Homeಸುದ್ದಿಎಸಿಬಿಯನ್ನು ಕಲೆಕ್ಷನ್‌ ಸೆಂಟರ್‌ ಎಂದ ನ್ಯಾಯಾಧೀಶ

Related Posts

ಎಸಿಬಿಯನ್ನು ಕಲೆಕ್ಷನ್‌ ಸೆಂಟರ್‌ ಎಂದ ನ್ಯಾಯಾಧೀಶ

ಬೆಂಗಳೂರು:ರಾಜ್ಯದ ಭ್ರಷ್ಟಾಚಾರ ನಿಗ್ರಹ ದಳವನ್ನು ಹೈಕೋರ್ಟ್ ನ್ಯಾಯಾಧೀಶರೊಬ್ಬರು ‘ಕಲೆಕ್ಷನ್ ಸೆಂಟರ್’ ಎಂದು ಕರೆದಿದ್ದಾರೆ. ಎಸಿಬಿ ಭ್ರಷ್ಟಾಚಾರದ ಕೂಪವಾಗಿದೆ, ಅದರ ಮುಖ್ಯಸ್ಥರೇ ಕಳಂಕಿತ ವ್ಯಕ್ತಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ಹೈಕೋರ್ಟ್ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ಈಗ ತನಗೆ ವರ್ಗಾವಣೆ ಬೆದರಿಕೆಗೆ ಬಂದಿದ್ದು, ಇದಕ್ಕೆಲ್ಲ ನಾನು ಹೆದರುವುದಿಲ್ಲ ಎಂದಿದ್ದಾರೆ.
ಹೈಕೋರ್ಟ್​ನಲ್ಲಿ ಸೋಮವಾರ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಯ ವಿರುದ್ಧದ ಲಂಚ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯದ ಸಭಾಂಗಣದಲ್ಲೇ ತಮಗೆ ಪರೋಕ್ಷವಾಗಿ ವರ್ಗಾವಣೆ ಬೆದರಿಕೆ ಬಂದಿರುವ ವಿಚಾರ ತಿಳಿಸಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರಕರಣದಲ್ಲಿ ಆರೋಪಿಯಾಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯ ಉಪ ತಹಶೀಲ್ದಾರ್ ಪಿ.ಎಸ್‌. ಮಹೇಶ್‌ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ಸಂದೇಶ್‌, ಸಾಂವಿಧಾನಿಕ ಹುದ್ದೆ ನಿಭಾಯಿಸುವ ನ್ಯಾಯಮೂರ್ತಿಗಳು ಯಾವುದೇ ಪಕ್ಷದ ಸಿದ್ಧಾಂತದ ಪರವಾಗಿ ಇರಬಾರದು. ರಾಜ್ಯ ಸರ್ಕಾರ ಐಎಎಸ್‌ ಮತ್ತು ಐಪಿಎಸ್‌ ಲಾಬಿಯ ಆಣತಿಯಂತೆ ನಡೆಯುತ್ತಿದ್ದು ಸರ್ಕಾರವೂ ಅಪರಾಧದ ಭಾಗವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಿನ ಕಲಾಪದಲ್ಲಿ, ನನಗೆ ವರ್ಗಾವಣೆ ಬೆದರಿಕೆ ಹಾಕಿದ ನ್ಯಾಯಮೂರ್ತಿ ಯಾರು ಎಂಬ ವಿವರವನ್ನೆಲ್ಲಾ ಮಧ್ಯಾಹ್ನದ ಕಲಾಪದಲ್ಲಿ ಆದೇಶದಲ್ಲೇ ಬರೆಯಿಸಿ ತೀರುತ್ತೇನೆ ಎಂದು ಹೇಳಿದ್ದರು. ಮಧ್ಯಾಹ್ನ ಕಲಾಪ ಮುಂದುವರಿದಾಗ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ಕೆ.ನಾವದಗಿ ಹಾಜರಾಗಿ, ‘ಸರ್ಕಾರ ಯಾರನ್ನೂ ರಕ್ಷಣೆ ಮಾಡುತ್ತಿಲ್ಲ. ನಿಮಗೆ ನೋವು ಎನಿಸಿದ್ದರೆ ಅದು ನಮಗೇನೂ ಖುಷಿ ಉಂಟು ಮಾಡುವ ಸಂಗತಿಯಲ್ಲ. ಆದ್ದರಿಂದ, ತಾವು ಯಾವುದಕ್ಕೂ ಬೇಸರ ಮಾಡಿಕೊಳ್ಳಬಾರದು. ಎಸಿಬಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನೂ ನೀಡುತ್ತೇವೆ. ಬಿ ರಿಪೋರ್ಟ್‌ನ ಸಂಪೂರ್ಣ ಮಾಹಿತಿಯನ್ನೂ ಕೊಡುತ್ತೇವೆ. ಸರ್ಕಾರ ಹೈಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತದೆ ಎಂಬ ಭರವಸೆ ನೀಡಿದರು.
ಇದಕ್ಕೆ ಸಂದೇಶ್‌, ನನಗೆ ವರ್ಗಾವಣೆಯ ಪರೋಕ್ಷ ಬೆದರಿಕೆ ಹಾಕಲಾಗಿದೆ. ನಾನೀಗ ನ್ಯಾಯಾಂಗದ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಬೇಕಿದೆ. ಜಡ್ಜ್ ಆದ ಮೇಲೆ ನಾನು ಒಂದಿಂಚೂ ಆಸ್ತಿ ಮಾಡಿಲ್ಲ. ವರ್ಗಾವಣೆ ಬೆದರಿಕೆ ಎದುರಿಸುತ್ತೇನೆ. ಜನರ ಒಳಿತಿಗಾಗಿ ವರ್ಗಾವಣೆಯಾಗಲು ಸಿದ್ಧನಿದ್ದೇನೆ, ನನಗೆ 500ರಲ್ಲಿ ಜೀವನ ಮಾಡಿಯೂ ಗೊತ್ತು, 5,000 ರೂ.ನಲ್ಲಿ ಜೀವನ ಮಾಡಿಯೂ ಗೊತ್ತು. ಯಾರ ಹೆದರಿಕೆಯೂ ಇಲ್ಲ, ಬೆಕ್ಕಿಗೆ ಗಂಟೆ ಕಟ್ಟಲು ಸಿದ್ದನಿದ್ದೇನೆ. ಇವತ್ತು ಭ್ರಷ್ಟಾಚಾರ ಸಮಾಜದಲ್ಲಿ ಕ್ಯಾನ್ಸರ್‌ ಆಗಿ ಪರಿಣಮಿಸಿದೆ ಎಂದರು.

LEAVE A REPLY

Please enter your comment!
Please enter your name here

Latest Posts

error: Content is protected !!