Sunday, October 2, 2022
spot_img
Homeಸುದ್ದಿಅಂಬೆಡ್ಕರ್ ಭವನ ನಿರ್ಮಾಣಕ್ಕೆ 6 ಕೋಟಿ ರೂ. ಅನುದಾನ ಬಿಡುಗಡೆ : ಸುನಿಲ್ ಕುಮಾರ್

ಅಂಬೆಡ್ಕರ್ ಭವನ ನಿರ್ಮಾಣಕ್ಕೆ 6 ಕೋಟಿ ರೂ. ಅನುದಾನ ಬಿಡುಗಡೆ : ಸುನಿಲ್ ಕುಮಾರ್

ಕಾರ್ಕಳ : ಕಾರ್ಕಳ ನಗರದಲ್ಲಿ ನಿರ್ಮಾಣಗೊಳ್ಳಲಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನಕ್ಕೆ 6 ಕೋಟಿ ರೂ. ಅನುದಾನ ಬಿಡುಗಡೆಗೊಂಡಿದೆ ಎಂದು ಕ್ಷೇತ್ರದ ಶಾಸಕ, ಇಂಧನ ಸಚಿವ ವಿ. ಸುನಿಲ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಮೊದಲು ಇದೇ ಅಂಬೇಡ್ಕರ್ ಭವನ ನಿರ್ಮಾಣಕ್ಕೆ 1.50 ಕೋಟಿ ರೂ. ಅನುದಾನ ಬಿಡುಗಡೆಗೊಂಡಿದ್ದು, ಕಾಮಗಾರಿ ಆರಂಭಿಸಲು ಸಿದ್ಧತೆ ನಡೆದಿತ್ತು. ಆದರೆ, ಕಾರ್ಕಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಲವಾರು ದಲಿತ ಸಂಘಟನೆಗಳು ಕಾರ್ಯನಿರ್ವಹಿಸುತ್ತಿವೆ. ದಲಿತ ಸಂಘಟನೆಗಳು ಸೇರಿದಂತೆ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ನಡೆಸುವ ಕಾರ್ಯಕ್ರಮಗಳಿಗೆ ಸಭಾಂಗಣದ ಕೊರತೆಯನ್ನು ಮನಗಂಡು ಎಲ್ಲ ಸೌಲಭ್ಯಗಳನ್ನೊಳಗೊಂಡ ಒಂದು ಸುಸಜ್ಜಿತ ಮತ್ತು ಭವ್ಯವಾದ ಅಂಬೇಡ್ಕರ್ ಭವನ ನಿರ್ಮಾಣ ಮಾಡುವ ಸಂಕಲ್ಪದೊಂದಿಗೆ 1.50 ಕೋಟಿ ಅನುದಾನದೊಂದಿಗೆ ಹೆಚ್ಚುವರಿಯಾಗಿ 4.50 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಲಾಗಿದೆ.

ನೂತನವಾಗಿ ನಿರ್ಮಾಣಗೊಳ್ಳಲಿರುವ ಅಂಬೇಡ್ಕರ್ ಭವನವು ಒಂದು ವಿಶಾಲವಾದ ಸಭಾಂಗಣ, ಊಟದ ಹಾಲ್, ಅಡುಗೆ ಕೋಣೆ ಹಾಗೂ ವಿಶ್ರಾಂತಿ ಕೊಠಡಿಗಳು ಒಳಗೊಂಡಿದೆ. ಪ್ರಸ್ತುತ ಕಾರ್ಕಳ ನಗರದಲ್ಲಿ ಕಿರಿದಾದ ಅಂಬೇಡ್ಕರ್ ಭವನವಿದ್ದು, ಸಮುದಾಯದ ಜನರ ಹಾಗೂ ಸಂಘಟನೆಗಳ ಕಾರ್ಯಕ್ರಮಗಳಿಗೆ ಸುಸಜ್ಜಿತ ಭವನದ ಕೊರತೆಯಿತ್ತು. ಭವನದ ನಿರ್ಮಾಣಕ್ಕಾಗಿ ಸರಕಾರದ ವತಿಯಿಂದ ಗರಿಷ್ಠ ಪ್ರಮಾಣದ ಅನುದಾನ ಬಿಡುಗಡೆಗೊಳಿಸಲಾಗಿದ್ದು ಈ ನಿಟ್ಟಿನಲ್ಲಿ ಕ್ಷೇತ್ರದ ಜನತೆಗೆ ಕೊಟ್ಟ ಭರವಸೆಯನ್ನು ಈಡೇರಿಸಿದ ಸಂತೃಪ್ತ ಭಾವವಿದೆ ಎಂದು ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!