Saturday, October 1, 2022
spot_img
Homeಸುದ್ದಿಸನ್ಮಾರ್ಗ ತೋರಿದ ಆಧ್ಯಾತ್ಮಿಕ, ಶೈಕ್ಷಣಿಕ ಗುರುವಿಗೆ ನಮನ…

ಸನ್ಮಾರ್ಗ ತೋರಿದ ಆಧ್ಯಾತ್ಮಿಕ, ಶೈಕ್ಷಣಿಕ ಗುರುವಿಗೆ ನಮನ…

ಆಷಾಢ ಮಾಸದ ಹುಣ್ಣಿಮೆಯ ದಿನವನ್ನು ವ್ಯಾಸ ಪೂಜೆಯ ದಿನ ಎಂದು ಕರೆಯಲಾಗುತ್ತದೆ. ಸಾಂಪ್ರದಾಯಿಕವಾಗಿ ಈ ದಿನವನ್ನು ಗುರುಪೂಜೆಗಾಗಿ ಮೀಸಲಿಡಲಾಗಿದೆ. ಈ ದಿನ ಶಿಷ್ಯರು ಗುರುಗಳಿಗೆ ಪೂಜೆ ಅಥವಾ ಗೌರವ ಸಲ್ಲಿಸುತ್ತಾರೆ. ಗುರುವು ತನ್ನ ಜ್ಞಾನ ಮತ್ತು ಬೋಧನೆಗಳಿಂದ ಶಿಷ್ಯರನ್ನು ಪ್ರಬುದ್ಧಗೊಳಿಸುವ ಆಧ್ಯಾತ್ಮಿಕ ಮಾರ್ಗದರ್ಶಿಯನ್ನು ಸೂಚಿಸುತ್ತದೆ.
ವ್ಯಾಸ ಪೂಜೆಯನ್ನು ವ್ಯಾಸ ಪೂರ್ಣಿಮಾ ಎಂದೂ ಕರೆಯುತ್ತಾರೆ ಮತ್ತು ಈ ದಿನವನ್ನು ವೇದವ್ಯಾಸರ ಜನ್ಮದಿನವೆಂದು ಸ್ಮರಿಸಲಾಗುತ್ತದೆ. ವೇದವ್ಯಾಸರು ಹಿಂದೂ ಮಹಾಕಾವ್ಯವಾದ ಮಹಾಭಾರತದ ಲೇಖಕ ಮತ್ತು ಪಾತ್ರ.
ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಅಗ್ರಸ್ಥಾನ ನೀಡಲಾಗಿದ್ದು, ಗುರು ಪೂರ್ಣಿಮೆ ಅಥವಾ ವ್ಯಾಸ ಪೂರ್ಣಿಮೆಯನ್ನು ವಿಶೇಷ ಮಹತ್ವ ನೀಡಲಾಗಿರುವ ಗುರು ಪರಂಪರೆಯನ್ನು ಸ್ಮರಿಸಿ ಪೂಜಿಸುವ ದಿನವನ್ನಾಗಿ ಆಚರಿಸಲಾಗುತ್ತದೆ.
ವೇದಗಳನ್ನು ವಿಂಗಡಿಸಿ ಮಾನವ ಕುಲವನ್ನು ಉದ್ಧರಿಸುವುದಕ್ಕಾಗಿ ಸಾಕ್ಷಾತ್ ವಿಷ್ಣುವೇ ವ್ಯಾಸರ ರೂಪದಲ್ಲಿ ಅವತರಿಸುತ್ತಾನೆ, ವೇದಗಳನ್ನು ವಿಂಗಡಿಸಿದ ಕಾರಣದಿಂದ ವ್ಯಾಸರಿಗೆ ವೇದವ್ಯಾಸ ಎಂಬ ಹೆಸರು ಬಂದಿದ್ದು, ವೇದವ್ಯಾಸರು ಅವತರಿಸಿದ ಆಷಾಢ ಮಾಸದ ಹುಣ್ಣಿಮೆಯ ದಿನವನ್ನೇ ವ್ಯಾಸ ಪೂರ್ಣಿಮೆ ಅಥವಾ ಗುರು ಪೂರ್ಣಿಮೆ. ಈ ಬಾರಿ ಜುಲೈ 5 ರಂದು ವ್ಯಾಸ ಪೂರ್ಣಿಮೆಯನ್ನು ಆಚರಿಸಲಾಗಿದೆ.ಆದರೆ ಕೆಲವರು ವ್ಯಾಸಪೂಜೆ ಅಥವಾ ಗುರುಪೂಜೆಯನ್ನು ಜ.14ರಂದು ಮಾಡುತ್ತಾರೆ.
