ಬೆಂಗಳೂರು : ಸಾರ್ವಜನಿಕ ಆಸ್ಪತ್ರೆಗಳನ್ನು ವೃತ್ತಿಪರವಾಗಿ ನಡೆಸಲು ಸಹಾಯ ಮಾಡುವ ನಿಟ್ಟಿನಲ್ಲಿ ವೈದ್ಯರ ನಿರ್ವಹಣಾ ಕೌಶಲ್ಯದಲ್ಲಿನ ಕೊರತೆಯನ್ನು ತುಂಬಲು ಆಸ್ಪತ್ರೆ ನಿರ್ವಹಣಾ ಕೋರ್ಸ್‌ಗಳನ್ನು ಮುಂದುವರಿಸಲು ಸರ್ಕಾರವು ವೈದ್ಯರಿಗೆ ಧನಸಹಾಯ ನೀಡಲಿದೆ. ವೈದ್ಯರಿಗೆ ಆಸ್ಪತ್ರೆಯ ಆಡಳಿತದ ನಿರ್ವಹಣೆ ಮಾಡುವ ನಾಯಕತ್ವವು ಅವಶ್ಯಕವಿದೆ. ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಇಲಾಖೆಯ ಹಿರಿಯ ಅಧಿಕಾರಿಗಳು, ಜಿಲ್ಲಾ ಆಸ್ಪತ್ರೆಗಳ ವೈದ್ಯರಿಗೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಬೆಂಗಳೂರು ವತಿಯಿಂದ ಆಸ್ಪತ್ರೆ ನಿರ್ವಹಣಾ ತರಬೇತಿಯನ್ನು ಕೊಡಿಸಲಾಗುತ್ತದೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ತಿಳಿಸಿದರು. ಇದಕ್ಕೆ ಸರ್ಕಾರದಿಂದ ಧನಸಹಾಯ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ವೈದ್ಯರು ಆಸ್ಪತ್ರೆಯಲ್ಲಿ ರೋಗಿಗೆ ಚಿಕಿತ್ಸೆ ನೀಡುವುದು ಎಷ್ಟು ಮುಖ್ಯವೋ ಆಸ್ಪತ್ರೆಯ ನಿರ್ವಹಣೆಯೂ ಅಷ್ಟೇ ಮುಖ್ಯ. ಆಗ ಮಾತ್ರ ಆರೋಗ್ಯ ಸೇವೆಗಳಲ್ಲಿ ದಕ್ಷತೆ, ಗುಣಮಟ್ಟ, ವೃತ್ತಿಪರತೆ ಕಾಯ್ದುಕೊಳ್ಳಲು ಸಾಧ್ಯ. ಆಸ್ಪತ್ರೆಯೊಂದರ ಸಮಗ್ರ ಪ್ರಗತಿಗೆ ವೈದ್ಯರೇ ಮುಂದಾಳತ್ವ ವಹಿಸಿ ನಿರ್ವಹಣೆ ಮಾಡಬೇಕು. ಈ ನಿಟ್ಟಿನಲ್ಲಿ ಒಂದು ವೃತ್ತಿಪರ ಕೋರ್ಸ್ ಆರಂಭಿಸಬೇಕೆಂಬ ಕನಸು ನನಗಿತ್ತು. ಇದಕ್ಕೆ ಪೂರಕವಾಗುವಂತೆ ಐಐಎಂಬಿ ನೂತನ ಆನ್‌ಲೈನ್ ಕೋರ್ಸ್ ಆರಂಭಿಸಿದೆ. ಮೊದಲ ಹಂತದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ, ಉನ್ನತ ಆಸ್ಪತ್ರೆಗಳ ಹಿರಿಯ ಅಧಿಕಾರಿಗಳು, ಜಿಲ್ಲಾವೈದ್ಯಕೀಯ ಅಧಿಕಾರಿಗಳು, ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕರು ಸೇರಿದಂತೆ ಹಲವರಿಗೆ ಈ ಕೋರ್ಸ್ ಮೂಲಕ ನಿರ್ವಹಣಾ ತರಬೇತಿ ಕೊಡಿಸಲು ಕ್ರಮವಹಿಸಲಾಗುವುದು ಎಂದರು.