ಕಾರ್ಕಳ : 2001-02ರಲ್ಲಿ ಕಾಂಗ್ರೆಸ್ ಸರಕಾರ ಕಂದಾಯ ಭೂಮಿಯನ್ನು ಏಕಾಏಕಿಯಾಗಿ ಡೀಮ್ಡ್ ಫಾರೆಸ್ಟ್ ಎಂದು ಘೋಷಣೆ ಮಾಡಿದ ಪರಿಣಾಮ ಸಾವಿರಾರು ಎಕರೆ ಭೂಮಿ ಡೀಮ್ಡ್ ವ್ಯಾಪ್ತಿಗೊಳಪಟ್ಟಿತ್ತು. ಇಡೀ ದೇಶದಲ್ಲಿ ಕರ್ನಾಟಕದಲ್ಲಿ ಮಾತ್ರವೇ ಈ ಸಮಸ್ಯೆಯಿತ್ತು. ವಿಧಾನ ಸಭೆಯ ಒಳಗೆ ಮತ್ತು ಹೊರಗೆ ನಿರಂತರವಾಗಿ ನಡೆಸಿದ ಪ್ರಯತ್ನ, ಬೊಮ್ಮಾಯಿ ಸರಕಾರದ ಇಚ್ಛಾಶಕ್ತಿಯಿಂದಾಗಿ ಡೀಮ್ಡ್ ಫಾರೆಸ್ಟ್ನಲ್ಲಿ ಮನೆ ಮಾಡಿಕೊಂಡವರಿಗೆ ಹಕ್ಕುಪತ್ರ ಸಿಗುವಂತಾಗಿದೆ ಎಂದು ಸಚಿವ ವಿ. ಸುನೀಲ್ ಕುಮಾರ್ ಹೇಳಿದರು.
ಅವರು ಶನಿವಾರ ಕಾರ್ಕಳ ತಾ.ಪಂ.ನ ಸಭಾಂಗಣದಲ್ಲಿ 94 ಸಿ ಹಾಗೂ 94 ಸಿಸಿಯಡಿ ಹಕ್ಕುಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಕಳದಲ್ಲಿ ಡೀಮ್ಡ್ ಫಾರೆಸ್ಟ್ ನಲ್ಲಿ ಮನೆಮಾಡಿಕೊಂಡಿದ್ದ ಸುಮಾರು 2 ಸಾವಿರ ಅರ್ಜಿಗಳಿವೆ. ಇದೀಗ ಸಾಂಕೇತಿಕವಾಗಿ 100 ಕುಟುಂಬಗಳಿಗೆ ಹಕ್ಕುಪತ್ರ ವಿತರಣೆಯಾಗಿದೆ. ಮುಂದಿನ ಎರಡು ತಿಂಗಳೊಳಗಾಗಿ ಹಂತ ಹಂತವಾಗಿ ಅರ್ಹರೆಲ್ಲರಿಗೂ ಹಕ್ಕುಪತ್ರ ಹಸ್ತಾಂತರ ಮಾಡಲಾಗುವುದು ಎಂದು ಸುನೀಲ್ ಕುಮಾರ್ ತಿಳಿಸಿದರು.
ಪ್ರಯೋಜನ ಪಡೆದುಕೊಳ್ಳಲು ಅನುಕೂಲ
ಹಕ್ಕುಪತ್ರ ದೊರೆತ ಬಳಿಕ ಸರಕಾರದ ಸೌಲಭ್ಯ ಪಡೆದುಕೊಳ್ಳಲು ಅನುಕೂಲವಾಗುವುದು. ಇದರಿಂದ ಬ್ಯಾಂಕ್ ನಿಂದ ಸಾಲ ಪಡೆಯಲು, ಪಂಚಾಯತ್ಗೆ ಅರ್ಜಿ ಸಲ್ಲಿಸಿ ಹೊಸ ಮನೆ ಕಟ್ಟಿಕೊಳ್ಳಬಹುದಾಗಿದೆ ಎಂದು ಸುನೀಲ್ ಕುಮಾರ್ ಹೇಳಿದರು.
ಮಧ್ಯವರ್ತಿಗಳ ಅಗತ್ಯವಿಲ್ಲ
ಹಕ್ಕುಪತ್ರ ಪಡೆಯಲು ಮಧ್ಯವರ್ತಿಗಳ ಹಾವಳಿಯಿರಲ್ಲ. ಯಾರಿಗೂ ಹಣ ಕೊಡಬೇಕಾಗಿಲ್ಲ ಎಂದು ತಿಳಿಸಿದ ಸುನೀಲ್ ಕುಮಾರ್ ನಮ್ಮ ಕಚೇರಿಯಲ್ಲೂ ಅದಕ್ಕಾಗಿ ಅರ್ಜಿ ಪಡೆಯಬಹುದಾಗಿದೆ ಎಂದರು.
ಅಕ್ರಮ ಸಕ್ರಮ ಸಭೆ
ಡೀಮ್ಡ್ ಫಾರೆಸ್ಟ್ ನಲ್ಲಿ ಕೃಷಿ ಮಾಡಿಕೊಂಡು 53 ನಮೂನೆಯಲ್ಲಿ ಅರ್ಜಿ ಕೊಟ್ಟವರಿಗೆ ಸಾಗುವಾಳಿ ಚೀಟಿ ನೀಡುವ ಕಾರ್ಯ ಮಾಡಲಿದ್ದೇವೆ. ಈ ನಿಟ್ಟಿನಲ್ಲಿ ಮುಂದಿನ ವಾರ ಅಕ್ರಮ ಸಕ್ರಮ ಅರ್ಜಿ ಬಗೆಗೆ ಸಭೆ ನಡೆಯಲಿದೆ ಎಂದು ಸುನೀಲ್ ಕುಮಾರ್ ಹೇಳಿದರು.
ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಿ.ಪಂ. ಸಿಇಒ ಪ್ರಸನ್ನ, ಪುರಸಭಾ ಅಧ್ಯಕ್ಷೆ ಸುಮಾ ಕೇಶವ್, ಕಾರ್ಕಳ ತಾ.ಪಂ. ಇಒ ಗುರುದತ್ತ್ ಎಂ.ಎನ್., ಹೆಬ್ರಿ ಇಒ ಶಶಿಧರ್, ಕುಕ್ಕುಂದೂರು ಗ್ರಾ. ಪಂ. ಅಧ್ಯಕ್ಷೆ ಶಶಿಮಣಿ ಸಂಪತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಕಳ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಸ್ವಾಗತಿಸಿ, ಸುಹಾಸ್ ಶೆಟ್ಟಿ ಮುಟ್ಲುಪಾಡಿ ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಕಚೇರಿ ಚುನಾವಣಾ ಶಾಖೆ ಪ್ರಥಮ ದರ್ಜೆ ಸಹಾಯಕ ಮಹಮ್ಮದ್ ರಿಯಾಜ್ ವಂದಿಸಿದರು.
