Sunday, October 2, 2022
spot_img
Homeಸ್ಥಳೀಯ ಸುದ್ದಿಮೂಲ ಸೌಕರ್ಯಕ್ಕಾಗಿ 500 ಕೋಟಿ ರೂ. ಬಿಡುಗಡೆ - ಸಿಎಂ ಬೊಮ್ಮಾಯಿ

ಮೂಲ ಸೌಕರ್ಯಕ್ಕಾಗಿ 500 ಕೋಟಿ ರೂ. ಬಿಡುಗಡೆ – ಸಿಎಂ ಬೊಮ್ಮಾಯಿ

ಉಡುಪಿ : ಅತಿವೃಷ್ಟಿ, ಪ್ರವಾಹದಿಂದ ಸಂಭವಿಸಿದ ಹಾನಿಯ ಕುರಿತು ಎಲ್ಲಾ ಜಿಲ್ಲೆಗಳ ವರದಿ ಪರಿಶೀಲಿಸಿ ಮೂಲ ಸೌಕರ್ಯ ದುರಸ್ತಿಗಾಗಿ ರೂ. 500 ಕೋಟಿ ತಕ್ಷಣ ಬಿಡುಗಡೆ ಮಾಡಲಾಗುವುದು ಎಂದು ಸಿಎಂ ತಿಳಿಸಿದರು. ಜು. 13ರಂದು ಮಣಿಪಾಲ ರಜತಾದ್ರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಮಳೆ, ಪ್ರವಾಹದಿಂದ ಸಂತ್ರಸ್ತರಾದವರಿಗೆ ತಕ್ಷಣ ಪರಿಹಾರ ಮೊತ್ತ ಬಿಡುಗಡೆ ಮಾಡಲಾಗುವುದು. ವಿಪತ್ತು ನಿರ್ವಹಣಾ ಖಾತೆಯಲ್ಲಿರುವ ಹಣವನ್ನು ಜಿಲ್ಲಾಧಿಕಾರಿಗಳು ಬಳಸಿಕೊಳ್ಳಬೇಕು. ಅಗತ್ಯ ಆಹಾರ ವಸ್ತುಗಳನ್ನು ನೆರೆಪೀಡಿತರ ಮನೆಗಳಿಗೆ ತಲುಪಿಸಬೇಕು ಎಂದು ಸಿಎಂ ಅಧಿಕಾರಿಗಳಿಗೆ ಸೂಚಿಸಿದರು.

ಉಡುಪಿಯಲ್ಲಿ ಪ್ರವಾಹ ಪರಿಸ್ಥಿತಿ ಅವಲೋಕಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ, ಸಂತ್ರಸ್ತ ಕೇಂದ್ರದಲ್ಲಿರುವ ಮತ್ತು ಸಂಬಂಧಿಗಳ ಮನೆಯಲ್ಲಿರುವ ಸಂತ್ರಸ್ತರಿಗೆ ಪಡಿತರ ಒದಗಿಸಬೇಕು ಮತ್ತು ಹಾಳಾಗಿರುವ ರಸ್ತೆಗಳನ್ನು ಶೀಘ್ರವೇ ಡಾಂಬರೀಕರಣ ಮತ್ತು ಕಾಂಕ್ರೀಟೀಕರಣ ಮಾಡಲಾಗುವುದು. ಈ ಕುರಿತು ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಸಚಿವರಾದ ಆರ್.‌ ಅಶೋಕ್‌, ವಿ. ಸುನೀಲ್‌ ಕುಮಾರ್‌, ಎಸ್‌.ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಉಡುಪಿ, ದ.ಕ., ಉತ್ತರ ಕನ್ನಡ ಜಿಲ್ಲೆಯ ಶಾಸಕರು, ಎಸ್.ಪಿ. ಮತ್ತು ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆಯ ಬಳಿಕ ಬೊಮ್ಮಾಯಿ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀದೇವರ ದರ್ಶನ ಪಡೆದರು.

ಮಳೆಯಿಂದ 32 ಮಂದಿ ಸಾವು
ಮಳೆಯಿಂದಾಗಿ ರಾಜ್ಯದಲ್ಲಿ ಈವರೆಗೆ 32 ಮಂದಿ ಮೃತಪಟ್ಟಿದ್ದಾರೆ. ಐವರು ಕಾಣೆಯಾಗಿದ್ದು, 34 ಮಂದಿ ಗಾಯಗೊಂಡಿದ್ದಾರೆ. 300 ಮಂದಿಯನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಉಡುಪಿ, ಉತ್ತರಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ 355 ಹೆಕ್ಟರ್‌ ಬೆಳೆ ನಾಶವಾಗಿದ್ದು, 1062 ಮನೆಗಳಿಗೆ ಹಾನಿಯಾಗಿದೆ. ರಾಜ್ಯದ ವಿವಿಧೆಡೆ 14 ಪರಿಹಾರ ಶಿಬಿರಗಳನ್ನು ಆರಂಭಿಸಲಾಗಿದೆ. 4 ರಾಷ್ಟ್ರೀಯ ವಿಪತ್ತು ರಕ್ಷಣಾ ತಂಡಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರಸಕ್ತ ವರ್ಷದ ಜುಲೈ ತಿಂಗಳಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.

LEAVE A REPLY

Please enter your comment!
Please enter your name here

Most Popular

error: Content is protected !!