ಪಿಎಸ್‌ಐ ನೇಮಕಾತಿ ಹಗರಣ: ಪ್ರಭಾವಿಯೊಬ್ಬರ ಹೆಸರು ಪ್ರಸ್ತಾಪ?

ಬೆಂಗಳೂರು: ರಾಜ್ಯದಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿರುವ ಪಿಎಸ್‌ಐ ನೇಮಕಾತಿ ಹಗರಣದ ಕರ್ಮಕಾಂಡಗಳು ಇದೀಗ ಒಂದೊಂದಾಗಿ ಹೊರಬೀಳುತ್ತಿವೆ. ಹಿಂದೆ ಅಧಿಕಾರದಲ್ಲಿದ್ದ ಪ್ರಭಾವಿಯೊಬ್ಬರ ಜತೆ ಸೇರಿಕೊಂಡು ಹಗರಣಕ್ಕೆ ಸಂಬಂಧಿಸಿ ಸೆರೆಯಾಗಿರುವ ಐಪಿಎಸ್‌ ಅಧಿಕಾರಿ ಎಡಿಜಿಪಿ ಅಮೃತ್‌ ಪೌಲ್‌ ಹಾಗೂ ಇನ್ನಿತರರು ಅಕ್ರಮ ಎಸಗಿದ್ದಾರೆ ಎಂಬುದು ಸಿಐಡಿ ತನಿಖೆಯಿಂದ ತಿಳಿದುಬಂದಿದೆ. ಎಲ್ಲ 545 ಪಿಎಸ್‌ಐ ಹುದ್ದೆಗಳಿಗೂ ಕಮಿಷನ್‌ ಫಿಕ್ಸ್‌ ಆಗಿತ್ತು. ಅದನ್ನು ವಸೂಲು ಮಾಡುವ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗಿತ್ತು ಎಂಬ ಅಂಶ ತನಿಖೆಯಿಂದ ಬಯಲಾಗಿದೆ.ಈ ಪ್ರಭಾವಿ ಯಾರು ಎನ್ನುವ ಕುತೂಹಲ ಮೂಡಿದ್ದು, ಸದ್ಯದಲ್ಲೇ ಇನ್ನೂ ದೊಡ್ಡ ಕುಳಗಳು ಬಲೆಗೆ ಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತದೆ.
ಈ ಹಗರಣ ಮೇಲ್ನೋಟಕ್ಕೆ ಕಾಣಿಸುವಷ್ಟು ಸರಳವಾಗಿಲ್ಲ. ಬಹಳ ಹಿಂದೆಯೇ ಹರಗರಣದ ಸ್ಕೆಚ್ ರೆಡಿಯಾಗಿತ್ತು. ಎಲ್ಲವೂ ಬಹಳ ವ್ಯವಸ್ಥಿತವಾಗಿ ನಡೆದಿದೆ. ಯಾರಿಗೆ ಎಷ್ಟು ಪರ್ಸೆಂಟ್‌ ಕಮಿಷನ್‌ ಪಾವತಿಯಾಗಬೇಕೆನ್ನುವುದೆಲ್ಲ ಮೊದಲೇ ನಿರ್ಧಾರವಾಗಿತ್ತು. ಅಭ್ಯರ್ಥಿಗಳನ್ನು ಸಂಪರ್ಕಿಸುವ ವಿಧಾನ, ಅವರಿಗೆ ನೆರವಾಗುವ ರೀತಿ ಎಲ್ಲವೋ ಮೊದಲೇ ನಿರ್ಧರಿಸಿದಂತೆ ನಡೆದಿದೆ. ಇನ್ನೂ ಹಲವು ದೊಡ್ಡ ಅಧಿಕಾರಿಗಳು ಮತ್ತು ಪ್ರಭಾವಿಗಳು ಇದರಲ್ಲಿ ಶಾಮಿಲಾಗಿರುವ ಸಂಶಯ ಇದೆ ಎಂದು ಮೂಲಗಳು ತಿಳಿಸಿವೆ.
