ಲಖನೌ: ಉತ್ತರ ಪ್ರದೇಶದ ವಿಧಾನ ಪರಿಷತ್ನಲ್ಲಿ ಈಗ ಕಾಂಗ್ರೆಸ್ ಸದಸ್ಯರೇ ಇಲ್ಲದಂತಾಗಿದೆ. ಕಾಂಗ್ರೆಸಿನ 135 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಪಕ್ಷ ಈ ಅವಮಾನಕಾರಿ ಸ್ಥಿತಿಯನ್ನು ಎದುರಿಸುತ್ತಿದೆ. ಇದೇ ಮೊದಲ ಬಾರಿಗೆ ಉತ್ತರ ಪ್ರದೇಶ ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಪಕ್ಷದ ಯಾವುದೇ ಪ್ರತಿನಿಧಿಗಳು ಇಲ್ಲದಂತಾಗಿದೆ. ಕಾಂಗ್ರೆಸ್ ನ ಏಕೈಕ ಸದಸ್ಯರಾಗಿದ್ದ ದೀಪಕ್ ಸಿಂಗ್ ಅವರ ಅಧಿಕಾರ ಅವಧಿ ನಿನ್ನೆಗೆ ಮುಗಿದು ಅವರು ನಿವೃತ್ತರಾದ ಬಳಿಕ ಉತ್ತರ ಪ್ರದೇಶ ವಿಧಾನ ಪರಿಷತ್ತು ಕಾಂಗ್ರೆಸ್ ಮುಕ್ತವಾಗಿದೆ.
ಜನವರಿ 5, 1887ರಲ್ಲಿ ವಿಧಾನಪರಿಷತ್ ರಚನೆಯಾಗಿತ್ತು. ಅಂದಿನಿಂದ ಎಲ್ಲ ಸರಕಾರಗಳಲ್ಲೂ ಕಾಂಗ್ರೆಸ್ ವಿಧಾನ ಪರಿಷತ್ನಲ್ಲಿ ಪ್ರತಿನಿಧಿಗಳನ್ನು ಹೊಂದಿತ್ತು. ಅನೇಕ ವರ್ಷ ರಾಜ್ಯವನ್ನು ಆಳಿರುವ ಕಾಂಗ್ರೆಸ್ ಪ್ರಸ್ತುತ ತನ್ನ ಅಸ್ತಿತ್ವವನ್ನು ಬಹುತೇಕ ಕಳೆದುಕೊಂಡಿದೆ. ವಿಧಾನಸಭೆಯಲ್ಲೂ ಕಾಂಗ್ರೆಸ್ ಹೊಂದಿರುವುದು ಇಬ್ಬರು ಶಾಸಕರನ್ನು. ಪಕ್ಷವನ್ನು ಪ್ರಸ್ತುತ ಇತರರ ಸಾಲಿನಲ್ಲಿ ಗುರುತಿಸಲಾಗುತ್ತಿದೆ.
ಸಮಾಜವಾದಿ ಪಕ್ಷದ ಆರು, ಬಿಜೆಪಿಯ ಮೂವರು ಹಾಗೂ ಕಾಂಗ್ರೆಸ್ ಪಕ್ಷದ ಓರ್ವ ಸದಸ್ಯ ಉತ್ತರ ಪ್ರದೇಶ ವಿಧಾನ ಪರಿಷತ್ ನಿಂದ ನಿನ್ನೆ ನಿವೃತ್ತರಾದರು. ಬಿಜೆಪಿಯ ಕೇಶವ್ ಮೌರ್ಯ ಮತ್ತು ಚೌಧರಿ ಭೂಪೇಂದ್ರ ಸಿಂಗ್ ಅವರ ಅಧಿಕಾರವಧಿ ಕೂಡಾ ಮುಗಿದಿತ್ತು. ಆದರೆ ಇವರಿಬ್ಬರೂ ಜೂನ್ ಮಧ್ಯದಲ್ಲಿ 13 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮತ್ತೆ ವಿಧಾನಪರಿಷತ್ತಿಗೆ ಆಯ್ಕೆಯಾಗಿದ್ದರು.
ಈ ಸದಸ್ಯರ ನಿವೃತ್ತಿಯೊಂದಿಗೆ ಬಿಜೆಪಿಯ 9, ಎಸ್ಪಿಯ ನಾಲ್ವರು ಸೇರಿದಂತೆ ಜೂನ್ 20 ರಂದು ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿರುವ 13 ನೂತನ ವಿಧಾನ ಪರಿಷತ್ ಸದಸ್ಯರ ಅಧಿಕಾರವಧಿ ಆರಂಭವಾಗಿದೆ. ಪ್ರಸ್ತುತ ಬಿಜೆಪಿ ಮತ್ತು ಅದರ ಮೈತ್ರಿಕೂಟ 75 ಸದಸ್ಯರು, ಸಮಾಜವಾದಿ ಪಕ್ಷ 9, ಬಿಎಸ್ ಪಿ 1, ರಾಜ ಭಯ್ಯಾ ನೇತೃತ್ವದ ಜನಸತ್ತಾ ದಳದ 1 ಹಾಗೂ 6 ಪಕ್ಷೇತರ ಸದಸ್ಯರು ಉತ್ತರ ಪ್ರದೇಶ ವಿಧಾನಪರಿಷತ್ತಿನಲ್ಲಿದ್ದಾರೆ.
ಉತ್ತರ ಪ್ರದೇಶ ವಿಧಾನ ಪರಿಷತ್ನಲ್ಲಿ ಕಾಂಗ್ರೆಸ್ ಸದಸ್ಯರೇ ಇಲ್ಲ!
Recent Comments
ಕಗ್ಗದ ಸಂದೇಶ
on