Saturday, October 1, 2022
spot_img
Homeಸುದ್ದಿಕಗ್ಗದ ಸಂದೇಶ-ಅನ್ನದ ಋಣ ಎಲ್ಲಿರುವುದೆಂದು ಬಲ್ಲವರಾರು….

ಕಗ್ಗದ ಸಂದೇಶ-ಅನ್ನದ ಋಣ ಎಲ್ಲಿರುವುದೆಂದು ಬಲ್ಲವರಾರು….

“ಇಂದು ಮದುವೆಯ ಹಬ್ಬ, ನಾಳೆ ವೈಕುಂಠ ತಿಥಿ|
ಇಂದು ಮೃಷ್ಟಾನ್ನ ಸುಖ, ನಾಳೆ ಭಿಕ್ಷಾನ್ನ||
ಇಂದು ಬರಿಯುಪವಾಸ,ನಾಳೆ ಪಾರಣೆ-ಯಿಂತು|
ಸಂದಿರುವುದನ್ನ ಋಣ-ಮಂಕುತಿಮ್ಮ||”

ಇಂದು ಸಂಭ್ರಮ ಪಡುವಂತಹ ಮದುವೆಯ ಹಬ್ಬವಾದರೆ ನಾಳೆ ದುಃಖದ ವೈಕುಂಠ ತಿಥಿ. ಇಂದು ಬಗೆಬಗೆಯ ರುಚಿಯಿಂದ ಕೂಡಿದ ಮೃಷ್ಟಾನ್ನದ ಸುಖವಾದರೆ ನಾಳೆ ಭಿಕ್ಷೆ ಬೇಡಿದ ಅನ್ನವನ್ನು ಉಣಬೇಕಾಗುತ್ತದೆ.ಹೀಗೆ ನಮ್ಮ ಬದುಕಿನ ಅನ್ನದ ಋಣ ತೀರುತ್ತದೆ ಎನ್ನುವುದನ್ನು ಮಾನ್ಯ ಡಿವಿಜಿಯವರು ಈ ಮುಕ್ತಕದಲ್ಲಿ ಹೇಳಿದ್ದಾರೆ.
ಜೀವನ ಎನ್ನುವುದು ಬೇವುಬೆಲ್ಲದಂತೆ .ಹೂವಿನ ಹಾಸಿಗೆಯೂ ಅಲ್ಲ; ಮುಳ್ಳಿನ ದಾರಿಯೂ ಅಲ್ಲ.ಬದುಕಿನ ಅನಿವಾರ್ಯ ಭಾಗಗಳಾಗಿರುವ ಕಷ್ಷಸುಖ ಎರಡನ್ನು ಸಂತೋಷದಿಂದ ಅನುಭವಿಸುವ‌ ಮನೋಭಾವ ಬೆಳೆಸಿಕೊಳ್ಳಬೇಕು.
ಬಾಳೆಲ್ಲ ಬೇವಲ್ಲ ಬರಿ ಬೆಲ್ಲಮುಂ ಅಲ್ಲ|
ಮೇಳವಿಸಿ ಕೂಡಿಹವು ಇವುಗಳೆರಡು|
ಗೋಳಾಡದಿರು ಬರಿದೆ ಬಹುಕಷ್ಟಬಂತೆಂದು|
ತಾಳು ಸುಖ ಬರುವನಕ-ಬೋಳುಬಸವ||

ಎಂಬ ನಿಜಗುಣ ಕವಿಯ ನುಡಿಯಂತೆ ಜೀವನವೆನ್ನುವುದು ಕೇವಲ ಸುಖದ ಆಗರವಲ್ಲ ಅಥವಾ ಬರೀ ದುಃಖದ ನೆಲೆಯೂ ಅಲ್ಲ. ಸುಖದುಃಖ ಎರಡನ್ನು ಸಕಾರಾತ್ಮಕವಾಗಿ ಸ್ವೀಕರಿಸುವ ಮನೋಭಾವ ನಮ್ಮದಾಗಬೇಕು.

ಅನ್ನ ಋಣ ಲೋಕದಲಿ ಯಾರಿಗೆಷ್ಟೋ ಅಷ್ಟೆ|
ತುತ್ತೊಂದು ಹಚ್ಚಿಲ್ಲ ಅದು ಕಡಿಮೆಯಿಲ್ಲ|
ಹಿಡಿದು ತಕ್ಕಡಿಯ ಎಲ್ಲೊ ಗಮನಿಸುತಿಹೆನಿದನೆಲ್ಲ|
ಅನ್ನದಾತನೊ ಅವನು ಮುದ್ದುರಾಮ||

ಎಂಬ ಕವಿ ಕೆ.ಶಿವಪ್ಪನವರ ಮಾತಿನಂತೆ ಯಾರ್ಯಾರಿಗೆ ಅನ್ನ ಋಣ ಎಷ್ಟು? ಮತ್ತು ಹೇಗೆ? ಎನ್ನುವುದು ಮೊದಲೇ ನಿಗದಿಯಾಗಿರುತ್ತದೆ.ಆ ಅನ್ನವು ಸಂತೋಷದ ಹಬ್ಬದೂಟದ್ದೂ ಆಗಬಹುದು ಅಥವಾ ದುಃಖದ ತಿಥಿಯೂಟದ್ದೂ ಆಗಿರಬಹುದು. ಹಾಗಯೇ ಇಲ್ಲಿ ಯಾರೂ ಮತ್ತು ಯಾವುದೂ ಶಾಶ್ವತವೂ ಅಲ್ಲ ಎನ್ನುವುದನ್ನು ಮರೆಯಬಾರದು. ಆದ್ದರಿಂದ ಸಂಭ್ರಮದ ಹಬ್ಬವಿರಲಿ ದುಃಖದ ತಿಥಿ ಇರಲಿ ಎಲ್ಲವೂ ಬದುಕಿನ ಅನಿವಾರ್ಯ ಭಾಗಗಳು ಎಂದು ಭಾವಿಸಿ ಅನುಭವಿಸುವುದನ್ನು ಕಲಿತಾಗಲೇ ಜೀವನ ಸಾರ್ಥಕವಾಗುವುದಲ್ಲವೆ?
ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಅಧ್ಯಕ್ಷರು, ಕಸಾಪ, ಕಾರ್ಕಳ ಘಟಕ

ಪ್ರಭಾಕರ ಶೆಟ್ಟಿ ಕೊಂಡಳ್ಳಿ

LEAVE A REPLY

Please enter your comment!
Please enter your name here

Most Popular

error: Content is protected !!