ಶ್ರೀಲಂಕಾ ಏಕಾಏಕಿ ತೈಲ ಸರಬರಾಜನ್ನು ನಿರ್ಬಂಧಿಸಿದ್ದು, ನಿವಾಸಿಗಳಿಗೆ ಮನೆಯಲ್ಲೇ ಇರುವಂತೆ ಸೂಚಿಸಿದೆ. ತಿಂಗಳುಗಳಿಂದ ದೇಶವನ್ನು ಅಲುಗಾಡಿಸಿರುವ ಸಾಲದ ಬಿಕ್ಕಟ್ಟಿನಿಂದ ಅಗತ್ಯ ವಸ್ತುಗಳನ್ನು ಒದಗಿಸಲೂ ಸರಕಾರ ಹೆಣಗಾಡುತ್ತಿದ್ದು, ಇದರಿಂದ ಅಶಾಂತಿಯ ಅಪಾಯ ಮತ್ತಷ್ಟು ಹೆಚ್ಚಿದೆ.
ಬಂದರು, ಆರೋಗ್ಯ ಸೇವೆಗಳು, ಆಹಾರ ಸರಬರಾಜಿಗೆ ಪೆಟ್ರೋಲ್ ಮತ್ತು ಡೀಸೆಲ್ ಒದಗಿಸಲಾಗುವುದು ಮತ್ತು ಈ ಕಷ್ಟದ ಸಮಯದಲ್ಲಿ ಎಲ್ಲಾ ಇತರ ವಲಯಗಳ ಜನರು ಮನೆಯಲ್ಲಿಯೇ ಇರಲು ಸೂಚಿಸಲಾಗಿದ್ದು, ಆನ್ಲೈನ್ ಮೂಲಕ ಸೇವೆಗಳನ್ನು ಒದಗಿಸಲು ವಿನಂತಿಸಲಾಗಿದೆ,” ಎಂದು ಗುಣವರ್ಧನ ಹೇಳಿದ್ದಾರೆ. “ನಮ್ಮ ದೇಶವು ಕಂಡು ಕೇಳರಿಯದ ಹಣಕಾಸು ಮತ್ತು ವಿದೇಶಿ ವಿನಿಮಯ ಬಿಕ್ಕಟ್ಟನ್ನು ಎದುರಿಸುತ್ತಿದೆ,” ಎಂದು ಅವರು ತಿಳಿಸಿದ್ದಾರೆ.
ಸರ್ಕಾರವು ಈಗಾಗಲೇ ಸಾರ್ವಜನಿಕ ಶಾಲೆಗಳನ್ನು ಮುಚ್ಚಿದ್ದು, ಸಾರಿಗೆಯನ್ನು ಮೊಟಕುಗೊಳಿಸಲು ಸರಕಾರಿ ನೌಕರರಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿದೆ. ರಾಜಧಾನಿ ಕೊಲಂಬೊ ಮತ್ತು ಸುತ್ತಮುತ್ತಲಿನ ಅನೇಕ ರಸ್ತೆಗಳು ಕಳೆದ ಹಲವು ದಿನಗಳಿಂದ ನಿರ್ಜನವಾಗಿವೆ. ಸಾವಿರಾರು ವಾಹನಗಳು ಕಿಲೋಮೀಟರ್ಗಟ್ಟಲೆ ಸರತಿ ಸಾಲಿನಲ್ಲಿ ನಿಂತಿದ್ದು, ಪೆಟ್ರೋಲ್ ಬಂಕ್ಗಳಲ್ಲಿ ತೈಲಕ್ಕಾಗಿ ಕಾಯುತ್ತಿವೆ.

ಹೆಚ್ಚಿನ ಆರ್ಥಿಕ ಚಟುವಟಿಕೆಗಳನ್ನು ಸ್ಥಗಿತಗೊಳಿರುವ ತೈಲ ಕೊರತೆಯನ್ನು ನಿವಾರಿಸುವ ಪ್ರಯತ್ನದ ಭಾಗವಾಗಿ ವಿದೇಶಿ ಕಂಪನಿಗಳಿಗೆ ಇಂಧನ ವಿತರಣೆಯನ್ನು ವಹಿಸಲು ಶ್ರೀಲಂಕಾ ಸರಕಾರ ಯೋಜಿಸಿದೆ ಎಂದು ಇಂಧನ ಸಚಿವ ಕಾಂಚನಾ ವಿಜೆಸೇಕರ ಭಾನುವಾರ ಹೇಳಿದ್ದಾರೆ.