Wednesday, August 17, 2022
spot_img
Homeಸುದ್ದಿಕಾಡುತ್ತಿದೆ ವೈದ್ಯರ ಕೊರತೆ

ಕಾಡುತ್ತಿದೆ ವೈದ್ಯರ ಕೊರತೆ

ಇಂದು ರಾಷ್ಟ್ರೀಯ ವೈದ್ಯರ ದಿನ. ಈ ನಿಮಿತ್ತ ಪ್ರಸಕ್ತ ಭಾರತೀಯರ ವೈದ್ಯಕೀಯ ಕ್ಷೇತ್ರದ ಮೇಲೆ ಬೆಳಕು ಚೆಲ್ಲುವ ಒಂದು ಲೇಖನ
ರೋಗಿಗಳ ಜೀವರಕ್ಷಕರಾದ ಸಮಸ್ತ ವೈದ್ಯ ಸಮುದಾಯಕ್ಕೆ ನಮ್ಮ ಕೃತಜ್ಞತಾಪೂರ್ವಕ ವಂದನೆಗಳು. ಆದರೆ ಪ್ರಸಕ್ತ ವಿದ್ಯಮಾನಗಳನ್ನು ಗಮನಿಸಿದರೆ ಒಂದು ಆತಂಕಕಾರಿ ಅಂಶ ಗಮನಕ್ಕೆ ಬರುತ್ತದೆ. ಈಗಲೇ ಭಾರತದಲ್ಲಿ, ಅದರಲ್ಲೂ ವಿಶೇಷವಾಗಿ ಕರ್ನಾಟಕದಲ್ಲಿ ವೈದ್ಯರ ತೀವ್ರ ಕೊರತೆ ಇದೆ. ಕರ್ನಾಟಕದ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿಗಳ ಕೊರತೆ ಇದೆ. ಅದರಲ್ಲಿ ಕೂಡ ಗ್ರಾಮಾಂತರ ಪ್ರದೇಶಗಳಲ್ಲಿ ಆಸ್ಪತ್ರೆಗಳು ತೀರಾ ಸಂಕಷ್ಟಗಳನ್ನು ಎದುರಿಸುತ್ತವೆ. ಅದಕ್ಕೂ ಕಾರಣ ವೈದ್ಯಕೀಯ ಸಿಬ್ಬಂದಿಗಳ ಕೊರತೆ ಇದೆ. ಜನಸಾಮಾನ್ಯರು ಆರೋಗ್ಯ ಸೇವೆಗೆ ಕಷ್ಟ ಪಡಬೇಕಾದ ಅನಿವಾರ್ಯತೆ ಇದೆ. ಖಾಸಗಿ ಆರೋಗ್ಯ ಸೇವೆ ದಿನದಿಂದ ದಿನಕ್ಕೆ ದುಬಾರಿ ಆಗುತ್ತಾ ಇದೆ. ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆ. ಕರ್ನಾಟಕದಲ್ಲಿ ಸುಮಾರು ಶೇ.40 ವೈದ್ಯರ ಕೊರತೆ ಇದೆ ಎಂದು ಸರಕಾರವೇ ಒಪ್ಪಿಕೊಂಡಿದೆ. ಇದರಿಂದ ತುರ್ತು ಆರೋಗ್ಯ ಸೇವೆ ಬಯಸಿ ಬರುವ ಬಡ ಮತ್ತು ಮಧ್ಯಮವರ್ಗದ ರೋಗಿಗಳಿಗೆ ಭಾರಿ ತೊಂದರೆ ಆಗುತ್ತಿದೆ.

