ಕಾರ್ಕಳ : ಕಾರ್ಕಳದಲ್ಲಿ ಮರಳಿ ಕಾಂಗ್ರೆಸ್ ಕಟ್ಟುತ್ತೇವೆ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿರುತ್ತಾರೆ. ಬೂತ್ ನಲ್ಲಿ ಕೂರಲು ಕಾಂಗ್ರೆಸ್ ಪಕ್ಷದಲ್ಲಿ ಜನ ಇಲ್ಲ. ಬೆಂಗಳೂರು ಹಾಗೂ ದೆಹಲಿಯಲ್ಲೇ ಇರುವ ಮೊಯ್ಲಿ ಅವರಿಗೆ ಇದರ ಬಗ್ಗೆ ಮಾಹಿತಿಯಿಲ್ಲ. ಕಾರ್ಕಳ ಕ್ಷೇತ್ರದ ಒಂದೆರಡು ಪಂಚಾಯತ್‌ನಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿದೆ. ಅದನ್ನು ನಿರ್ಮೂಲನೆ ಮಾಡಿದಾಗ ವೀರಪ್ಪ ಮೊಯ್ಲಿ ಅವರಿಗೆ ಈ ವಿಚಾರ ಅರಿವಿಗೆ ಬರಬಹುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ ಹೇಳಿದರು.
ಅವರು ಭಾನುವಾರ ನಗರದ ಮಂಜುನಾಥ ಪೈ ಸಭಾಂಗಣದ ಬಿಜೆಪಿ ಯುವಮೋರ್ಚಾ ಕಾರ್ಕಳ ಘಟಕ ಆಯೋಜಿಸಿದ 1975ರ ತುರ್ತು ಪರಿಸ್ಥಿತಿಯ ಕರಾಳ ನೆನಪುಗಳು, ಅಗ್ನಿಪಥ ಅಗತ್ಯ ಮತ್ತು ಅನಿವಾರ್ಯತೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಕಳದಲ್ಲಿ ಸುನೀಲ್ ಕುಮಾರ್ ಹಾಗೂ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಮುಕ್ತ ಮಾಡಿದಂತೆ ದೇಶದಲ್ಲೂ ಕಾಂಗ್ರೆಸ್ ಮುಕ್ತ ಮಾಡುವ ಕೆಲಸವನ್ನು ಯುವಮೋರ್ಚಾ ಕಾರ್ಯಕರ್ತರು ಮಾಡಬೇಕಿದೆ ಎಂದವರು ತಿಳಿಸಿದರು.
ತುರ್ತು ಪರಿಸ್ಥಿತಿ ಹೇರಿಕೆ
ಪರಕೀಯರು ಭಾರತದ ಮೇಲೆ ದಾಳಿ ಮಾಡುವಾಗ ಸಂಪತ್ತಿನೊಂದಿಗೆ ಇಲ್ಲಿನ ಸಂಸ್ಕೃತಿ ಮೇಲೆಯೂ ಆಕ್ರಮಣವಾಗಿದೆ. ಪರಕೀಯ ದಾಳಿಯ ಅನಂತರವೂ ಅಸ್ತಿತ್ವ ಉಳಿಸಿಕೊಂಡ ಏಕೈಕ ದೇಶವಿದ್ದರೆ ಅದು ಭಾರತ ಎಂದು ಯುವ ವಾಗ್ಮಿ ಪುಣ್ಯಪಾಲ್ ಕೊಪ್ಪ ಹೇಳಿದರು.
