ಆಯುರ್ವೇದದ ಪ್ರಕಾರ ಲವಣಗಳಲ್ಲಿ ಸೈಂಧವ ಲವಣ ಶ್ರೇಷ್ಠ ಎಂದು ಹೇಳುತ್ತಾರೆ. ದಿನಾಲೂ ಇದನ್ನು ಉಪಯೋಗಿಸಬೇಕೆಂದು ಆಯುರ್ವೇದದಲ್ಲಿ ಹೇಳಿದೆ. ಹಿಮಾಲಯನ್ ಸಾಲ್ಟ್, ರಾಕ್ ಸಾಲ್ಟ್, ಪಿಂಕ್ ಸಾಲ್ಟ್ ಎಂದೆಲ್ಲ ಈ ಉಪ್ಪನ್ನು ಕರೆಯುತ್ತಾರೆ. ಸಮುದ್ರ ಅಥವಾ ಸರೋವರದ ಉಪ್ಪುನೀರು ಆವಿಯಾಗಿ ಒಣಗಿದ ಮೇಲೆ ಸೈಂಧವ ಲವಣ ರೂಪಗೊಳ್ಳುತ್ತದೆ.
ಸೈಂಧವ ಲವಣದ ಗುಣಗಳು
ರುಚಿಯಲ್ಲಿ ಉಪ್ಪು, ಸ್ವಭಾವದಲ್ಲಿ ಶೀತ ಹಾಗೂ ಲಘು ಗುಣ ಹೊಂದಿದೆ. ಬೇರೆ ಉಪ್ಪು ಪಿತ್ತವನ್ನು ವೃದ್ಧಿಸುತ್ತದೆ, ಆದರೆ ಸೈಂಧವ ಲವಣ ಶೀತ ಸ್ವಭಾವವಿರುವುದರಿಂದ ಪಿತ್ತವನ್ನು ಸಮತೋಲನಗೊಳಿಸುತ್ತದೆ. ಸೈಂಧವ ಲವಣವು ಲವಣರಸ ಹೊಂದಿರುವುದರಿಂದ ವಾತವನ್ನು ಶಮನಗೊಳಿಸುತ್ತದೆ. ಕಫವನ್ನು ಕರಗಿಸುತ್ತದೆ .
ಉಪಯೋಗಗಳು
ಸೈಂಧವ ಲವಣವು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಆಹಾರವನ್ನು ಜೀರ್ಣಸುವಲ್ಲಿ ಸಹಾಯಮಾಡುತ್ತದೆ. ಕಣ್ಣಿಗೆ ಒಳ್ಳೆಯದು, ಹೃದಯಕ್ಕೆ ಹಿತಕರ. ಬಿಕ್ಕಳಿಕೆಯಲ್ಲಿ ಉಪಯೋಗಕಾರಿ. ಕಫವನ್ನು ಕರಗಿಸಿ ಹೊರಹಾಕುತ್ತದೆ. ಆದ್ದರಿಂದ ಶ್ವಾಸ ಕೋಶದ ರೋಗಗಳಲ್ಲಿ ಉಪಯೋಗಿಸುತ್ತಾರೆ. ಸೈನಸೈಟಿಸ್, ಟಾನ್ಸಿಲೈಟಿಸ್, ಒಣಕೆಮ್ಮಿಗೆ ಒಳ್ಳೆಯದು. ಕೊಲೆಸ್ಟ್ರಾಲ್ ನ್ನು ನಿಯಂತ್ರಿಸುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆಗಳಿಗೆ ತುಂಬಾ ಒಳ್ಳೆಯದು. ಎದೆ ಉರಿಯನ್ನು ಕಡಿಮೆ ಮಾಡುತ್ತದೆ. ಸಂದುಗಳಲ್ಲಿ ಬಿಗಿತವನ್ನು ಕಡಿಮೆಗೊಳಿಸಿ ನೋವನ್ನು ಶಮನಗೊಳಿಸುತ್ತದೆ.ಎಲುಬನ್ನು ಸದೃಢಗೊಳಿಸುತ್ತದೆ.
ಸಂದು ನೋವಿನಲ್ಲಿ ಸಂದುಗಳಿಗೆ ಎಣ್ಣೆಯ ಅಭ್ಯಂಗ ಮಾಡಿ ಸೈಂಧವ ಲವಣವನ್ನು ಬಟ್ಟೆಯಲ್ಲಿ ಕಟ್ಟಿ ಬಾಣಲೆಯಲ್ಲಿ ಬಿಸಿಮಾಡಿ ಅದರ ಶಾಖವನ್ನು ನೀಡಲಾಗುತ್ತದೆ. ಹೀಗೆ ಐದು ನಿಮಿಷ ನೀಡುತ್ತಾರೆ.
ಪಂಚಕರ್ಮದಲ್ಲಿ ವಮನ ಕರ್ಮ, ನಸ್ಯ ಕರ್ಮ, ಬಸ್ತಿ ಕರ್ಮದಲ್ಲಿ ಸೈಂಧವ ಲವಣವನ್ನು ಬಳಸುತ್ತಾರೆ.
ಉಪಯೋಗಿಸುವ ಪ್ರಮಾಣ- ದಿನಕ್ಕೆ 1.5 to 2gm.
ಅಧಿಕ ರಕ್ತದ ಒತ್ತಡ ಇದ್ದವರು ಸಮುದ್ರ ಲವಣ (Common salt ) ಉಪಯೋಗಿಸುವ ಬದಲು ಸೈಂಧವ ಲವಣವನ್ನು ಉಪಯೋಗಿಸಬಹುದು. ಅಧಿಕ ಪ್ರಮಾಣದಲ್ಲಿ ಸೈಂಧವ ಲವಣವನ್ನು ಬಳಸಬಾರದು.
ಸೈಂಧವ ಇರುವ ಆಯುರ್ವೇದ ಔಷಧಗಳು – ಲವಣ ಭಾಸ್ಕರ ಚೂರ್ಣ, ಹಿಂಗ್ವಾಷ್ಟಕ ಚೂರ್ಣ, ಬೃಹತ್ ಸೈಂಧವಾದಿ ತೈಲ, ಧನ್ವಂತರಿ ತೈಲ.
ಡಾ. ಹರ್ಷಾ ಕಾಮತ್
