ಕಾರ್ಕಳ : ಉಡುಪಿ ಜಿಲ್ಲಾ ಕ್ಷತ್ರಿಯ ಮರಾಠ ಪರಿಷತ್ ಸಮುದಾಯದ ಒಳಿತಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿರುವ ಪರಿಷತ್ ಕಾರ್ಯ ಅಭಿನಂದನೀಯವೆಂದು ಕೆ.ಕೆ.ಎಂ.ಪಿ. ರಾಜ್ಯಾಧ್ಯಕ್ಷ ಎಸ್. ಸುರೇಶ್ ರಾವ್ ಸಾಠೆ ಹೇಳಿದರು.
ಅವರು ಉಡುಪಿ ಜಿಲ್ಲಾ ಘಟಕದ ವತಿಯಿಂದ ಜು. 10 ರ ಭಾನುವಾರ ಕಾರ್ಕಳ ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಶಿವಾಜಿ ಜಯಂತೋತ್ಸವ, ವಿದ್ಯಾರ್ಥಿ ವೇತನ, ಸಹಾಯಧನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕೆ.ಕೆ.ಎಂ.ಪಿ. ಬೆಂಗಳೂರು ಕ್ಷತ್ರಿಯ ಮರಾಠ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದೆ. ಸರಕಾರ ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದು, ಅದರ ಪ್ರಥಮ ಅಧ್ಯಕ್ಷರಾಗಿ ಕೆ.ಕೆ.ಎಂ.ಪಿ. ಮಾಜಿ ಅಧ್ಯಕ್ಷ ಡಾ. ಎಂ.ಜಿ. ಮುಳೆ ಆಯ್ಕೆಯಾಗಿರುವುದು ಅತೀವ ಸಂತಸದ ವಿಚಾರ. ಸಮಾಜ ಬಾಂಧವರು ಕೆ.ಕೆ.ಎಂ.ಪಿ. ಕಾರ್ಯಕ್ರಮಗಳಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುವಂತೆ ಸುರೇಶ್ ರಾವ್ ಮನವಿ ಮಾಡಿಕೊಂಡರು.
ರಾಜ್ಯ ಕೋಶಾಧಿಕಾರಿ ವೆಂಕಟ್ರಾವ್ ಚವಾಣ್ ಮಾತನಾಡಿ, ಕ್ಷತ್ರಿಯರು ಸಂಘಟಿತರಾಗಿ ನಮ್ಮ ಅಭ್ಯುದಯದ ದೃಷ್ಟಿಯಿಂದ ಸರಕಾರದ ಮೇಲೆ ಒತ್ತಡ ಹೇರುವ ಕಾರ್ಯ ಮಾಡಬೇಕೆಂದರು.
ಅತಿಥಿಯಾಗಿ ಭಾಗವಹಿಸಿದ್ದ ರಾಷ್ಟ್ರೀಯ ಮಹಿಳಾ ಆಯೋಗದ ನಿಕಟಪೂರ್ವ ಸದಸ್ಯೆ ಶ್ಯಾಮಲಾ ಕುಂದರ್ ಮಾತನಾಡಿ, ಹಿಂದವೀ ಸ್ವರಾಜ್ಯದ ಪರಿಕಲ್ಪನೆ ಬಿತ್ತಿದ ಅಪ್ರತಿಮ ವೀರ ಶಿವಾಜಿ. ಶಿವಾಜಿ ಜೀವನ, ಸಂದೇಶವನ್ನು ಮಕ್ಕಳಿಗೆ ತಿಳಿಸಿಕೊಡುವ ಕಾರ್ಯವಾಗಬೇಕು ಎಂದರು. ಹಿರಿಯ ನ್ಯಾಯವಾದಿ ಎಂ.ಕೆ. ವಿಜಯ ಕುಮಾರ್, ಗೇರು ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಉದ್ಯಮಿ ಕೆ. ಉಮೇಶ್ ರಾವ್, ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಗಿರೀಶ್ ರಾವ್, ಕೆ.ಕೆ.ಎಂ.ಪಿ. ಸಲಹೆಗಾರ ಕೇಶವ ರಾವ್ ಮಾನೆ, ಆರ್ಯ ಯಾನೆ ಮರಾಠ ಸಮಾಜ ಸಂಘದ ಅಧ್ಯಕ್ಷ ವಾಮನ್ ರಾವ್ ಮುಳ್ಳಂಗೋಡು ಮಾತನಾಡಿದರು.