ಶೇ.20 ಲಂಚ
ಪಿಎಸ್‌ಐ ಹುದ್ದೆ ಗಿಟ್ಟಿಸಿಕೊಳ್ಳಲು ನೀಡಿದ ಅಭ್ಯರ್ಥಿಗಳು ನೀಡಿದ ಲಂಚದಲ್ಲಿ ಅಮೃತ್‌ ಪೌಲ್‌ ಶೇ.20 ಪಾಲು ಪಡೆದುಕೊಂಡಿದ್ದರು ಅಂಬ ಅಂಶವನ್ನು ಸಿಐಡಿ ತನಿಖೆಯಿಂದ ಪತ್ತೆಹಚ್ಚಿದೆ. ಯಾರಿಗೆಲ್ಲ ಹಣ ಸಂದಾಯವಾಗಿದೆ ಎಂಬುದರ ದಾಖಲೆಯನ್ನು ಬಯಲಿಗೆಳೆಯಲು ಸಿಐಡಿ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಸರಕಾರಿ ಟೆಂಡರ್‌ಗಳ ಕಮಿಷನ್‌ ಮಾದರಿಯಲ್ಲೇ ಪಿಎಸ್‌ಐ ನೇಮಕಾತಿ ಮೇಲೆ ಕಮಿಷನ್‌ ಪಡೆಯಲಾಗಿದೆ. ಪೊಲೀಸ್‌ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಅಮೃತ್‌ ಪೌಲ್‌ ಮೇಲೇಯೇ ನೇಮಕಾತಿ ಹೊಣೆ ಇತ್ತು. ಸರಕಾರದ ಒಪ್ಪಿಗೆ ಪಡೆದು ಅವರು ನೇಮಕಾತಿ ಪ್ರಕ್ರಿಯೆ ಪಾರರಂಭಿಸಿದ್ದರು. ಇದೀಗ ಅವರೇ ಹಗರಣದಲ್ಲಿ ಶಾಮೀಲಾಗಿರುವುದು ಹೇಗೆ ಮೇಲಿನ ಮಟ್ಟದಲ್ಲೇ ವ್ಯವಸ್ಥೆಯೊಳಗೆ ಭ್ರಷ್ಟಾಚಾರ ಹಾಸುಹೊಕ್ಕಾಗಿದೆ ಎನ್ನುವುದನ್ನು ಸಾಬೀತುಪಡಿಸಿದೆ. ನೇಮಕಾತಿಗೆ ಅಧಿಸೂಚನೆ ಹೊರಡಿಸುವ ಮೊದಲೇ ಪಿಎಸ್‌ಐ ಅಭ್ಯರ್ಥಿಗಳ ಹುಡುಕಾಟ ಪ್ರಾರಂಭವಾಗಿತ್ತು. ಅಂದರೆ ಎಲ್ಲ ನೇಮಕಾತಿಯನ್ನು ಲಂಚ ಪಡೆದೇ ಮಾಡಬೇಕೆಂದು ಉನ್ನತ ಮಟ್ಟದಲ್ಲೇ ಮೊದಲೇ ತೀರ್ಮಾನವಾಗಿತ್ತು ಎಂದು ಸಿಐಡಿ ಮೂಲ ತಿಳಿಸಿದೆ.
ಕಲಬುರಗಿ, ಬೆಂಗಳೂರು ಸೇರಿ ಕೆಲವು ಜಿಲ್ಲೆಗಳಲ್ಲಿ ಅಭ್ಯರ್ಥಿಗಳು ಹಣ ನೀಡಲು ಒಪ್ಪಿದ್ದರು. ಕೆಲವರು ಕಂತಿನಲ್ಲಿ ಪಾವತಿಸಿದ್ದರು ಕೂಡ. ಅನಂತರವೇ ಕೌಲ್‌ ಅಭ್ಯರ್ಥಿಗಳ ಒಎಂಆರ್‌ ತಿದ್ದುಪಡಿ ಮಾಡಲು ಸೂಚಿಸಿದ್ದರು. ಹಣ ಪಾವತಿಸಿದ ಅಭ್ಯರ್ಥಿಗಳ ಹೆಸರು ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿತ್ತು.
ಪೌಲ್‌ ಸೂಚನೆಯಂತೆ ಭದ್ರತಾ ಕೊಠಡಿಯ ಬೀಗ ತೆರೆದು ಅಭ್ಯರ್ಥಿಗಳ ಒಎಂಆರ್‌ ತಿದ್ದುಪಡಿ ಮಾಡಲಾಗಿತ್ತು. ಲಂಚದ ಹಣದಲ್ಲಿ ಮೇಲಿನವರು, ಕೆಲವು ಪ್ರಭಾವಿಗಳು ಪಾಲು ಪಡೆದುಕೊಂಡಿದ್ದಾರೆಂದು ಸೆರೆಯಾದ ಡಿವೈಎಸ್‌ಪಿ ಹೇಳೀಕೆ ನೀಡಿದ್ದರು. ಈ ಹೇಳಿಕೆಯೇ ಕೌಲ್‌ ಮೇಲೆ ತನಿಖಾಧಿಕಾರಿಗಳಿಗೆ ಅನುಮಾನ ಬರಲು ಕಾರಣವಾಗಿತ್ತು.