ವೇದ, ಪುರಾಣ, ಶಾಸ್ತ್ರಾದಿಗಳೆಲ್ಲವೂ ಓರ್ವ ವ್ಯಕ್ತಿಗೆ ಗುರುವಿನ ಮಾರ್ಗದರ್ಶನ ಹಾಗೂ ಅಗತ್ಯವನ್ನು ಸ್ಪಷ್ಟವಾಗಿ ತಿಳಿಸಿದ್ದು ಗುರುವಿನ ಮಹಿಮೆಯನ್ನು ಕೊಂಡಾಡಿವೆ. ಭಾರತದಲ್ಲಿ ಈ ವರೆಗೂ ಅದೆಷ್ಟೋ ಗುರುಗಳು ಆಗಿಹೋಗಿದ್ದಾರೆ. ಆದರೆ ವ್ಯಾಸ ಪೂರ್ಣಿಮೆಯಂದೇ ಗುರುವನ್ನು ಆರಾಧಿಸಲು ಮುಖ್ಯ ಕಾರಣವೇನೆಂದರೆ ‘ವ್ಯಾಸಾಯ ವಿಷ್ಣುರೂಪಾಯ ವ್ಯಾಸರೂಪಾಯ ವಿಷ್ಣವೇ, ನಮೋ ವೈ ಬ್ರಹ್ಮನಿಧಯೇ ವಾಸಿಷ್ಠಾಯ ನಮೋ ನಮಃ’ ಎಂದು ಹೇಳಿರುವಂತೆ ವ್ಯಾಸರು ವೇದಗಳನ್ನು ನೀಡಿದ ಸಾಕ್ಷಾತ್ ವಿಷ್ಣುವಿನ ಅವತಾರವಾಗಿರುವುದರಿಂದ.
ಆಷಾಢ ಹುಣ್ಣಿಮೆಯಂದು ವ್ಯಾಸಪೂಜೆ ಮಾಡುವ ಮೂಲಕ ಸನ್ಯಾಸಿಗಳು ಚಾತುರ್ಮಾಸ್ಯ ವ್ರತದ ಸಂಕಲ್ಪ ಮಾಡುವುದು ವ್ಯಾಸ ಪೂರ್ಣಿಮೆ ಅಥವಾ ಗುರು ಪೂರ್ಣಿಮೆಯ ಮತ್ತೊಂದು ವಿಶೇಷ. ಪರಿವ್ರಾಜಕರಾಗಿರುವ ಸನ್ಯಾಸಿಗಳು ಒಂದು ಪಕ್ಷವನ್ನು ಒಂದು ಮಾಸದಂತೆ ಗಣಿಸಿ ಒಟ್ಟು ಎರಡು ತಿಂಗಳುಗಳಲ್ಲಿ ಚಾತುರ್ಮಾಸ್ಯವನ್ನು ಪೂರೈಸುವ ಪರಿಪಾಠ ಇದೆ. ಚಾತುರ್ಮಾಸ್ಯಕ್ಕೆ ಸಂಕಲ್ಪಿಸಿದ ದಿನದಿಂದ ಸನ್ಯಾಸಿಗಳು ಎರಡು ತಿಂಗಳ ಕಾಲ(ಅಧಿಕ ಮಾಸ ಬಂದಲ್ಲಿ ಮೂರು ತಿಂಗಳು) ತನಕ ಸಂಚಾರ ಕೈಗೂಳ್ಳದೆ, ವ್ರತ ಕೈಗೊಂಡ ಕ್ಷೇತ್ರದ ವ್ಯಾಪ್ತಿಯಲ್ಲೇ ವ್ರತಕಾಲವನ್ನು ಕಳೆಯುತ್ತಾರೆ. ವ್ರತಸಮಾಪ್ತಿಯ ಬಳಿಕ ಸೀಮೋಲ್ಲಂಘನ ಮಾಡಿ ಮತ್ತೆ ಸಂಚಾರ ಪ್ರಾರಂಭ ಮಾಡುತ್ತಾರೆ.
