Sunday, October 2, 2022
spot_img
Homeಸುದ್ದಿಮಳೆ ಅಬ್ಬರ - ಜೋಗಲ್‌ಬೆಟ್ಟು ಕಿಂಡಿಅಣೆಕಟ್ಟು ಮುಳುಗಡೆ

ಮಳೆ ಅಬ್ಬರ – ಜೋಗಲ್‌ಬೆಟ್ಟು ಕಿಂಡಿಅಣೆಕಟ್ಟು ಮುಳುಗಡೆ

ಕೊಚ್ಚಿಕೊಂಡು ಹೋದ ದನ, ಕರು, ಹೋರಿ ರಕ್ಷಣೆ
ಕಾರ್ಕಳ : ಕರಾವಳಿಯಲ್ಲಿ ಶುಕ್ರವಾರವೂ ಮುಂಗಾರು ಮಳೆ ಅಬ್ಬರಿಸುತ್ತಿದ್ದು ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ಕಿಂಡಿ ಅಣೆಕಟ್ಟೆ ಮುಳುಗಡೆಯಾದ ಪರಿಣಾಮವಾಗಿ ದನ ಕೊಚ್ಚಿಕೊಂಡು ಹೋಗಿದೆ. ಪುರಸಭಾ ವ್ಯಾಪ್ತಿಯ 11ನೇ ವಾರ್ಡ್ ಅಯೋಧ್ಯಾ ನಗರ ಕಾವೇರಡ್ಕ ಮತ್ತು 12ನೇ ವಾರ್ಡ್ ಜೋಗಲ್ ಬೆಟ್ಟು ಕೂಡುರಸ್ತೆಯಲ್ಲಿರುವ ತೆಳ್ಳಾರು ದುರ್ಗಾವನ್ನು ಸಂಪರ್ಕಿಸುವ ಕಿಂಡಿ ಅಣೆಕಟ್ಟು ಮುಳುಗಡೆಯಾಗಿದೆ.
ಕಿಂಡಿ ಅಣೆಕಟ್ಟು ಮೇಲಿನಿಂದ ರಭಸವಾಗಿ ನೀರು ಹರಿಯುತ್ತಿರುವುದರಿಂದ ಜು. 4ರಂದು ಕಾವೇರಡ್ಕ ಬೇಬಿ ಪೂಜಾರಿ ಎಂಬವರ ದನ ಹಾಗೂ ಕರು, ಶ್ರೀ ಲಕ್ಷ್ಮೀ ಗೋ ಶುಶ್ರೂಷಾಲಯದ ಒಂದು ಹೋರಿ ಕೊಚ್ಚಿಕೊಂಡು ಹೋಗಿತ್ತು. ಅಲ್ಲೇ ಇದ್ದ ಯುವಕರು ಕರು ಮತ್ತು ಹೋರಿಯನ್ನು ರಕ್ಷಿಸಿದ್ದಾರೆ.

ಸಂಪರ್ಕ ಕಡಿತ
ಸಣ್ಣ ನೀರಾವತಿ ಇಲಾಖೆಯಿಂದ ದಶಕಗಳ ಹಿಂದೆ ನಿರ್ಮಾಣವಾಗಿರುವ ಜೋಗಲ್‌ಬೆಟ್ಟು ಕಿಂಡಿ ಅಣೆಕಟ್ಟು ಸೇತುವೆಯಾಗಿ ಬಳಕೆಯಾಗುತ್ತಿದೆ. ಕಾವೇರಡ್ಕ, ದುರ್ಗಾ ಗ್ರಾಮಸ್ಥರು, ವಿದ್ಯಾರ್ಥಿಗಳು ನಿತ್ಯ ಈ ಸೇತುವೆ ಹೋಗಿ ಬರುತ್ತಾರೆ. ಆಟೋ, ದ್ವಿಚಕ್ರ ವಾಹನಗಳು ನಿತ್ಯ ಇದೇ ಕಿಂಡಿ ಅಣೆಕಟ್ಟು ಮೂಲಕ ಸಾಗುತ್ತಿದ್ದವು.ಇದೀಗ ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿದೆ.
ತಡೆಗೋಡೆಯಿಲ್ಲ
ಕಾವೇರಡ್ಕ ಭಾಗದ ಜನ ಕಾರ್ಕಳ ಪೇಟೆ ಸಂಪರ್ಕಿಸಲು ಇದೇ ಕಿಂಡಿ ಅಣೆಕಟ್ಟು ಬಳಸುತ್ತಿದ್ದಾರೆ. ಇದಕ್ಕೊಂದು ತಡೆಗೋಡೆಯಿಲ್ಲದ ಕಾರಣ ಅನಾಹುತ ಆಹ್ವಾನಿಸುಂತಿದೆ. ಕಳೆದ ವರ್ಷ ಬೀಡಿ ಸಾಗುತ್ತಿದ್ದ ಟೆಂಪೊವೊಂದು ಹೊಳೆಗೆ ಉರುಳಿ ಬಿದ್ದಿದೆ. ಅದಕ್ಕೂ ಹಿಂದಿನ ವರ್ಷ ಸ್ಕೂಟಿಯೊಂದು ಬಿದ್ದು ನೀರುಪಾಲಾಗಿತ್ತು. ಎರಡೂ ಘಟನೆಗಳಲ್ಲೂ ಅದೃಷ್ಟವಶಾತ್‌ ಚಾಲಕ, ಸವಾರರು ಅಪಾಯದಿಂದ ಪಾರಾಗಿದ್ದಾರೆ.

ಸೇತುವೆ ಆಗಬೇಕು
ಇಲ್ಲೊಂದು ಸೇತುವೆ ನಿರ್ಮಾಣವಾಗಬೇಕೆಂಬ ಬೇಡಿಕೆ ಕಳೆದ ಎರಡು ದಶಕಗಳಿಂದ ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ಸ್ಥಳೀಯರು ಸಾಕಷ್ಟು ಬಾರಿ ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ. ಸೇತುವೆಯೊಂದು ನಿರ್ಮಾಣವಾದಲ್ಲಿ ಕೇವಲ 2.5 ಕಿ.ಮೀ. ದೂರದಲ್ಲಿ ಆ ಭಾಗದ ಜನತೆ ಪೇಟೆಯನ್ನು ಸಂಪರ್ಕಿಸಬಹುದಾಗಿದೆ. ದುರ್ಗ, ತೆಳ್ಳಾರಾಗಿ ಸುಮಾರು 7 ಕಿ.ಮೀ. ದೂರ ಸುತ್ತು ಬಳಸಿ ಕ್ರಮಿಸುವುದು ತಪ್ಪಲಿದೆ.

LEAVE A REPLY

Please enter your comment!
Please enter your name here

Most Popular

error: Content is protected !!