ರಿಯಲ್‌ ಎಸ್ಟೇಟ್‌ ನಂಟು
ಅಮೃತ್‌ ಪೌಲ್‌ಗೆ ಕೆಲವು ದೊಡ್ಡ ದೊಡ್ಡ ಬಿಲ್ಡರ್‌ಗಳ ಜತೆ ನಂಟು ಇದ್ದು, ಅವರು ಲಂಚದ ಹಣವನ್ನು ಈ ಬಿಲ್ಡರ್‌ಗಳ ಮೂಲಕ ರಿಯಲ್‌ ಎಸ್ಟೇಟ್‌ ದಂಧೆಯಲ್ಲಿ ತೊಡಗಿಸಿರುವ ಅನುಮಾನವಿದೆ. ಅವರಿಗೆ ಬೆಂಗಳೂರು ನಗರದ ಕಮಿಷನರ್‌ ಆಗುವ ಮಹತ್ವಾಕಾಂಕ್ಷೆಯಿತ್ತು. ಇದಕ್ಕಾಗಿ ಕೋಟಿಗಟ್ಟಲೆ ಲಂಚ ನೀಡಲು ಕೂಡ ತಯಾರಾಗಿದ್ದರು ಎಂಬ ಅಂಶ ಅವರ ವಿಚಾರಣೆಯಿಂದ ತಿಳಿದುಬಂದಿದೆ.
ನಿಯಮ ಸಾರಾ ಸಗಟು ಉಲ್ಲಂಘನೆ
ನೇಮಕಾತಿ ನಿಯಮಗಳ ಪ್ರಕಾರ ಒಂದೇ ಅಧಿಸೂಚನೆಯಡಿಯಲ್ಲಿ ಏಕಕಾಲದಲ್ಲಿ 545 ಪಿಎಸ್‌ಐಗಳನ್ನು ನೇಮಕ ಮಾಡಿಕೊಳ್ಳಲು ಅವಕಾಶವಿಲ್ಲ.ಹೀಗಾಗಿ ಸರಕಾರ ಮೊದಲು ಈ ನೇಮಕಾತಿ ಪ್ರಸ್ತಾವವನ್ನು ತಿರಸ್ಕರಿಸಿತ್ತು. ಆದರೆ ಸರಕಾರದಲ್ಲಿ ತನ್ನದೇ ಆದ ಹಿಡಿತ ಹೊಂದಿರುವ ಪ್ರಭಾವಿಯೊಬ್ಬರು ಸರಕಾರದ ಮೇಲೆ ಒತ್ತಡ ಹೇರಿ ನೇಮಕಾತಿ ಪ್ರಕ್ರಿಯೆ ಮುಂದುವರಿಯುವಂತೆ ಮಾಡಿದ್ದರು. ಇದಕ್ಕಾಗಿ ಅವರಿಗೆ ಶೇ.30ರಷ್ಟು ಕಮಿಷನ್‌ ಸಂದಾಯವಾಗಿತ್ತು ಎಂಬ ವಿಚಾರ ತನಿಖೆಯಿಂದ ತಿಳಿದು ಬಂದಿದೆ.
50-50 ವ್ಯವಸ್ಥೆ
ಶೇ.50 ಕಮಿಷನ್‌ ನಿರ್ಧಾರಗಳನ್ನು ಕೈಗೊಳ್ಳುವ ಮೇಲ್ಮಟ್ಟದವರಿಗೆ ಉಳಿದ ಶೇ.50 ಗ್ರೌಂಡ್‌ ಲೆವೆಲ್‌ನಲ್ಲಿ ಕೆಲಸ ಮಾಡುವವರಿಗೆ ಎಂಬ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿತ್ತು. ಕೆಳ ಹಂತದ ಶೇ. 50ರಲ್ಲಿ ಮಧ್ಯವರ್ತಿಗಳು, ಕಾನ್‌ಸ್ಟೆಬಲ್‌ಗಳೆಲ್ಲ ಬರುತ್ತಾರೆ.





























































































































































































































error: Content is protected !!
Scroll to Top