Wednesday, July 6, 2022
spot_img
Homeಸುದ್ದಿಮೋದಿಗಾಗಿ ಮಾಡಿದ ರಸ್ತೆ ಮೂರೇ ದಿನದಲ್ಲಿ ಕಿತ್ತು ಹೋಯಿತು!

ಮೋದಿಗಾಗಿ ಮಾಡಿದ ರಸ್ತೆ ಮೂರೇ ದಿನದಲ್ಲಿ ಕಿತ್ತು ಹೋಯಿತು!

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಜೂ.20ರಂದು ರಾಜ್ಯಕ್ಕೆ ಭೇಟಿ ನೀಡುವ ವೇಳೆ ಬೆಂಗಳೂರಿನಲ್ಲಿ 6 ಕೋಟಿ ರೂ ವೆಚ್ಚದಲ್ಲಿ ದಿಢೀರ್ ಅಭಿವೃದ್ದಿಪಡಿಸಿದ್ದ ರಸ್ತೆಯೊಂದು ಕೇವಲ ಮೂರೇ ದಿನಗಳಲ್ಲಿ ಕಿತ್ತು ಹೋಗಿದ್ದು,ಈ ಕಳಪೆ ಕಾಮಗಾರಿಗೆ ಭಾರಿ ಟೀಕೆ ವ್ಯಕ್ತವಾಗಿದೆ. ಇದರಿಂದ ಮುಜುಗರಕ್ಕೊಳಗಾಗಿರುವ ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ವರದಿ ನೀಡುವಂತೆ ಆದೇಶಿಸಿದೆ.
ಪ್ರಧಾನಿ ಮೋದಿ ಸಾಗುವ ರಸ್ತೆ ಅಭಿವೃದ್ಧಿಗಾಗಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸುಮಾರು 24 ಕೋಟಿ ರೂ. ವೆಚ್ಚ ಮಾಡಿತ್ತು. ಈ ಪೈಕಿ ಜ್ಞಾನ ಭಾರತಿಯ ಡಾ.ಬಿ.ಆರ್. ಅಂಬೇಡ್ಕರ್‌ ಸ್ಕೂಲ್ ಆಫ್‌ ಎಕಾನಮಿಕ್ಸ್‌ (ಬೇಸ್‌) ಕ್ಯಾಂಪಸ್‌ ಬಳಿ 6 ಕೋಟಿ ರೂ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಮಾಡಲಾಗಿತ್ತು. ಇದೇ ರಸ್ತೆ ಇದೀಗ ಕುಸಿದು ಹೋಗಿದೆ.
ರಸ್ತೆ ಕಿತ್ತು ಹೋದ ಕುರಿತು ಸ್ಥಳೀಯರು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದು, ಅದರ ಫೋಟೊಗಳು ಇದೀಗ ವೈರಲ್ ಆಗಿವೆ. ಪ್ರಧಾನಿ ಸಾಗಿದ ರಸ್ತೆಯ ಸ್ಥಿತಿ ನೋಡಿ. ಇದು ಬಿಬಿಎಂಪಿಯ ಕಳಪೆ ಕಾಮಗಾರಿಗೆ ಸಾಕ್ಷಿ. ಶೇ. 40 ಭ್ರಷ್ಟಾಚಾರಕ್ಕೆ ಮತ್ತೊಂದು ಉದಾಹರಣೆ ಎಂದು ಕುಸಿದ ರಸ್ತೆಯ ಚಿತ್ರವನ್ನು ಟ್ಯಾಗ್‌ ಮಾಡಿ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದ್ದರು. ಈ ಬಗ್ಗೆ ಪ್ರಧಾನಿ ಸಚಿವಾಲಯಕ್ಕೂ ಮಾಹಿತಿ ಹೋಗಿತ್ತು. ಈ ಬಗ್ಗೆ ಸಮಗ್ರ ವರದಿ ನೀಡುವಂತೆ ಕರ್ನಾಟಕ ಸರ್ಕಾರಕ್ಕೆ ಪ್ರಧಾನಿ ಕಚೇರಿ ಗುರುವಾರ ಸಂಜೆ ನಿರ್ದೇಶನ ನೀಡಿದೆ.
ಸಮಗ್ರ ವರದಿಗೆ ಸೂಚಿಸಿದ ಸಿಎಂ ಬೊಮ್ಮಾಯಿ
ಖುದ್ದು ಪ್ರಧಾನಿ ಕಚೇರಿಯಿಂದ ಸಿಎಂ ಬೊಮ್ಮಾಯಿ ಅವರಿಗೆ ಕರೆ ಬಂದಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕ ಭವನದಲ್ಲಿರುವಾಗಲೇ ಅವರಿಗೆ ದೂರವಾಣಿ ಕರೆ ಮಾಡಿದ್ದ ಪ್ರಧಾನಿ ಕಚೇರಿಯ ಅಧಿಕಾರಿಗಳು ಸಮಗ್ರ ವಿವರಣೆ ಕೇಳಿದ್ದಾರೆ ಎನ್ನಲಾಗಿದೆ. ಇದರಿಂದ ಮುಖ್ಯಮಂತ್ರಿ ಅವರು ಮುಜುಗರಕ್ಕೆ ಒಳಗಾಗಿದ್ದು, ಕೂಡಲೇ ಪ್ರಕರಣದ ಕುರಿತು ಸಮಗ್ರ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು ಮಾತ್ರವಲ್ಲದೆ ಕಳಪೆ ಕಾಮಗಾರಿ ನಡೆಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಪ್ರದೇಶದಲ್ಲಿ ನೀರಿನ ಪೈಪ್ ಸೋರಿಕೆಯಿಂದ ರಸ್ತೆ ಕುಸಿದಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಮುಖ್ಯಮಂತ್ರಿ ಸಮಾಜಾಯಿಷಿ ನೀಡಿದ್ದಾರೆ. ಜಲಮಂಡಳಿಯವರು ಕೆಲವು ದಿನಗಳ ಹಿಂದೆ ಈ ರಸ್ತೆಯಲ್ಲಿ ನೀರಿನ ಪೈಪ್‌ಲೈನ್‌ ಹಾಕಿದ್ದರು. ಬಿಬಿಎಂಪಿ ಅಧಿಕಾರಿಗಳು ಅದರ ಮೇಲೆ ಡಾಂಬರು ಹಾಕಿದ್ದಾರೆ. ಭಾರ ತಾಳಲಾರದೆ ರಸ್ತೆ ಕುಸಿದಿದೆ. ಈಗ ಎರಡು ಇಲಾಖೆಗಳ ಅಧಿಕಾರಿಗಳು ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ.---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!