Friday, August 19, 2022
spot_img
Homeಸಾಹಿತ್ಯ/ಸಂಸ್ಕೃತಿಕಗ್ಗದ ಸಂದೇಶ-ಭಿನ್ನತೆಯೂ ನಿಸರ್ಗದ ಸಹಜ ಚೆಲುವು…

ಕಗ್ಗದ ಸಂದೇಶ-ಭಿನ್ನತೆಯೂ ನಿಸರ್ಗದ ಸಹಜ ಚೆಲುವು…

“ನೆಲವೊಂದೆ,ಹೊಲಗದ್ದೆ ತೋಟ ಮರಳೆರೆ ಬೇರೆ|
ಜಲವೊಂದೆ, ಸಿಹಿಯುಪ್ಪುಜವುಗೂಟೆ ಬೇರೆ||
ಕುಲವೊಂದರೊಳೆ ಸೋದರವ್ಯಕ್ತಿಗುಣ ಬೇರೆ|
ಹಲವುಮೊಂದುಂ ಸಾಜ-ಮಂಕುತಿಮ್ಮ||

ಈ ಒಂದೇ ಭೂಮಿಯಲ್ಲಿ ಹೊಲವಿದೆ, ಗದ್ದೆಯಿದೆ, ತೋಟವಿದೆ, ಮರಳಿದೆ, ಫಲವತ್ತಾದ ಕಪ್ಪು ಮಣ್ಣಿದೆ.ಒಂದೇ ನೀರಿನಲ್ಲಿ ಸಿಹಿನೀರು, ಉಪ್ಪುನೀರು,ಜವುಗಿನಲ್ಲಿ ಚಿಲುಮೆಯಂತೆ ಚಿಮ್ಮುವ ನೀರಿದೆ. ಒಂದೇ ಕುಲದಲ್ಲಿ ಹುಟ್ಟಿದ ಸಹೋದರರ ವ್ಯಕ್ತಿಗಳ ಗುಣ ಬೇರೆಬೇರೆಯಾಗಿರುತ್ತದೆ. ಹೀಗೆ ಇರುವ ಒಂದರಲ್ಲಿಯೇ ಹಲವು ಬೇಧಗಳು ಕಂಡುಬರುವುದು ಸೃಷ್ಟಿಯ ಸಹಜ ಗುಣ ಎನ್ನುವುದನ್ನು ಮಾನ್ಯ ಡಿವಿಜಿಯವರು ಈ ಮುಕ್ತಕದಲ್ಲಿ ಹೇಳಿದ್ದಾರೆ.
ಒಂದೇ ನೆಲದಲ್ಲಿ ಹುಟ್ಟಿ, ಒಂದೇ ನೀರನ್ನು ಕುಡಿದು, ಒಂದೇ ಅನ್ನವನ್ನು ಉಂಡು, ಒಂದೇ ಗಾಳಿಯನ್ನು ಉಸಿರಾಡುತ್ತಾ ಬೆಳೆದರೂ ಒಬ್ಬರಂತೆ ಇನ್ನೊಬ್ಬರಿರುವುದಿಲ್ಲ. ಇದು ಈ ಸೃಷ್ಟಿಯ ವೈಶಿಷ್ಟ್ಯ. ಎಲ್ಲರೂ ಆಕಾರದಲ್ಲಿ ಮತ್ತು ಆಚಾರದಲ್ಲಿ ಒಂದೇ ರೀತಿಯಲ್ಲಿ ಇದ್ದಿದ್ದರೆ ಈ ಸೃಷ್ಟಿ ವಿಶೇಷ ಮತ್ತು ಆಕರ್ಷಕವಾಗಿ ಕಾಣಲು ಸಾಧ್ಯವಿಲ್ಲ. ಒಂದೇ ನೆಲದಲ್ಲಿ ಬೆಳೆಯುವ ಬೆಳೆಗಳಲ್ಲಿ ಎಷ್ಟೊಂದು ವೈವಿಧ್ಯತೆಯಿದೆ. ನೀರಿನ ರುಚಿಯಲ್ಲಿಯೂ ವ್ಯತ್ಯಾಸವಿರುತ್ತದೆ. ಇದೇ ರೀತಿಯಲ್ಲಿ ಒಂದೇ ತಾಯಿಯ ಮಕ್ಕಳಾದರೂ ಅವರ ವ್ಯಕ್ತಿತ್ವದಲ್ಲಿ ವ್ಯತ್ಯಾಸವಿರುತ್ತದೆ.
ಏಕತೆಯಲ್ಲಿ ವೈವಿಧ್ಯತೆಯನ್ನು ತೋರುವ ಸೃಷ್ಟಿಯ ವೈಶಿಷ್ಟ್ಯವನ್ನು ಡಿವಿಜಿಯವರೆ ತಮ್ಮ ಇನ್ನೊಂದು ಮುಕ್ತಕದಲ್ಲಿ ಹೀಗೆ ಹೇಳಿದ್ದಾರೆ.

“ಮನುಜಕುಲವೊಂದೊಬ್ಬನಿನ್ನೊಬ್ಬನಂತಿಲ್ಲ|
ತನುವಂಗಗಳೊಳೊಂದು, ರೂಪ ಗುಣ ಬೇರೆ||
ಮನದೊಳೊಬ್ಬೊಬ್ಬನೊಂದೊಂದು, ಪ್ರಪಂಚವಿಂ|
ತನುವೇಕದೊಳ್ ಬಹುಳ- ಮಂಕುತಿಮ್ಮ||”

ಮನುಷ್ಯಕುಲ ಒಂದೇ ಆದರೂ ಅದರಲ್ಲಿ ಒಬ್ಬನಂತೆ ಇನ್ನೊಬ್ಬನಿಲ್ಲ. ದೇಹ, ಅದರಲ್ಲಿರುವ ಅಂಗಗಳು ಬೇರೆ ಬೇರೆ ರೀತಿ. ಒಬ್ಬೊಬ್ಬನದೂ ಒಂದೊಂದು ಬಗೆ. ಪ್ರಪಂಚವು ಹೀಗೆ ಒಂದರಲ್ಲಿ ಅನೇಕವಾಗಿವೆ. ಆದರೂ ಒಂದಕ್ಕೊಂದು ಹೊಂದಿಕೊಂಡೂ ಇದೆ. ಸೃಷ್ಟಿಯ ಈ ವಿಶೇಷ ಗುಣವನ್ನು ಅರ್ಥೈಸಿಕೊಂಡು ಎಲ್ಲಾ ಬೇಧವನ್ನು ಮರೆತು ಪರಸ್ಪರ ಹೊಂದಾಣಿಕೆಯೊಂದಿಗೆ ಸಾಮರಸ್ಯದಿಂದ ಬದುಕಿದಾಗಲೇ ಜೀವನ ಸಾರ್ಥಕವಾಗುವುದಲ್ಲವೆ?
ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್‌ ಕಾರ್ಕಳ ಘಟಕ

ಪ್ರಭಾಕರ ಶೆಟ್ಟಿ ಕೊಂಡಳ್ಳಿ

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!