ವೈದ್ಯರ ಕೊರತೆಗೆ ಏನು ಕಾರಣ?
ಈ ಪ್ರಶ್ನೆಗೆ ಉತ್ತರ ಹುಡುಕುತ್ತ ಹೋದರೆ ಇನ್ನೂ ಆತಂಕಕಾರಿ ಅಂಶಗಳು ಬೆಳಕಿಗೆ ಬರುತ್ತವೆ. ದ್ವಿತೀಯ ಪಿಯುಸಿ ಹಂತದಲ್ಲಿ ವೈದ್ಯಕೀಯ ಓದುವ ಆಸಕ್ತಿ ಇರುವ ವಿದ್ಯಾರ್ಥಿಗಳ ಸಂಖ್ಯೆ ಶೇ.20 ಕೂಡ ಇಲ್ಲ. ಶೇ.80 ವಿದ್ಯಾರ್ಥಿಗಳು ಇಂಜಿನಿಯರಿಂಗ್ ಆಕಾಂಕ್ಷಿಗಳು. ಅವರ್ಯಾರೂ ಜೀವಶಾಸ್ತ್ರ ಓದುವುದಿಲ್ಲ. ಅದಕ್ಕೆ ಕಾರಣವಾಗಿರುವುದ ದುಬಾರಿ ವೈದ್ಯಕೀಯ ಶಿಕ್ಷಣ! ಕೇವಲ ವೈದ್ಯಕೀಯ ಪ್ಯಾಶನ್ ಇರುವ ಮತ್ತು ದುಡ್ಡು ಸುರಿಯುವ ಪೋಷಕರು ಇದ್ದವರು ಮಾತ್ರ ಮೆಡಿಕಲ್ ಸೇರುತ್ತಿದ್ದಾರೆ.
ಮೊದಲು ವೈದ್ಯಕೀಯ ಶಿಕ್ಷಣಕ್ಕೆ ಆಯ್ಕೆ CET ಪರೀಕ್ಷೆಯ ಮೂಲಕ ಆಗುತ್ತಿತ್ತು. ಅದು ರಾಜ್ಯಮಟ್ಟದ ಪರೀಕ್ಷೆ. ಈಗ ಮೆಡಿಕಲ್ ಸೀಟ್ ಬೇಕಾದವರು NEET ಪರೀಕ್ಷೆ ಬರೆಯಬೇಕು. ಅದು ರಾಷ್ಟ್ರಮಟ್ಟದ ಪರೀಕ್ಷೆ. ಸ್ಪರ್ಧೆ ಹೆಚ್ಚು ಕಠಿಣ.

ಸರಕಾರಿ ವೈದ್ಯಕೀಯ ಕಾಲೇಜುಗಳ ಕೊರತೆ
ಕರ್ನಾಟಕದಲ್ಲಿ ಒಂದು ಡಜನ್‌ನಸ್ಟು ಸರಕಾರಿ ವೈದ್ಯಕೀಯ ಕಾಲೇಜುಗಳಿವೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ಒಂದು ಸರಕಾರಿ ಮೆಡಿಕಲ್ ಕಾಲೇಜು ಇಲ್ಲ! ಇದರಿಂದಾಗಿ ಪ್ರತಿಭಾವಂತರಾದ ನೂರಾರು ವಿದ್ಯಾರ್ಥಿಗಳು ಮೆಡಿಕಲ್ ಸೀಟ್ ವಂಚಿತರಾಗುತ್ತಿದ್ದಾರೆ. ಉಳ್ಳವರು ದುಬಾರಿ ಫೀಸ್ ತುಂಬಿಸಿ ಖಾಸಗಿ ಮೆಡಿಕಲ್ ಕಾಲೇಜು ಸೇರುತ್ತಿದ್ದಾರೆ. ಅಲ್ಲಿ ಐದೂವರೆ ವರ್ಷ ಮೆಡಿಕಲ್ ಶಿಕ್ಷಣ ಪಡೆದು ಬಂದವರು ಸೇವೆ ಮಾಡುವ ಮನೋಭಾವ ಹೊಂದಿರಲು ಸಾಧ್ಯವೇ ಇಲ್ಲ. ಅವರು ಮೆಡಿಕಲ್ ಶಿಕ್ಷಣಕ್ಕೆ ಸುರಿದ ದುಡ್ಡು ಹಿಂದೆ ಹೇಗೆ ಪಡೆಯಬೇಕು ಎಂದು ಯೋಚನೆ ಮಾಡುತ್ತಾರೆ ಹೊರತು ಸರಕಾರಿ ಸೇವೆಗೆ, ಗ್ರಾಮೀಣ ಸೇವೆಗೆ ಖಂಡಿತ ಬರುವುದಿಲ್ಲ. ಇದರಿಂದ ಖಾಸಗಿ ಆಸ್ಪತ್ರೆಗಳು ದುಬಾರಿ ಆಗುತ್ತವೆ.

