ಅಪಾಯಕಾರಿ ಪ್ರದೇಶದಲ್ಲಿ ತೆಂಗಿನ ಕಾಯಿ ಹಿಡಿಯದಂತೆ ಮುಖ್ಯಾಧಿಕಾರಿ ರೂಪಾ ಶೆಟ್ಟಿ ಮನವಿ

ಕಾರ್ಕಳ : ಕರಾವಳಿ ಪ್ರದೇಶದಲ್ಲಿ ಕಳೆದ 9 ದಿನಗಳಿಂದ ಎಡೆಬಿಡದೇ ಮಳೆ ಸುರಿಯುತ್ತಿದ್ದು ವಿವಿಧೆಡೆ ಭೂಕುಸಿತ, ನೆರೆ ನೀರು ನುಗ್ಗಿ ಅನಾಹುತ ಸಂಭವಿಸಿದೆ. ಕಾರ್ಕಳ ಹೆಬ್ರಿ ತಾಲೂಕಿನಲ್ಲೂ ದಾಖಲೆ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ನದಿ ಹೊಳೆಗಳಲ್ಲಿ ಧುಮ್ಮಿಕ್ಕಿ ನೀರು ಹರಿಯುತ್ತಿದೆ. ಜಲಪಾತಗಳು ಮೈದುಂಬಿ ಭೋರ್ಗರೆಯುತ್ತಿದೆ. ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಕರವಾಳಿ ಭಾಗದಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ.

ತೆಂಗಿನಕಾಯಿ ಹಿಡಿಯಬೇಡಿ
ಕೆಲವರು ಮಳೆಗೆ ನದಿಯಲ್ಲಿ ಮೀನು, ತೆಂಗಿನಕಾಯಿ ಹಿಡಿಯುವ ಹವ್ಯಾಸ ಬೆಳೆಸಿಕೊಂಡಿರುತ್ತಾರೆ. ಅಪಾಯಕಾರಿ ಸೇತುವೆ, ಕಿಂಡಿಅಣೆಕಟ್ಟು ಮೇಲೆ ನಿಂತು ತೆಂಗಿನ ಕಾಯಿ ಹಿಡಿಯದಂತೆ ಕಾರ್ಕಳ ಮುಖ್ಯಾಧಿಕಾರಿ ರೂಪ ಶೆಟ್ಟಿ ಮನವಿ ಮಾಡಿಕೊಂಡಿದ್ದಾರೆ. ಮಕ್ಕಳ ಬಗ್ಗೆ ಪೋಷಕರು ನಿಗಾ ವಹಿಸುವಂತೆಯೂ ತಿಳಿಸಿರುತ್ತಾರೆ.

ಕಾರ್ಕಳ ನಗರದಲ್ಲಿ ಒಳಚರಂಡಿಗೆ ಚರಂಡಿ ನೀರು ಹರಿಯುತ್ತಿರುವುದರಿಂದ ಸಮಸ್ಯೆಯಾಗಿದೆ. ಮುಖ್ಯರಸ್ತೆಯ ಮ್ಯಾನ್‌ ಹೋಲ್‌ ಉಕ್ಕಿ ಚಿಮ್ಮುತ್ತಿದೆ. ಮುಖ್ಯರಸ್ತೆಯ ಇಕ್ಕೆಲದ ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕಿದೆ. ಚರಂಡಿ ನೀರು ಒಳಚರಂಡಿಗೆ ಹರಿಯದಂತೆ ಮಾಡುವಲ್ಲಿ ಸಾರ್ವಜನಿಕರೂ ಸಹಕರಿಸುವಂತೆ ಪುರಸಭಾ ವ್ಯಾಪ್ತಿಯ ಜನತೆಯಲ್ಲಿ ರೂಪಾ ಶೆಟ್ಟಿ ಮನವಿ ಮಾಡಿಕೊಂಡಿದ್ದಾರೆ.

ಚರಂಡಿಯ ಹೂಳು ತೆಗೆಯಲು, ತುರ್ತು ಸಂದರ್ಭದಲ್ಲಿ ಕಾರ್ಯನಿರ್ವಹಿಸಲು ಒಂದು ತಂಡ ರಚಿಸಲಾಗಿದ್ದು, ಆ ತಂಡದ ಜೊತೆ ಒಂದು ಹಿಟಾಚಿ, ಜೆಸಿಬಿಯೂ ಇರಲಿದೆ. ಪ್ರಾಕೃತಿಕ ವಿಕೋಪ ಎದುರಿಸಲು ಕಾರ್ಕಳ ಪುರಸಭೆ ಸರ್ವರೀತಿಯಲ್ಲಿಯೂ ಸನ್ನದ್ಧವಾಗಿದೆ ಎಂದು ರೂಪಾ ಶೆಟ್ಟಿ ನ್ಯೂಸ್‌ ಕಾರ್ಕಳಕ್ಕೆ ತಿಳಿಸಿದ್ದಾರೆ.





























































































































































































































error: Content is protected !!
Scroll to Top