೊದೆಯಿಂದ ಆವೃತ್ತವಾಗಿದ್ದರೆ, ಚರಂಡಿಯಲ್ಲಿ ಹೂಳು ತುಂಬಿ ಮಳೆ ನೀರು ಹರಿದು ಹೋಗದಂತಾಗಿದೆ. ಈ ರಸ್ತೆಯ ಒಂದು ಬದಿಯು ಪುರಸಭೆಗೊಳಪಟ್ಟಿದ್ದರೆ, ಮತ್ತೊಂದು ಬದಿ ಕುಕ್ಕುಂದೂರು ಪಂಚಾಯತ್ ವ್ಯಾಪ್ತಿಯಲ್ಲಿದೆ.
ಬಂಡಿಮಠದಿಂದ ಬಂಗ್ಲೆಗುಡ್ಡೆ ರಸ್ತೆಯ ಎಡಬದಿಯು ಕುಕ್ಕುಂದೂರು ಪಂಚಾಯತ್ಗೆ ಸೇರಿದ್ದಾಗಿದೆ. ಈ ಭಾಗದಲ್ಲಿ ಚರಂಡಿಯಿದ್ದರೂ ಅದರಲ್ಲಿ ತುಂಬಿದ ಹೂಳು ತೆಗೆಯದ ಕಾರಣ ಮಳೆ ನೀರು ರಸ್ತೆಯಲ್ಲೇ ಹರಿದುಹೋಗುತ್ತಿದೆ. ಚರಂಡಿ ಸುತ್ತ ಪೊದೆಯೂ ಆವೃತ್ತವಾಗಿದ್ದು ಸಂಚಾರಕ್ಕೆ ತೊಡಕಾಗಿ ಪರಿಣಮಿಸಿದೆ.
ಪುರಸಭಾ ವ್ಯಾಪ್ತಿಯ ರಸ್ತೆ ಬದಿ ಚರಂಡಿಯೇ ಇಲ್ಲ. ರಸ್ತೆಯಲ್ಲೇ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿರುವುದರಿಂದ ವಾಹನ ಸಾಗುವಾಗ ಕಾರಂಜಿಯಂತೆ ಚಿಮ್ಮುತ್ತಿದೆ ನೀರು. ಇದರಿಂದ ಪಾದಚಾರಿಗಳಿಗೂ ಗೋಳು ತಪ್ಪಿದ್ದಲ್ಲ.
ಸೊಳ್ಳೆ ಕಾಟ
ಚರಂಡಿಯಲ್ಲಿ ನಿಂತ ನೀರು ಸೊಳ್ಳೆ ಉತ್ಪತ್ತಿಯ ತಾಣವಾಗುತ್ತಿದೆ. ಹೀಗಾಗಿ ಸ್ಥಳೀಯವಾಗಿ ಸೊಳ್ಳೆ ಕಾಟವೂ ಅಧಿಕ. ಸೊಳ್ಳೆ ಕಡಿತದಿಂದ ಡೆಂಗ್ಯೂ, ಮಲೇರಿಯಾ ಮತ್ತು ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಿದೆ. ಸಂಬಂಧಪಟ್ಟವರು ಇತ್ತ ಗಮನಹರಿಸಿ ರಸ್ತೆ ಬದಿ ತುಂಬಿರುವ ಪೊದೆ, ಚರಂಡಿ ಹೂಳು ತೆಗೆಯುವ ಕಾರ್ಯ ಮಾಡಬೇಕಾಗಿದೆ.
