ಕಾರ್ಕಳ : ಸದ್ಯ ನಾನು ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಆಲೋಚಿಸಿಲ್ಲ. ಪ್ರಸ್ತುತ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ತನ್ನಿಂದಾದ ಕಾರ್ಯ ಮಾಡುತ್ತಿದ್ದೇನೆ ಎಂದು ಉದ್ಯಮಿ ರವೀಂದ್ರ ಶೆಟ್ಟಿ ಬಜಗೋಳಿ ಸ್ಪಷ್ಟಪಡಿಸಿದ್ದಾರೆ. ರವೀಂದ್ರ ಶೆಟ್ಟಿ ಅವರು ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆಯೇ ಎಂಬ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿಗೆ ಸ್ಪಷ್ಟನೆ ನೀಡಿರುವ ಅವರು, ರಾಜಕೀಯ ರಂಗದಲ್ಲಿ ಆಸಕ್ತರು ಬಹಳಷ್ಟು ಮಂದಿ ಇರುತ್ತಾರೆ. ಹಾಗೆಂದು ಎಲ್ಲರಿಗೂ ಅವಕಾಶ ಸಿಗಲಿದೆ ಅಂತಲ್ಲ. ಅಂತಹ ಅವಕಾಶ ಬಂದರೆ ಬೇಡ ಎಂದು ಯಾರು ಕೂಡ ಹೇಳಲ್ಲ. ಅವಕಾಶಕ್ಕಾಗಿ ಸ್ಪರ್ಧೆ ಮಾಡಲ್ಲ ಎಂದು ರವೀಂದ್ರ ಶೆಟ್ಟಿ ನ್ಯೂಸ್ ಕಾರ್ಕಳಕ್ಕೆ ತಿಳಿಸಿದರು.
ರಾಜಕೀಯ ಉದ್ದೇಶದಿಂದಲ್ಲ
ನಾನು ಪ್ರಾಮಾಣಿಕವಾಗಿ ದುಡಿಯುತ್ತಿದ್ದೇನೆ. ದುಡಿಮೆಯಲ್ಲಿ ಬಂದ ಗಳಿಕೆಯಲ್ಲಿ ವಿವಿಧ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದೇನೆ. ಅಶಕ್ತರಿಗೆ ಸಹಾಯ ಮಾಡಿದ್ದೇನೆ. ಆದರೆ ಇದ್ಯಾವುದೂ ರಾಜಕೀಯ ಉದ್ದೇಶದಿಂದಲ್ಲ. ಜಾತಿ ಆಧಾರದಲ್ಲಿ ಎತ್ತಿಕಟ್ಟುವ ಕಾರ್ಯವೂ ಆಗಬಾರದೆಂದು ರವೀಂದ್ರ ಶೆಟ್ಟಿ ಹೇಳಿದರು.
ಹೆಮ್ಮೆ ಇದೆ
ಕಾರ್ಕಳದಲ್ಲಿ ನಮ್ಮ ಶಾಸಕರಿರಬೇಕು. ಆ ಮೂಲಕ ಕಾರ್ಕಳಕ್ಕೆ ಹೊಸ ಸ್ವರೂಪ ಸಿಗಬೇಕೆಂಬ ದೃಷ್ಟಿಯಿಂದ 2004ರಲ್ಲಿ ಪಕ್ಷದ ಹಿರಿಯರು, ನಾವೆಲ್ಲ ಸೇರಿ ಸುನೀಲ್ ಕುಮಾರ್ ಅವರನ್ನು ಶಾಸಕರನ್ನಾಗಿ ಮಾಡಿದ್ದೇವೆ. ಶಾಸಕರಾದ ಬಳಿಕ ಅವರು ಜನೋಪಯೋಗಿ ಕೆಲಸದ ಮೂಲಕ ಜನಾನುರಾಗಿದ್ದಾರೆ. ಈ ಬಗ್ಗೆ ನಮಗೆ ಹೆಮ್ಮೆಯಿದೆ. ಎಂದೆಂದಿಗೂ ನಾವು ಅವರೊಂದಿಗೆ ಇರುತ್ತೇವೆ. ಇದರಲ್ಲಿ ಎರಡು ಮಾತಿಲ್ಲ ಎಂದ ರವೀಂದ್ರ ಶೆಟ್ಟಿ ಅವರು ಬಿಜೆಪಿ ಪಕ್ಷ ಯಾವುದೇ ಹುದ್ದೆ ಕೊಟ್ಟರು ಅಥವಾ ಕೊಡದಿದ್ದರೂ ನಾವೆಲ್ಲರೂ ಬಿಜೆಪಿ ಕಾರ್ಯಕರ್ತರೇ. ಸದಾ ಕಾರ್ಕಳ ಬಿಜೆಪಿಯ ಅಭಿವೃದ್ಧಿಗಾಗಿ ಶ್ರಮಿಸುತ್ತೇವೆ ಎಂದು ತಿಳಿಸಿದರು.
ಸುನೀಲ್ ಕುಮಾರ್ ನಮ್ಮ ನಾಯಕ
ಕಳೆದ 20 ವರ್ಷಗಳಿಂದ ಯಾವ ಒಂದು ಜಾತಿಗೆ ಸೀಮಿತವಾಗಿರದೇ ಸುನೀಲ್ ಕುಮಾರ್ ಅವರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ವಿಶೇಷ ಗುಣ ಹೊಂದಿರುವ ಸುನೀಲ್ ಕುಮಾರ್ ಎಲ್ಲ ಸಮುದಾಯದವರ ನೆಚ್ಚಿನ ನಾಯಕರೆನಿಸಿಕೊಂಡವರು. ಹಿಂದುತ್ವ, ಅಭಿವೃದ್ಧಿ, ಯುವ ನಾಯಕತ್ವ ಧ್ಯೇಯದೊಂದಿಗೆ ಕ್ಷೇತ್ರದ ಅಭಿವೃದ್ದಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಸುನೀಲ್ ಅವರೇ ನಮ್ಮ ನಾಯಕರು. ಇದೀಗ ಸಚಿವರಾಗಿ ರಾಜ್ಯದಾದ್ಯಂತ ಉತ್ತಮ ಕಾರ್ಯ ಮಾಡುವ ಮೂಲಕ ಕಾರ್ಕಳಕ್ಕೆ ಕೀರ್ತಿ ತಂದಿದ್ದಾರೆ ಎಂದು ರವೀಂದ್ರ ಶೆಟ್ಟಿ ತಿಳಿಸಿದರು.