ಇಂಡಿಯಾ ಎಂದರೆ ಇಂದಿರಾ ಎನ್ನುವ ಮಟ್ಟಿಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನಪ್ರಿಯತೆ ಗಳಿಸಿದ್ದರು. 1975ರಲ್ಲಿ ಇಂದಿರಾ ಗಾಂಧಿಯವರು ಚುನಾವಣಾ ಅಕ್ರಮ ಎಸಗಿದ್ದಾರೆಂದು ಅಲಹಾಬಾದ್ ಕೋರ್ಟ್ ತೀರ್ಪು ನೀಡಿ ಸದಸ್ಯತ್ವ ರದ್ದು ಮಾಡಿತ್ತು. 6 ವರ್ಷ ಚುನಾವಣೆ ನಿಲ್ಲದಂತೆ ನಿರ್ಬಂಧ ಹೇರಿತ್ತು. ಆಗ ಇಂದಿರಾ ಗಾಂಧಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ಬದಿಗೆ ತಳ್ಳಿ ತುರ್ತು ಪರಿಸ್ಥಿತಿ ಹೇರಿದ್ದರು ಎಂದು ಪುಣ್ಯಪಾಲ್ ಕೊಪ್ಪ ಅಂದಿನ ಘಟನೆ ಕುರಿತು ನೆನಪು ಮಾಡಿದರು.
ರಾಜೀನಾಮೆ ನೀಡಿದ್ದರು
ಅಟಲ್ ಬಿಹಾರಿ ವಾಜಪೇಯಿ ಅವರು ಒಂದೇ ಒಂದು ಸೀಟು ಕೊರತೆಯಾದಾಗ ಅಧಿಕಾರ ಬಿಟ್ಟು ರಾಜೀನಾಮೆ ನೀಡಿದ್ದಾರೆ. ಅವರಿಗೆ ಆವಾಗ ದೇಶ ಕಂಡಿತೆ ಹೊರತು ಅಧಿಕಾರದ ಕುರ್ಚಿಯಲ್ಲ. ಭಾರತೀಯ ಜನತಾ ಪಾರ್ಟಿ, ಯುವ ಮೋರ್ಚಾ, ಎಬಿವಿಪಿ ರಾಷ್ಟ್ರೀಯತೆಯ ಹೋರಾಟ ನಡೆಸದೇ ಇದ್ದಿದ್ದರೆ ಇಂದು ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯುತ್ತಿರಲಿಲ್ಲ ಎಂದು ಹೇಳಿದ ಪುಣ್ಯಪಾಲ್ ಅಗ್ನಿಪಥ ಯೋಜನೆಯ ವಾಸ್ತವಾಂಶವನ್ನು ಜನತೆ ಮುಂದಿಡುವ ಕಾರ್ಯವನ್ನು ಯುವ ಮೋರ್ಚಾ ಕಾರ್ಯಕರ್ತರು ಮಾಡಬೇಕಾಗಿದೆ ಎಂದರು.
ಯುವ ಶಕ್ತಿ ರಾಷ್ಟ್ರ ಶಕ್ತಿ
ಯುವಶಕ್ತಿಯನ್ನು ರಾಷ್ಟ್ರ ಶಕ್ತಿ ಎಂದು ಸಾರಿದ ದೇಶ ಭಾರತ. ಅಗ್ನಿ ಪಥ ಪಕ್ಷದ ಪಥವಲ್ಲ, ಚುನಾವಣಾ ಪಥವಲ್ಲ. ಇದು ಭಾರತದ ಭವಿಷ್ಯದ ಪಥ ಎಂದು ಕರ್ನಾಟಕ ಸಾಹಿತ್ಯ ಅಕಾಡಮಿ ಅಧ್ಯಕ್ಷ ಡಾ. ಬಿ.ವಿ. ವಸಂತ್ ಹೇಳಿದರು.
ರಾಜಕೀಯ ಪಕ್ಷಗಳು ಬೆಳಕು ಮೂಡಿಸುವ ಕಾರ್ಯ ಮಾಡಬೇಕೇ ಹೊರತು ಕಿಚ್ಚು ಹಚ್ಚುವುದನ್ನಲ್ಲ. ವಿವೇಕದ ಕೊರತೆಯಾದಾಗ ಇಂತಹ ಕಾರ್ಯಗಳಾಗುತ್ತಿದೆ ಎಂದವರು ತಿಳಿಸಿದರು.