ದುಡ್ಡು ಮಾಡುವ ಮನಸ್ಥಿತಿ
ಇನ್ನು ಸರಕಾರಿ ವೈದ್ಯಕೀಯ ಕಾಲೇಜಲ್ಲಿ ಓದುತ್ತಿರುವ ನಿಜವಾದ ಪ್ರತಿಭಾವಂತ ವಿದ್ಯಾರ್ಥಿಗಳ ಮನಸ್ಥಿತಿ ನೋಡಿ. ಅವರು ಮೆಡಿಕಲ್ ಕಾಲೇಜಿನಲ್ಲಿ ಸೀಟ್ ಪಡೆಯವಾಗ ಶಿಕ್ಷಣ ಪಡೆದ ನಂತರ ಮೂರು ವರ್ಷಗಳ ಕಾಲ ಸರಕಾರಿ ಆಸ್ಪತ್ರೆ ಮತ್ತು ಗ್ರಾಮೀಣ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತೇವೆ ಎಂದು ಸರಕಾರದ ಜೊತೆಗೆ ಒಪ್ಪಂದ ಮಾಡಿಕೊಳ್ಳುತ್ತಾರೆ. ಅಂತವರ ಶಿಕ್ಷಣಕ್ಕೆ ಸರಕಾರ ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡಿ ಓದಿಸುತ್ತದೆ. ಆದರೆ ಹಾಗೆ ಕಲಿತುಬಂದ ವಿದ್ಯಾರ್ಥಿಗಳು ಒಪ್ಪಂದವನ್ನು ಗಾಳಿಗೆ ತೂರಿ, ಒಂದಷ್ಟು ಲಂಚ ನೀಡಿ ಖಾಸಗಿ ಸೇವೆಗೆ ಹೊರಟು ಬಿಡುತ್ತಾರೆ. ಒಪ್ಪಂದ ಮಾಡಿಕೊಂಡ ಸರಕಾರದ ವೈದ್ಯಕೀಯ ಶಿಕ್ಷಣ ಇಲಾಖೆ ಕಣ್ಣು ಮುಚ್ಚಿ ಕುಳಿತುಕೊಳ್ಳುತ್ತದೆ. ಇದು ಈಗ ನಡೆಯುತ್ತಿರುವ ದುರಂತ.

ಇದು ನಿಜಕ್ಕೂ ಆತಂಕಕಾರಿ
ಆಕಸ್ಮಾತ್ ಆಗಿ ಸರಕಾರಿ ಸೇವೆಗೆ ಸೇರಿದರೂ ಅವರು ನಗರಗಳ ಆಸ್ಪತ್ರೆಗೆ ಸೇರುತ್ತಾರೆ ಹೊರತು ಗ್ರಾಮೀಣ ಸೇವೆಗೆ ಅಲ್ಲ. ಏಕೆಂದರೆ ಅವರು ನಗರಗಳಲ್ಲಿ ನರ್ಸಿಂಗ್ ಹೋಮಗಳಲ್ಲಿ ಪಾರ್ಟ್ ಟೈಮ್ ಸೇವೆ ಸಲ್ಲಿಸುವ ಅವಕಾಶ ಇದೆ. ಹಾಗೆಯೇ ಸಂಜೆ ಹೊತ್ತು ಖಾಸಗಿಯಾಗಿ ಕ್ಲಿನಿಕ್ ನಡೆಸಲು ಅವಕಾಶ ಇದೆ. ಇದರಿಂದಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ನೀಗುವುದಿಲ್ಲ. ಸೇವಾ ಮನೋಭಾವ ಇರುವ ಕೆಲವು ವೈದ್ಯರು ಗ್ರಾಮೀಣ ಸೇವೆ ಮಾಡಲು ಬಂದರೂ ಇಲಾಖೆ ಅವರನ್ನು ವಾರಕ್ಕೆ ಎರಡೆರಡು ದಿನ ಬೇರೆ ಬೇರೆ ಗ್ರಾಮೀಣ ಆಸ್ಪತ್ರೆಗಳಲ್ಲಿ ದುಡಿಸುತ್ತಿದೆ. ಎಲ್ಲಿಯೂ ನ್ಯಾಯವಾಗಿ ಕರ್ತವ್ಯ ನಿರ್ವಹಣೆ ಮಾಡಲು ಸಾಧ್ಯ ಇಲ್ಲದ ಅನಿವಾರ್ಯತೆ ಅವರದ್ದು. ಇದರಿಂದಾಗಿ ಹಳ್ಳಿಯ ಬಡವರು ಖಾಸಗಿ ಆಸ್ಪತ್ರೆಗಳಿಗೆ ಹೋಗುವುದು ಅನಿವಾರ್ಯ ಎಂದು ಸರಕಾರವೇ ನಿರ್ಧಾರ ಮಾಡಿಕೊಂಡ ಹಾಗಿದೆ. ಇದು ನಿಜಕ್ಕೂ ಆತಂಕಕಾರಿ ವಿದ್ಯಮಾನ ಆಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!