Saturday, October 1, 2022
spot_img
Homeಸುದ್ದಿಕರಾವಳಿಯನ್ನು ಬೆಚ್ಚಿ ಬೀಳಿಸಿದ ಬೈಂದೂರು ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌

ಕರಾವಳಿಯನ್ನು ಬೆಚ್ಚಿ ಬೀಳಿಸಿದ ಬೈಂದೂರು ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌

ಬೈಂದೂರು : ಪಡುವರಿ ಗ್ರಾಮದ ಹೇನ್ಬೇರುವಿನಲ್ಲಿ ಬುಧವಾರ ಫೋರ್ಡ್‌ ಕಂಪನಿಯ ಐಕಾನ್ ಕಾರೊಂದು ಸಂಪೂರ್ಣವಾಗಿ ಸುಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದು, ಕಾರಿನ ಹಿಂಬದಿಯ ಸೀಟಿನಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ದೇಹ ಗೋಚರಿಸಿತ್ತು. ಈ ವೇಳೆ ಕಾರಿನ ಎಲ್ಲ ಡೋರ್ ಗಳು ಲಾಕ್ ಆಗಿತ್ತು. ಕಾರಿನ ಸ್ವಲ್ಪ ದೂರದಲ್ಲಿ ಪೆಟ್ರೋಲ್ ತುಂಬಿಸಿದ್ದ ಪ್ಲಾಸ್ಟಿಕ್ ಬಾಟಲಿಯೂ ಇತ್ತು. ಬೈಂದೂರು ಪೊಲೀಸ್‌ ಠಾಣೆಯಲ್ಲಿ ಈ ಕುರಿತು ಜು. 13ರಂದು ಯುಡಿಆರ್ ಪ್ರಕರಣ ದಾಖಲಾಗಿತ್ತು.

ಕಾರು ಹಾಗೂ ಅದರೊಳಗಿದ್ದ ವ್ಯಕ್ತಿಯೊಬ್ಬ ಸಂಪೂರ್ಣ ಸುಟ್ಟು ಹೋದ ಪ್ರಕರಣಕ್ಕೆ ಇದೀಗ ಟ್ವಿಸ್ಟ್‌ ಸಿಕ್ಕಿದೆ. ಸುಟ್ಟು ಹೋದ ಕಾರಿನ ಚಾಸಿಸ್‌ (chassis) ನಂಬರ್ ಅನ್ನು ಪತ್ತೆ ಮಾಡಲಾಗಿದ್ದು, ಕಾರು‌ ಕಾರ್ಕಳ ತಾಲೂಕು ಮಾಳ ಗ್ರಾಮದ ಸದಾನಂದ ಶೇರೆಗಾರ್ (54)‌ ಎಂಬವನಿಗೆ ಸೇರಿದ್ದು ಎಂದು ಗುರುತಿಸಲಾಗಿದೆ. ಈತ ಶಿರ್ವ ಮಂಚಕಲ್ ನಲ್ಲಿ ಫ್ಲ್ಯಾಟ್ ಹೊಂದಿದ್ದಾನೆನ್ನಲಾಗಿದೆ. ಅಲ್ಲದೇ ಈ ಕಾರು ಮಂಗಳವಾರ ರಾತ್ರಿ 12.30ಕ್ಕೆ ಸಾಸ್ತಾನ ಟೋಲ್ ಗೇಟಿನಲ್ಲಿ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಸಾಗಿರುವುದು ತಿಳಿದು ಬಂದಿದೆ. ಸಾಸ್ತಾನ ಟೋಲ್ ಗೇಟ್ ನಲ್ಲಿ ಮಹಿಳೆಯೊಬ್ಬಳು ಕಾರಿನಿಂದ ಇಳಿದು ಬಂದು ಟೋಲ್ ನೀಡಿರುವ ದೃಶ್ಯವೂ ಸೆರೆಯಾಗಿದೆ.

