Saturday, October 1, 2022
spot_img
HomeUncategorizedಭ್ರಷ್ಟಾಚಾರ ಪ್ರತಿಬಂಧ ಕಾಯ್ದೆ ಅಧಿನಿಯಮ 1988

ಭ್ರಷ್ಟಾಚಾರ ಪ್ರತಿಬಂಧ ಕಾಯ್ದೆ ಅಧಿನಿಯಮ 1988

ಭ್ರಷ್ಟಾಚಾರ ಎಂಬ ಪಿಡುಗು ಸಮಾಜದ ಬಡ ಮತ್ತು ಮಧ್ಯಮ ವರ್ಗದ ಜನರನ್ನು ಶೋಷಿಸುವ ಅತ್ಯಂತ ಹೀನಕರವಾದ ಸಾಮಾಜಿಕ ಪಿಡುಗಾಗಿದ್ದು ಆಡಳಿತ ಸುಧಾರಣೆಯ ದೃಷ್ಟಿಯಿಂದ ಇದು ಸರಕಾರಕ್ಕೆ ನಿಯಂತ್ರಿಸಲಾಗದ ಸಮಸ್ಯೆಯಾಗಿರುತ್ತದೆ. ಸರಕಾರ, ವಿವಿಧ ಸಾರ್ವಜನಿಕ ವಲಯಗಳಲ್ಲಿ ಮತ್ತು ವಿವಿಧ ಅಂಗ ಸಂಸ್ಥೆಗಳಲ್ಲಿ ಭ್ರಷ್ಟಾಚಾರ ಎಂಬ ಪದವು ಸರ್ವೇ ಸಾಮಾನ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಸರಕಾರವು ಲೋಕಾಯುಕ್ತ ಮತ್ತು ಭ್ರಷ್ಟಾಚಾರ ವಿರೋಧಿ ದಳ (ಎಸಿಬಿ) ಮೊದಲಾದ ವಿವಿಧ ಸಂಸ್ಥೆಗಳ ಮುಖಾಂತರ ಭ್ರಷ್ಟ ಅಧಿಕಾರಿಗಳನ್ನು, ಸಾರ್ವಜನಿಕ ಮತ್ತು ಸರಕಾರಿ ನೌಕರರನ್ನು ಮಟ್ಟ ಹಾಕಲು ಪ್ರಯತ್ನಿಸಿದರೂ ಈ ನಿಟ್ಟಿನಲ್ಲಿ ಸಂಪೂರ್ಣ ಯಶಸ್ಸನ್ನು ಈ ತನಕ ಕಂಡಿರುವುದಿಲ್ಲ. ಭ್ರಷ್ಟ ಅಧಿಕಾರಿಗಳಿಗೆ ಸರಕಾರವು ರಕ್ಷಣೆ ನೀಡುತ್ತಿದೆ ಎಂಬ ಆರೋಪವು ದಿನೇ ದಿನೇ ಹೆಚ್ಚಾದಂತೆ ರಾಜ್ಯ ಸರಕಾರವು ಭ್ರ್ರಷ್ಟಾಚಾರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿರಿಸಿದೆ. ಇದರ ಪರಿಣಾಮವಾಗಿ ಲೋಕಾಯುಕ್ತ ದಾಳಿಗೆ ಒಳಗಾದ ಸರಕಾರಿ ಅಧಿಕಾರಿಗಳ ಮತ್ತು ಸಾರ್ವಜನಿಕ ನೌಕರರ ಆದಾಯವು ಮಿತಿಗಿಂತ ಜಾಸ್ತಿ ಇರುವುದು ಮೇಲ್ನೊಟಕ್ಕೆ ಕಂಡು ಬಂದರೆ ಅಂತಹ ಅಧಿಕಾರಿಗಳನ್ನು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಲು ಸರಕಾರವು ಆಯಾಯ ಇಲಾಖೆಯ ಮುಖ್ಯಸ್ಥರಿಗೆ ನಿರ್ದೆಶನವನ್ನು ನೀಡಿರುತ್ತದೆ. ಈ ಹಿಂದೆ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರದ ಆರೋಪ ಹೊಂದಿರುವ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಅವರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರೂ ಅಂತಹವರನ್ನು ಅಮಾನತಿನಲ್ಲಿಡಲು ಇಲಾಖೆಗಳ ಮುಖ್ಯಸ್ಥರ ನೇತೃತ್ವದ ಸಕ್ಷಮ ಪ್ರಾಧಿಕಾರ ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು ಮಾತ್ರವಲ್ಲದೇ ಈ ಬಗ್ಗೆ ಸರಕಾರದ ಅನುಮತಿಗಾಗಿ ಕಾಯಬೇಕಿತ್ತು. ಈ ಬದಲಾವಣೆಯಿಂದಾಗಿ ಲಂಚ ಪ್ರಕರಣಗಳಲ್ಲಿ ಸಿಕ್ಕಿ ಬೀಳುವ ಭ್ರಷ್ಟ ಅಧಿಕಾರಿಗಳು ಅಥವಾ ಸರಕಾರಿ ನೌಕರರ ವಿರುದ್ಧ ಮೇಲ್ನೊಟಕ್ಕೆ ಕಾಣುವ ಸಾಕ್ಷವಿದ್ದಲ್ಲಿ ಅಂತಹವರನ್ನು ಕೂಡಲೇ ಅವರ ಸೇವೆಯಿಂದ ಅಮಾನತು ಗೊಳಿಸಬೇಕಾಗುತ್ತದೆ. ಮಾತ್ರವಲ್ಲದೇ ಅದಕ್ಕಿಂತ ಮುಂಚಿತವಾಗಿ ಅಂತಹ ಭ್ರಷ್ಟ ಅಧಿಕಾರಿಗಳ ನಿವಾಸದ ಮೇಲೆ ದಾಳಿ ನಡೆಸುವ ಪೊಲೀಸರು ಪತ್ತೆ ಹಚ್ಚುವ ಅಕ್ರಮ ಸಂಪಾದನೆ, ಆಸ್ತಿ ವಿವರ ಇವೆಲ್ಲವುಗಳ ವಿವರವನ್ನು ಸಹಾ ಪ್ರಾಧಿಕಾರವು ಪಡೆದು ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕಾಗುತ್ತದೆ. ಲಂಚದ ಪ್ರಕರಣದಲ್ಲಿ ಸಿಕ್ಕಿಬಿದ್ದ ಭ್ರಷ್ಟ ಅಧಿಕಾರಿಗಳನ್ನು ಮತ್ತು ಸರಕಾರಿ ನೌಕರರನ್ನು ಅವರು ಆರೋಪದಿಂದ ಮುಕ್ತರಾಗುವವರೆಗೆ ಮತ್ತೆ ಸೇವೆಗೆ ತೆಗೆದುಕೊಳ್ಳಲು ಅವಕಾಶ ಇರುವುದಿಲ್ಲ.

ಕೆ. ವಿಜೇಂದ್ರ ಕುಮಾರ್, ಹಿರಿಯ ವಕೀಲರು
98452 32490, 96116 82681

LEAVE A REPLY

Please enter your comment!
Please enter your name here

Most Popular

error: Content is protected !!