ಸಂಪಾದಕೀಯ-ಒಂದು ಕಲ್ಲಿನಲ್ಲಿ ಎರಡಕ್ಕಿಂತ ಹೆಚ್ಚು ಹಕ್ಕಿ ಹೊಡೆದ ಬಿಜೆಪಿ!

ಮುಂಬಯಿ: ಏಕನಾಥ್‌ ಶಿಂಧೆ ಮುಖ್ಯಮಂತ್ರಿ ಮತ್ತು ದೇವೇಂದ್ರ ಫಡ್ನವೀಸ್ ಉಪಮುಖ್ಯಮಂತ್ರಿಯಾಗುವುದರೊಂದಿಗೆ ಸುಮಾರು ಹತ್ತು ದಿನ ನಡೆದ ಮಹಾರಾಷ್ಟ್ರದ ರಾಜಕೀಯ ಪ್ರಹಸನದ ಒಂದು ಅಂಕಕ್ಕೆ ಸದ್ಯಕ್ಕೆ ತೆರೆ ಬಿದ್ದಿದೆ. ಆದರೆ ಇಡೀ ಪ್ರಹಸನದಲ್ಲಿ ಬಿಜೆಪಿ ವಹಿಸಿದ ಪಾತ್ರ ಮತ್ತು ಉರುಳಿಸಿದ ದಾಳ ಬಹಳ ಕುತೂಹಲಕಾರಿಯಾಗಿದೆ. ಕೊನೆಯ ಕ್ಷಣದವರೆಗೂ ಬಿಜೆಪಿ ತನ್ನ ನಡೆಯನ್ನು ರಹಸ್ಯವಾಗಿಯೇ ಇರಿಸಿಕೊಂಡಿತ್ತು. ರಾಷ್ಟ್ರೀಯ ಪಕ್ಷ ಯಾವ ನಿರ್ಧಾರ ತೆಗೆದುಕೊಳ್ಳುತ್ತಿದೆ ಎಂದು ಮಹಾನ್‌ ರಾಜಕೀಯ ಪಂಡಿತರಿಗೂ ಊಹಿಸಲು ಸಾಧ್ಯವಾಗಿರಲಿಲ್ಲ.
ಏಕನಾಥ್ ಶಿಂಧೆ ಅವರನ್ನು ಮುಖ್ಯಮಂತ್ರಿ ಮಾಡುವುದರ ಹಿಂದೆ ಬಿಜೆಪಿಯ ಬಹಳ ರಾಜಕೀಯ ಲೆಕ್ಕಾಚಾರಗಳಿವೆ. ಒಂದು ಅವಧಿಗೆ ಪೂರ್ತಿ ಮುಖ್ಯಮಂತ್ರಿಯಾಗಿದ್ದ ನಾಯಕನಿಗೆ ಉಪಮುಖ್ಯಮಂತ್ರಿ ಸ್ಥಾನಕ್ಕೆ ಹಿಂಬಡ್ತಿ ನೀಡಿ ಶಿವಸೇನೆಯ ನಾಯಕನನ್ನೆ ಮುಖ್ಯಮಂತ್ರಿ ಮಾಡಿರುವುದು ಬಿಜೆಪಿ ಹೈಕಮಾಂಡ್‌ನ ಚಾಣಾಕ್ಯ ನಡೆಯೇ. ಈ ಮೂಲಕ ಒಂದೇ ಕಲಿನಲ್ಲಿ ಎರಡಕ್ಕಿಂತಲೂ ಹೆಚ್ಚು ಹಕ್ಕಿಗಳನ್ನು ಬಿಜೆಪಿ ಹೊಡೆದುರುಳಿಸಿದೆ ಮತ್ತು ಇಂಥ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲು ಬರೀ ರಾಜಕೀಯ ಲೆಕ್ಕಾಚಾರ ಮಾತ್ರವಲ್ಲದೆ ಯಾವುದೇ ಪರಿಸ್ಥಿತಿಯನ್ನೂ ನಿಭಾಯಿಸುವ ಛಾತಿಯ ಇರಬೇಕು. ಅದು ತನಗಿದೆ ಎನ್ನುವುದನ್ನು ಬಿಜೆಪಿ ಹೈಕಮಾಂಡ್‌ ತೋರಿಸಿಕೊಟ್ಟಿದೆ.