ಸಾಂಸ್ಕೃತಿಕ ಕ್ರಾಂತಿಯ ಅಲೆ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್ ಅವರು ಸಚಿವರಾದ ಬಳಿಕ ರಾಜ್ಯದಲ್ಲಿ ಸಾಂಸ್ಕೃತಿಕ ಕ್ರಾಂತಿಯುಂಟಾಗಿದೆ ಎಂದು ಡಾ. ಬಿ.ವಿ. ವಸಂತ್ ಹೇಳಿದರು.
ಗದ್ಗದಿತರಾದ ಎಂ.ಕೆ. ವಿಜಯ ಕುಮಾರ್
1975ರ ತುರ್ತು ಪರಿಸ್ಥಿತಿ ಸಂದರ್ಭ ಕಾರ್ಕಳ ಭುವನೇಂದ್ರ ಕಾಲೇಜಿನ 15 ಮಂದಿ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಅಂದು ವಕೀಲನಾಗಿದ್ದ ನಾನು ಅವರ ಪರವಾಗಿ ವಾದ ಮಂಡಿಸಿ ಸೆರೆಮನೆ ವಾಸ ತಪ್ಪಿಸಿದ್ದೆ ಎಂದು ಹೇಳಿದ ಹಿರಿಯ ನ್ಯಾಯವಾದಿ ಎಂ.ಕೆ. ವಿಜಯ ಕುಮಾರ್ ಆ ಕರಾಳ ದಿನ ನೆನೆದು ಕಣ್ಣೀರಿಟ್ಟರು. ತುರ್ತು ಪರಿಸ್ಥಿತಿ ಹೇರಿದ ಸಿಟ್ಟಲ್ಲಿ ನಾನು ಜನಸಂಘದಲ್ಲಿ ಗುರುತಿಸಿಕೊಂಡು ಹೋರಾಟಕ್ಕೆ ಧುಮುಕಿದೆ ಎಂದವರು ತಿಳಿಸಿದರು.
ಸನ್ಮಾನ
ತುರ್ತು ಸಂದರ್ಭ ಸೆರೆವಾಸ ಅನುಭವಿಸಿದ್ದ ಕಾರ್ಕಳದ ವಿಜಯೇಂದ್ರ ಕಿಣಿ ಹಾಗೂ ವಿಜಯಲಕ್ಷ್ಮೀ ಕಿಣಿ ದಂಪತಿಯನ್ನು ಇದೇ ಸಂದರ್ಭ ಗೌರವಿಸಲಾಯಿತು.
ವೇದಿಕೆಯಲ್ಲಿ ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ್ ಹೆಗ್ಡೆ, ಯುವಮೋರ್ಚಾ ಜಿಲ್ಲಾಧ್ಯಕ್ಷ ವಿಖ್ಯಾತ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರತ್ ಕುಮಾರ್ ಶೆಟ್ಟಿ, ಯುವಮೋರ್ಚಾ ತಾಲೂಕು ಅಧ್ಯಕ್ಷ ಸುಹಾಸ್ ಶೆಟ್ಟಿ ಮುಟ್ಲುಪಾಡಿ, ಶ್ವೇತಾ ಪೂಜಾರಿ, ಬಿಜೆಪಿ ಯುವ ಮೋರ್ಚಾ ಶಕ್ತಿಕೇಂದ್ರದ ಅಧ್ಯಕ್ಷರು ಉಪಸ್ಥಿತಿದ್ದರು. ತಾಲೂಕು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಭರತ್ ಜೈನ್ ಇರ್ವತ್ತೂರು ಸ್ವಾಗತಿಸಿ, ಯೋಗೀಸ್ ಸಾಲ್ಯಾನ್ ವಂದಿಸಿದರು. ಕೌಶಿಕ್ ಅಮೀನ್ ನಿರೂಪಿಸಿದರು.
