ಶಿಂಜೊ ಅಬೆ ನಿಧನಕ್ಕೆ ಮೋದಿ ಸಂತಾಪ

*ಶನಿವಾರ ಒಂದು ದಿನ ದೇಶದಲ್ಲಿ ರಾಷ್ಟ್ರೀಯ ಶೋಕಾಚರಣೆ
ಹೊಸದಿಲ್ಲಿ: ಗುಂಡಿನ ದಾಳಿಯಿಂದ ಮೃತಪಟ್ಟಿರುವ ಜಪಾನ್​ನ ಮಾಜಿ ಪ್ರಧಾನಿ ಶಿಂಜೊ ಅಬೆ ಅವರಿಗೆ ಪ್ರಧಾನಿ ಮೋದಿ ಕಂಬನಿ ಮಿಡಿದಿದ್ದಾರೆ. ಶಿಂಜೊ ಅಬೆ ಅವರಿಗೆ ಗೌರವ ಸೂಚಿಸುವ ಸಲುವಾಗಿ ಶನಿವಾರ (ಜುಲೈ 9) ಒಂದು ದಿನದ ರಾಷ್ಟ್ರೀಯ ಶೋಕಾಚರಣೆಗೆ ಕರೆ ನೀಡಿದ್ದಾರೆ. ಅಬೆ ಅವರೊಂದಿಗಿನ ಇತ್ತೀಚಿನ ಭೇಟಿಯ ಫೋಟೋವನ್ನು ಸಹ ಮೋದಿ ಹಂಚಿಕೊಂಡಿದ್ದಾರೆ.
“ನನ್ನ ಆತ್ಮೀಯ ಸ್ನೇಹಿತರಲ್ಲೊಬ್ಬರಾದ ಶಿಂಜೊ ಅಬೆ ಅವರ ದುರಂತ ಸಾವಿನಿಂದ ನಾನು ಪದಗಳಲ್ಲಿ ಹೇಳಲಾಗದಷ್ಟು ಆಘಾತ ಮತ್ತು ದುಃಖಿತನಾಗಿದ್ದೇನೆ. ಅವರು ಅತ್ಯುನ್ನತ ಜಾಗತಿಕ ರಾಜಕಾರಣಿ, ಅತ್ಯುತ್ತಮ ನಾಯಕ ಮತ್ತು ಆಡಳಿತಗಾರರಾಗಿದ್ದರು. ಜಪಾನ್ ಮತ್ತು ಜಗತ್ತನ್ನು ಉನ್ನತಿಗೇರಿಸಲು ಅವರು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು” ಎಂದು ಮೋದಿ ಟ್ವೀಟ್​ ಮಾಡಿದ್ದಾರೆ.
“ಅಬೆ ಅವರೊಂದಿಗಿನ ನನ್ನ ಒಡನಾಟವು ಹಲವು ವರ್ಷಗಳ ಹಿಂದಿನದು. ನಾನು ಗುಜರಾತ್ ಸಿಎಂ ಆಗಿದ್ದಾಗ ಅವರನ್ನು ಪರಿಚಯ ಮಾಡಿಕೊಂಡಿದ್ದೆ ಮತ್ತು ನಾನು ಪ್ರಧಾನಿಯಾದ ನಂತರ ನಮ್ಮ ಸ್ನೇಹ ಮುಂದುವರಿಯಿತು. ಆರ್ಥಿಕತೆ ಮತ್ತು ಜಾಗತಿಕ ವ್ಯವಹಾರಗಳ ಬಗ್ಗೆ ಅವರ ತೀಕ್ಷ್ಣ ಒಳನೋಟಗಳು ಯಾವಾಗಲೂ ನನ್ನ ಮೇಲೆ ಆಳವಾದ ಪ್ರಭಾವ ಬೀರಿದ್ದವು” ಎಂದು ಮೋದಿ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.
“ನನ್ನ ಇತ್ತೀಚಿನ ಜಪಾನ್ ಭೇಟಿಯ ಸಂದರ್ಭದಲ್ಲಿ, ಮತ್ತೊಮ್ಮೆ ಅಬೆ ಅವರನ್ನು ಭೇಟಿ ಮಾಡಲು ಮತ್ತು ಅನೇಕ ವಿಷಯಗಳನ್ನು ಚರ್ಚಿಸಲು ನನಗೆ ಅವಕಾಶ ಸಿಕ್ಕಿತು. ಆದರೆ ಇದು ನಮ್ಮ ಕೊನೆಯ ಸಭೆ ಎಂದು ನನಗೆ ತಿಳಿದಿರಲಿಲ್ಲ. ಅವರ ಕುಟುಂಬಕ್ಕೆ ಮತ್ತು ಜಪಾನಿನ ಜನರಿಗೆ ನನ್ನ ಸಾಂತ್ವನಗಳು” ಎಂದು ಟ್ವೀಟ್​ ಮಾಡಿದ್ದಾರೆ.

error: Content is protected !!
Scroll to Top