ಪುರಸಭಾ ಅಧ್ಯಕ್ಷೆ ಸುಮಾ ಕೇಶವ್, ಕೆ.ಕೆ.ಎಂ.ಪಿ. ವ್ಯವಸ್ಥಾಪಕ ಶ್ರೀನಿವಾಸ ರಾವ್ ಮಗರ್, ಸಮಾಜದ ಪ್ರಮುಖರಾದ ದಯಾನಾಥ್ ಜಿ. ರಾವ್, ಗೋಪಾಲ್ ರಾವ್ ಪವಾರ್, ಡಾ. ಸುಮತಿ ಸೋಮಶೇಖರ್ ರಾವ್, ಸುರೇಶ್ ರಾವ್ ಕರ್ ಮೋರೆ, ಭಾಗ್ಯಲಕ್ಷ್ಮೀ ಸಿಂಧ್ಯಾ, ಸುನಿಲ್ ಚವ್ಹಾಣ್, ಶಿವಾಜಿ ರಾವ್ ಗಾಯಕ್‌ವಾಡ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರುತಿ ಪ್ರಾರ್ಥಿಸಿ, ತಾಲೂಕು ಘಟಕದ ಅಧ್ಯಕ್ಷ ಕೆ.ಬಿ. ಕೀರ್ತನ್ ಕುಮಾರ್ ಲಾಡ್ ಸ್ವಾಗತಿಸಿದರು. ಕೆ.ಕೆ.ಎಂ.ಪಿ. ಜಿಲ್ಲಾಧ್ಯಕ್ಷ ಪ್ರಕಾಶ್ ರಾವ್ ಪ್ರಾಸ್ತವಿಕವಾಗಿ ಮಾತನಾಡಿದರು. ಕೆ.ಕೆ.ಎಂ.ಪಿ. ಜಿಲ್ಲಾ ಕಾರ್ಯದರ್ಶಿ ಸಂತೋಷ್ ರಾವ್ ಹಾಗೂ ದಿಶಾ ರಾವ್ ವೀಡೆ ಕಾರ್ಯಕ್ರಮ ನಿರೂಪಿಸಿದರು. ರವೀಂದ್ರ ನಾಥ್ ಮಾನೆ ವಂದಿಸಿದರು.
ಸನ್ಮಾನ
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಮಾಜದ ಬಾಂಧವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಹುತಾತ್ಮ ಯೋಧ ಮೇಜರ್ ಕೆ.ಕೆ. ರಾವ್ ಅವರ ಸ್ಮರಣಾರ್ಥ ಅವರ ತಮ್ಮ ಗಣೇಶ್ ರಾವ್, ಸ್ವಾತಂತ್ರ್ಯ ಯೋಧ ದಿ. ವಾಸೋಜಿ ರಾವ್ ಅವರ ಸ್ಮರಣಾರ್ಥ ಅವರ ಮೊಮ್ಮಗ ಪ್ರಾಣೇಶ್ ರಾವ್, ರೋಟರಿ ರಾಕ್ ಸಿಟಿ ಅಧ್ಯಕ್ಷ ಚಿರಾಗ್ ರಾವ್, ಲಯನ್ಸ್ ಮುಂಡ್ಕೂರು ಅಧ್ಯಕ್ಷ ಜನ್ನೋಜಿ ರಾವ್, ಶ್ರೀ ದುರ್ಗಾಪರಮೇಶ್ವರಿ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ರಾವ್ ಜೋಡುರಸ್ತೆ, ಪುರಸಭಾ ನಾಮನಿರ್ದೇಶಿತ ಸದಸ್ಯ ಸಂತೋಷ್ ರಾವ್ ಕಾಳಿಕಾಂಬ, ಸಂಗೀತ ಶಿಕ್ಷಕ ಕೃಷ್ಣಪ್ಪ ಶಿಂಧೆ ಅವರನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿ ವೇತನ
ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಕೆ.ಕೆ.ಎಂ.ಪಿ. ವತಿಯಿಂದ 1.40 ಲಕ್ಷ ರೂ. ಮೊತ್ತದ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮ
ಚಂದ್ರನಾಥ್ ಬಜಗೋಳಿ ನಿರ್ದೇಶನದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಲಾವಣಿ, ವೀರಗಾಸೆ, ಶಿವಾಜಿ ಕುರಿತಾದ ನಾಟಕ ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.