ಘೋರ ಕೃತ್ಯ
ಜಾಗ ಹಾಗೂ ಹಣದ ವಿಚಾರದಲ್ಲಿನ ತನ್ನ ಅವ್ಯವಹಾರವನ್ನು ಮುಚ್ಚಿಹಾಕಲು ಆತ್ಮಹತ್ಯೆಗೆ ಸಾವಿಗೀಡಾದಂತೆ ಬಿಂಬಿಸುವ ಉದ್ದೇಶದಿಂದ ಸದಾನಂದ ಶೇರಿಗಾರ್‌ ಕಾರ್ಕಳ ಪುರಸಭಾ ವ್ಯಾಪ್ತಿಯ ಕಾಲೋನಿ ನಿವಾಸಿಯಾಗಿದ್ದ ಆನಂದ ದೇವಾಡಿಗ (54) ಎಂಬವರನ್ನು ಮೇ.12 ರಂದು ತನ್ನ ಆಪ್ತೆಯಾಗಿದ್ದ ಶಿಲ್ಪಾ (34) ಸಹಕಾರದೊಂದಿಗೆ ಕಾರ್ಕಳದ ಬಾರೊಂದಕ್ಕೆ ಕರೆಯಿಸಿ ಕಂಠಪೂರ್ತಿ ಕುಡಿಸಿದ್ದ. ರಾತ್ರಿಯಾಗುತ್ತಿದ್ದಂತೆ ಆತನಿಗೆ ನಿದ್ರೆ ಮಾತ್ರೆ ನೀಡಿ, ಬೈಂದೂರು ಹೇನ್ಬೆರುವಿಗೆ ಕರೆದುಕೊಂಡು ಹೋಗಿ ಕಾರಿನಲ್ಲೆ ಬೆಂಕಿ ಹಚ್ಚಿ ಕೊಲೆಗೈಯುವ ಮೂಲಕ ಘೋರ ಕೃತ್ಯವೆಸಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಸದಾನಂದ ಶೇರಿಗಾರ್‌, ಕೃತ್ಯಕ್ಕೆ ಸಹಕರಿಸಿದ ಮಹಿಳೆ ಶಿಲ್ಪಾ (34) ಎಂಬಾಕೆಯನ್ನು ಗುರುವಾರ ಮೂಡಬಿದ್ರೆಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆನಂದ ಅವರ ಮಗ ಮುಂಬೈಯಲ್ಲಿ ಉದ್ಯೋಗದಲ್ಲಿದ್ದು, ತಾಯಿ ಬೆಂಗಳೂರಿನ ಮಗಳ ಮನೆಗೆ ತೆರಳಿದ್ದರು ಎಂದು ಸ್ಥಳೀಯರು ತಿಳಿಸಿರುತ್ತಾರೆ

ವಿವಾಹಿತನಾಗಿದ್ದ ಸದಾನಂದ ಶೇರಿಗಾರ್‌ ಈ ಹಿಂದೆ ಕಾರ್ಕಳ ತಾಲೂಕು ಕಚೇರಿಯಲ್ಲಿ ಲೈಸನ್ಸ್ಡ್‌ ಸರ್ವೆಯರ್‌ ಆಗಿದ್ದ. ಈ ವೇಳೆ (2019) ಸುಳ್ಳು ದಾಖಲೆ ಸೃಷ್ಟಿಸಿದ ಹಿನ್ನೆಲೆಯಲ್ಲಿ ಆತನ ಮೇಲೆ 420 ಕೇಸ್‌ ದಾಖಲಾಗಿತ್ತು. ಅಂದು ನಿಟ್ಟೆ ಗ್ರಾಮದ ದುಷ್ಯಂತ್‌ ಶೆಟ್ಟಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಬಳಿಕ ಉದ್ಯೋಗ ತ್ಯಜಿಸಿ ಉದ್ಯಮ ನಡೆಸುತ್ತಿದ್ದ ಸದಾನಂದ ಶೇರಿಗಾರ್‌ ಹಿರ್ಗಾನ ಗ್ರಾಮ ಶಿವನಗರದ ವಿವಾಹಿತೆ ಶಿಲ್ಪಾ ಜೊತೆಗಿದ್ದನು.

ಆತ್ಮಹತ್ಯೆ ಬಿಂಬಿಸಲು ಅಮಾಯನನ್ನು ಕೊಲೆ ಮಾಡಿದನೇ ?
ಕೊಲೆ ಪ್ರಕರಣದಲ್ಲಿ ಒಂದು ಜಿಜ್ಞಾಸೆ ಮೂಡುತ್ತಿದೆ. ಸದಾನಂದ ಶೇರಿಗಾರ್‌ ಆತ್ಮಹತ್ಯೆಗೆ ಸಾವಿಗೀಡಾದ್ದಾನೆ ಎಂದು ಬಿಂಬಿಸಲು ಇಂತಹ ನೀಚ ಕೃತ್ಯವೆಸಗಿದ್ದಾನೆಯೇ ? ಅಪರಾಧ ಹಿನ್ನೆಲೆಯುಳ್ಳ ಸದಾನಂದ ಶೇರಿಗಾರ್‌ ಅಮಾಯಕ ಆನಂದ ಅವರನ್ನು ಯಾಕೆ ಕೊಲೆಗೈದ ? ಎನ್ನುವುದು ಪೊಲೀಸ್‌ ತನಿಖೆಯಿಂದ ಇನ್ನಷ್ಟೆ ಹೊರಬರಬೇಕಿದೆ.

ಆರೋಪಿಗಳಾದ ಸದಾನಂದ ಶೇರಿಗಾರ್, ಶಿಲ್ಪಾ
ಕೊಲೆಯಾದ ಆನಂದ ದೇವಾಡಿಗ

LEAVE A REPLY

Please enter your comment!
Please enter your name here

Most Popular

error: Content is protected !!