ಕಾರ್ಕಳ : ಮುಂಡ್ಲಿ ಜಲಾಶಯಕ್ಕೆ ಯಥೇಚ್ಚವಾಗಿ ನೀರು ಹರಿದುಬರುತ್ತಿರುವುದರಿಂದ ತೆಳ್ಳಾರು, ಮುಂಡ್ಲಿ ಪರಿಸರದ ತೋಟಗಳಿಗೆ ನೀರು ನುಗ್ಗಿದೆ. ಸೂರ್ಯಣ್ಣ ಪೂಜಾರಿ, ಚಾರ್ಲ್ಸ್ ಅವರ ತೋಟ ಸಂಪೂರ್ಣವಾಗಿ ಜಲಾವೃತ್ತವಾಗಿದ್ದು, ಇದೇ ಪರಿಸರದಲ್ಲಿ 9 ಮನೆಗಳಿವೆ. ಆ ಕುಟುಂಬಗಳು ನೆರೆ ಭೀತಿಯಲ್ಲಿದ್ದಾರೆ. ಪ್ರತಿ ವರ್ಷ ಮಳೆಗಾಲದ ನೆರೆನೀರಿನಿಂದ ಮುಂಡ್ಲಿ ಜಲಾಶಯ ಸುತ್ತಮುತ್ತಲಿನ ಕುಟುಂಬಗಳಿಗೆ ತೊಂದರೆಯಾಗುತ್ತಿದೆ.

ಈ ವರ್ಷವೂ ಜಿವಿಪಿ ಕಂಪೆನಿಯವರು ಒಂದು ಗೇಟ್ ತೆರೆಯದೇ ತೊಂದರೆಯಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಒಂದು ಮನೆಯಂತು ತೀರಾ ಅಪಾಯದ ಸ್ಥಿತಿಯಲ್ಲಿದ್ದು, ಇದಕ್ಕೆಲ್ಲ ಕಂಪನಿಯೇ ನೇರ ಹೊಣೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ. ಮತ್ತಷ್ಟು ಕೃಷಿ ಭೂಮಿ, ಮನೆ, ಪುರಸಭೆ ಪಂಪ್ ಹೌಸ್ ಮುಳುಗಡೆಯಾಗುವುದಕ್ಕಿಂತ ಮುಂಚೆ ಸೂಕ್ತ ಕ್ರಮವಹಿಸುವಂತೆ ಆಗ್ರಹಿಸುತ್ತಿದ್ದಾರೆ.