Saturday, October 1, 2022
spot_img
Homeಸುದ್ದಿನಂದಳಿಕೆಯಲ್ಲಿ ಭೀಕರ ಅಪಘಾತ - ಸಹೋದರರ ಸಾವು

ನಂದಳಿಕೆಯಲ್ಲಿ ಭೀಕರ ಅಪಘಾತ – ಸಹೋದರರ ಸಾವು

ಕಾರ್ಕಳ : ಸ್ಕೂಟಿ ಹಾಗೂ ಕಾರು ನಡುವೆ ಭೀಕರ ಅಪಘಾತ ನಡೆದು ಸಹೋದರರು ಸಾವಿಗೀಡಾದ ದಾರುಣ ಘಟನೆ ಕಾರ್ಕಳ ತಾಲೂಕು ನಂದಳಿಕೆ ಗ್ರಾಮದ ಮಾವಿನಕಟ್ಟೆ ಎಂಬಲ್ಲಿ‌ ಜು. 10ರಂದು ಸಂಭವಿಸಿದೆ. ಸ್ಕೂಟಿ ಸವಾರರಾದ ನಿಟ್ಟೆ ಶಿವಛಾಯಾ ಎಲೆಕ್ಟ್ರಿಕಲ್ ಮಾಲಕ, ಬೆಳ್ಮಣ್‌ ಜೇಸಿ ಕೋಶಾಧಿಕಾರಿ ನಂದಳಿಕೆಯ ಸಂದೀಪ್ ಕುಲಾಲ್ (25) ಹಾಗೂ ಅವರ ಅಣ್ಣ ಜಿಮ್ ಟ್ರೈನರ್‌ ಆಗಿದ್ದ ಸತೀಶ್‌ ಕುಲಾಲ್‌ (33) ಮೃತಪಟ್ಟ ದುರ್ದೈವಿಗಳು.‌ ನಂದಳಿಕೆಯಿಂದ ಕೆದಿಂಜೆ ಸಾಗುತ್ತಿದ್ದ ಸ್ಕೂಟಿಗೆ ಪಡುಬಿದ್ರೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಕಾರು ನಡುವೆ ಮಾವಿನಕಟ್ಟೆ ಮುಖ್ಯರಸ್ತೆಯಲ್ಲಿಯಲ್ಲಿ ಡಿಕ್ಕಿಯಾಗಿದೆ. ಢಿಕ್ಕಿಯ ರಭಸಕ್ಕೆ ಸಂದೀಪ್‌ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡ ಸತೀಶ್‌ ಅವರು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತದೇಹಗಳು ಕಾರ್ಕಳ ಸರಕಾರಿ ಆಸ್ಪತ್ರೆ ಬಳಿಯ ಶವಾಗಾರದಲ್ಲಿದೆ. ಘಟನಾ ಸ್ಥಳಕ್ಕೆ ಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ. ಸಂದೀಪ್‌ ಅವಿವಾಹಿತರಾಗಿದ್ದರೆ, ಸತೀಶ್‌ ಅವರಿಗೆ ಒಂದು ವರ್ಷದ ಹಿಂದೆಯಷ್ಟೇ ವಿವಾಹವಾಗಿತ್ತು. ಮೃತರು ತಂದೆ ಶೇಖರ್‌ ಮೂಲ್ಯ, ತಾಯಿ ಜಾನಕಿ, ಮೂವರು ಸಹೋದರರನ್ನು ಅಗಲಿದ್ದಾರೆ. ಇಂದು ಮೃತರ ಓರ್ವ ಅಣ್ಣನ ಹುಟ್ಟು ಹಬ್ಬವಾಗಿತ್ತು. ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬವೀಗ ಶೋಕ ಸಾಗರದಲ್ಲಿ ಮುಳುಗಿದೆ. ದುರಂತದಿಂದ ಇಡೀ ಊರೇ ದುಃಖಿತವಾಗಿದೆ.

LEAVE A REPLY

Please enter your comment!
Please enter your name here

Most Popular

error: Content is protected !!