ಮೊದಲಾಗಿ ಎಲ್ಲರೂ ಭಾವಿಸಿರುವಂತೆ ದೇವೇಂದ್ರ ಫಡ್ನವಿಸ್‌ ಅವರನ್ನು ಮುಖ್ಯಮಂತ್ರಿ ಮಾಡಿದ್ದರೆ ಅಧಿಕಾರಕ್ಕಾಗಿ ಸರಕಾರ ಕೆಡವಿದ ಅಪವಾದವಂತೂ ಖಂಡಿತ ಬರುತ್ತಿತ್ತು. ಇದರ ಜೊತೆಗೆ ಮಹಾರಾಷ್ಟ್ರದ ಸೂಕ್ಷ್ಮ ಜಾತಿ ರಾಜಕಾರಣವೂ ಬಿಜೆಪಿ ಪಾಲಿಗೆ ಪ್ರತಿಕೂಲವಾಗುತ್ತಿತ್ತು. ಮರಾಠ ನಾಯಕನನ್ನು ಕೆಳಗಿಳಿಸಿ ಬ್ರಾಹ್ಮಣನಿಗೆ ಪಟ್ಟಕಟ್ಟುವ ಸಲುವಾಗಿ ಸರಕಾರ ಕೆಡವಿತು. ಅಧಿಕಾರ ದಾಹ ತೀರಿಸಿಕೊಳ್ಳಲು ಬಿಜೆಪಿ ಯಾವ ಮಟ್ಟಕ್ಕೂ ಇಳಿಯುತ್ತದೆ ಎಂಬ ಕಟು ಟೀಕೆಯಿಂದ ಸದ್ಯ ಪಕ್ಷ ಪಾರಾಗಿದೆ.
ಅಂತೆಯೇ ಒಂದು ವೇಳೆ ಫಡ್ನವಿಸ್‌ ಅಥವಾ ಬಿಜೆಪಿಯ ಬೇರೆ ಯಾರೇ ಮುಖ್ಯಮಂತ್ರಿಯಾಗಿದ್ದರೂ ಶಿವಸೇನೆ ಅನುಕಂಪದ ಲಾಭ ಪಡೆಯುವ ಸಾಧ್ಯತೆಯಿತ್ತು. ಮಾಜಿ ಮುಖ್ಯಮಂತ್ರಿ ಉದ್ಧವ ಠಾಕ್ರೆ ತನ್ನನ್ನು ಬಿಜೆಪಿಯ ಅಧಿಕಾರ ದಾಹದ ಬಲಿಪಶು ಎಂದು ಬಿಂಬಿಸಿ ಮರಾಠಿ ಜನರ ಭರಪೂರ ಅನುಕಂಪಕ್ಕೆ ಪಾತ್ರರಾಗುತ್ತಿದ್ದರು. ಹೀಗೆ ಹುತಾತ್ಮರಾಗುವ ಅವಕಾಶವನ್ನು ಉದ್ಧವ್‌ಗೆ ಬಿಜೆಪಿ ತಪ್ಪಿಸಿದೆ.
