ಕಾರ್ಕಳ : ಭಾರಿ ಮಳೆಗೆ ಕಾರ್ಕಳ ನಗರದಲ್ಲಿ ಒಳಚರಂಡಿ ನೀರಿನೊಂದಿಗೆ ಚರಂಡಿ ನೀರು ಸೇರಿ ಮ್ಯಾನ್ ಹೋಲ್ ನಲ್ಲಿ ಕಾರಂಜಿಯಂತೆ ಚಿಮ್ಮುತ್ತಿರುವುದು ಒಂದೆಡೆಯಾದರೆ ಅದೇ ಮಲಿನ ನೀರು ನಗರದ ಹಲವರ ಮನೆಬಾವಿಗೆ ಹರಿಯುತ್ತಿರುವುದು ಮತ್ತೊಂದೆಡೆ. ಕೆಲವು ಮನೆ ಬಾವಿಗೆ ನೇರವಾಗಿ ಈ ಮಲಿನ ನೀರು ಹರಿದರೆ, ಹತ್ತಾರು ಮನೆಗಳಿಗೆ ಒರತೆ ರೀತಿಯಲ್ಲಿ ಸೇರುತ್ತಿದೆ.
ಪಾದಚಾರಿಗಳಿಗೂ ತೊಂದರೆ
ಬಂಡಿಮಠ, ಮಹಾಲಕ್ಷ್ಮೀ ಓಣಿ, ಕಾರ್ಕಳ ನರ್ಸಿಂಗ್ ಹೋಂ ಬಳಿ ನೀರು ಚಿಮ್ಮುತ್ತಿದೆ. ಮುಖ್ಯರಸ್ತೆಯಲ್ಲೇ ನೀರು ಹರಿಯುವುದರಿಂದ ವಾಹನ ಸಾಗುವ ಸಂದರ್ಭ ಪಾದಚಾರಿಗಳಿಗೆ ಮಲಿನ ನೀರಿನ ಸಿಂಚನವಾಗುತ್ತಿದೆ. ಸರ್ವಜ್ಞ ವೃತ್ತ ಬಳಿಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದೆ.
ದಶಕದ ಸಮಸ್ಯೆ
ಕಾರ್ಕಳ ನಗರದಲ್ಲಿ ಒಳಚರಂಡಿ ಸಮಸ್ಯೆ ಇಂದು ನಿನ್ನೆಯದಲ್ಲ. ದಶಕಗಳಿಂದ ಈ ಸಮಸ್ಯೆಯಿದೆ. ಕಳೆದ ವರ್ಷ ಯುಜಿಡಿ ಕಾಮಗಾರಿಗೆ ಚಾಲನೆ ದೊರೆತಿದ್ದು, ಕಾಮಗಾರಿ ಪೂರ್ಣವಾದ ಬಳಿಕ ಸರಿಯಾದೀತು ಎನ್ನುವ ನಿರೀಕ್ಷೆ ನಗರವಾಸಿಗಳಲ್ಲಿತ್ತು. ಆದರೆ, ಒಳಚರಂಡಿಗೆ ಚರಂಡಿ ನೀರು ಸಂಪರ್ಕದಿಂದ ಸಮಸ್ಯೆ ಹಾಗೆಯೇ ಮುಂದುವರಿದಿದೆ. ಈ ನೀರಿನ ಬಳಕೆಯಿಂದ ಅನೇಕರು ಅಸ್ವಸ್ಥರಾಗಿದ್ದಾರೆ.
ಶಾಶ್ವತ ಪರಿಹಾರವಾಗಲಿ
ಇಲ್ಲಿನ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ, ಪುರಸಭೆ ಒಂದು ನಿರ್ಧಾರಕ್ಕೆ ಬರುವುದು ಅಗತ್ಯ. ಮನೆ, ವಾಣಿಜ್ಯ ಕಟ್ಟಡಗಳ ಚರಂಡಿ ಸಂಪರ್ಕವನ್ನು ಒಳಚರಂಡಿಗೆ ಮಾಡದಂತೆ ಮಾಡಬೇಕಿದೆ. ಹೀಗಿರುವ ಸಂಪರ್ಕವನ್ನು ಕಡಿತಗೊಳಿಸುವ ಕಾರ್ಯವೂ ಆಗಬೇಕಿದೆ.