ಆಷಾಢ ಶುದ್ಧ ಹುಣ್ಣಿಮೆಯ ದಿನ ಗುರು ಪೂರ್ಣಿಮಾ ಹಬ್ಬವಾಗಿದ್ದು, ದೇಶದೆಲ್ಲೆಡೆ ಜಾತಿ, ಮತ, ಪಂಥಗಳ ಬೇಧವಿಲ್ಲದೆ ಾಚರಿಸುತ್ತಾರೆ. ಟೀಚರ್ಸ್ ಡೇ ಆಚರಣೆ ಬೇರೆ ಗುರು ಪೂರ್ಣಿಮೆ ಬೇರೆ.. ಗುರು ಪೂರ್ಣಿಮಾ ದಿನದಂದು ಸನ್ಮಾರ್ಗ ತೋರಿದ ಆಧ್ಯಾತ್ಮಿಕ ಹಾಗೂ ಶೈಕ್ಷಣಿಕ ಗುರುಗಳನ್ನು ವಂದಿಸಲಾಗುತ್ತದೆ.
“ಗು” ಎಂದರೆ ಕತ್ತಲು ಅಥವಾ ಅಜ್ಞಾನ , “ರು” ಎಂದರೆ ಕತ್ತಲನ್ನು ತೊಲಗಿಸುವವನು ಎಂದರ್ಥ. ಅಜ್ಞಾನ, ಅಂಧಕಾರವನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನು ನೀಡುವವನು ‘ಗುರು’ ಎನಿಸಿಕೊಳ್ಳುತ್ತಾನೆ. ಬೌದ್ಧ ಧರ್ಮಗುರು ಗೌತಮ ಬುದ್ಧ ಹಾಗೂ ಮಹಾಭಾರತದ ಕರ್ತೃ ವೇದವ್ಯಾಸ ಮಹರ್ಷಿ ಇಬ್ಬರು ಇದೇ ದಿನದಂದು ಜನಿಸಿರುವುದು ವಿಶೇಷ.
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣಾ ಮುಕುತಿ ಎಂದು ಪುರಂದಾಸರು ಹೇಳಿದ್ದಾರೆ. ಹೀಗಾಗಿ ಈ ದಿನದಂದು ಹಲವೆಡೆ ಗುರುಕೃಪೆ, ಆಶೀರ್ವಾದ ಬೇಡಿ ಗುರುಗಳೇ ಪ್ರತ್ಯಕ್ಷ ದೈವ ಎಂದು ಪೂಜಿಸುವುದನ್ನು ಕಾಣಬಹುದು.
ಜನರಿಗೆ ವಿದ್ಯೆ ಮತ್ತು ಜ್ಞಾನದ ಬೆಳಕನ್ನು ನೀಡಿ ಮನಸ್ಸನ್ನು ಶುದ್ದಗೊಳಿಸಿ ಉತ್ತಮ ಮಾರ್ಗ ತೋರುವ ಗುರುಗಳನ್ನು ಶ್ರದ್ದಾ ಭಕ್ತಿಯಿಂದ ಗೌರವಿಸುವ ದಿನವಾದ ಇಂದು ಶಿಷ್ಯರೆಲ್ಲಾ ಸೇರಿ ಗುರುಗಳನ್ನು ಪೂಜಿಸಿ ಗೌರವಿಸಿ ಭಕ್ತಿ ಸಮರ್ಪಿಸುವುದು ಭಾರತೀಯ ಪರಂಪರೆಯ ಅವಿಭಾಜ್ಯ ಅಂಗ.
ಸಪ್ತಋಷಿ

LEAVE A REPLY

Please enter your comment!
Please enter your name here

Most Popular

error: Content is protected !!