ಇನ್ನೊಂದು ಅಂಶವೆಂದರೆ ಮಹಾರಾಷ್ಟ್ರದ ಪ್ರಬಲ ಮರಾಠ ಸಮುದಾಯವನ್ನು ಈ ನಡೆಯ ಮೂಲಕ ಬಿಜೆಪಿ ಖುಷಿ ಪಡಿಸಿರುವುದು. ದೇವೇಂದ್ರ ಪಡ್ನವಿಸ್‌ ಮುಖ್ಯಮಂತ್ರಿಯಾದ ಬಳಿಕ ಬಿಜೆಪಿಯ ಮರಾಠ ನಾಯಕರು ತುಸು ಅಸಮಾಧಾನದಿಂದಿದ್ದರು. ಜತೆಗೆ ಮರಾಠ ಮೀಸಲಾತಿ ಬೇಡಿಕೆ ಇತ್ಯಾದಿ ವಿವಾದಗಳೂ ಆಗ ಬಿಜೆಪಿಗೆ ಹೊಡೆತ ನೀಡಿದ್ದವು. ಈಗ ಮರಾಠ ಸಮುದಾಯಕ್ಕೆ ಸೇರಿದ ಏಕನಾಥ ಶಿಂಧೆಯವರಿಗೇ ಪಟ್ಟಕಟ್ಟುವ ಮೂಲಕ ಮರಾಠ ಸಮುದಾಯವನ್ನು ತೃಪ್ತಿಪಡಿಸಿದಂತಾಗಿದೆ. ಜತೆಗೆ ಶಿವಸೇನೆಯಿಂದ ಅಧಿಕಾರ ಕಸಿದುಕೊಂಡ ಅಪವಾದದಿಂದಲೂ ಸುಲಭವಾಗಿ ಪಾರಾಗಿದೆ. ಮರಾಠ ಸಮುದಾಯದ ಶಿಂಧೆ ಅವರನ್ನು ಮುಖ್ಯಮಂತ್ರಿ ಮಾಡುವ ಮೂಲಕ ಬಿಜೆಪಿ ಬ್ರಾಹ್ಮಣ ನಾಯಕ ಫಡ್ನವೀಸ್‌ನ ಉದಯದ ನಂತರ ದೂರವಾಗಿದ್ದ ಮರಾಠರನ್ನು ಸೆಳೆಯಲು ಪ್ರಯತ್ನಿಸಬಹುದು. ಇಷ್ಟು ಮಾತ್ರವಲ್ಲದೆ ಮಹಾರಾಷ್ಟ್ರ ಬಿಜೆಪಿಯಲ್ಲಿ ಬ್ರಾಹ್ಮಣ ಸಮುದಾಯಕ್ಕಿದ್ದ ಬಲವಾದ ಹಿಡಿತವನ್ನೂ ಬಿಜೆಪಿ ಹೈಕಮಾಂಡ್‌ ಬ್ರಾಹ್ಮಣ ಸಮುದಾಯದ ಪ್ರಬಲ ನಾಯಕ ದೇವೇಂದ್ರ ಫಡ್ನವೀಸ್ ಅವರ ರೆಕ್ಕೆ ಕತ್ತರಿಸುವ ಮೂಲಕ ನಿಯಂತ್ರಿಸಿದೆ.
ಮುಂದಿನ ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ಸ್ವಂತಬಲದ ಮೇಲೆ ಅಧಿಕಾರಕ್ಕೆ ಬರಬೇಕು ಎನ್ನುವುದು ಬಿಜೆಪಿಯ ಲಾಂಗ್‌ಟರ್ಮ್‌ ಯೋಜನೆ. ಅದಕ್ಕೆ ಅಗತ್ಯವಿರುವ ಅಖಾಡದ ಸಿದ್ಧತೆ ಶುರುವಾಗಿ ಬಹಳ ಸಮಯ ಆಗಿದ್ದರೂ ಮುಂಬಯಿ ಮಹಾನಗರ ಮತ್ತು ಮುತ್ತಮುತ್ತಲಿನ ಪ್ರದೇಶ ಮತ್ತು ಮರಾಠರ ಪ್ರಾಬಲ್ಯವಿರುವ ಜಿಲ್ಲೆಗಳಲ್ಲಿ ಹಿನ್ನಡೆ ಅನುಭವಿಸುತ್ತಿತ್ತು. ಈಗ ಕೈಗೊಂಬೆ ಸಿಎಂ ಮಾಡುವ ಮೂಲಕ ಈ ಉದ್ದೇಶವನ್ನು ಸಾಧಿಸುವ ದಾರಿಯನ್ನು ಸುಗಮ ಮಾಡಿಕೊಂಡಿದೆ.error: Content is protected !!
Scroll to Top