Tuesday, July 5, 2022
spot_img
Homeಅಂಕಣಕಾನೂನು ಕಣಜ - ಭ್ರಷ್ಟಾಚಾರ ಪ್ರತಿಬಂಧ ಅಧಿನಿಯಮ, 1988

ಕಾನೂನು ಕಣಜ – ಭ್ರಷ್ಟಾಚಾರ ಪ್ರತಿಬಂಧ ಅಧಿನಿಯಮ, 1988

ಸಾರ್ವಜನಿಕ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರ ಹೊಂದಿರುವ ಲೋಕ ನೌಕರರು ಅಂದರೆ ಸಾರ್ವಜನಿಕ ಅಧಿಕಾರಿಗಳು ಮತ್ತು ಇತರರು ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿ ನಡೆಸಬಹುದಾದ ಭ್ರಷ್ಟಾಚಾರವನ್ನು ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರಕಾರವು ದಿನಾಂಕ 09-09-1988 ರಿಂದ ಜಾರಿಗೆ ಬರುವಂತೆ “ಭ್ರಷ್ಟಾಚಾರ ಪ್ರತಿಬಂಧ ಅಧಿನಿಯಮ-1988” ಎಂಬ ವಿಶೇಷ ಕಾನೂನನ್ನು ಜಾರಿಗೆ ತಂದಿರುತ್ತದೆ. ಸಾರ್ವಜನಿಕರ ಹಿತಾಸಕ್ತಿಯನ್ನು ರಕ್ಷಿಸುವ ಹಾಗೂ ಸಮಾಜದಲ್ಲಿನ ಭ್ರಷ್ಟಾಚಾರಿಗಳನ್ನು ಶಿಕ್ಷಿಸುವ ಮುಖ್ಯ ಉದ್ದೇಶವನ್ನು ಈ ಕಾನೂನು ಹೊಂದಿರುತ್ತದೆ. ಈ ಕಾನೂನಿನ ಪ್ರಕಾರ ಲೋಕ ನೌಕರ ಎಂದರೆ ಸರಕಾರಿ ಸೇವೆಯಲ್ಲಿರುವ ಅಥವಾ ಸರಕಾರದಿಂದ ಅಥವಾ ಸರಕಾರದ ಪ್ರಾಧಿಕಾರಗಳು ಮತ್ತು ಇತರ ಅಂಗಸಂಸ್ಥೆಗಳಿಂದ ವೇತನವನ್ನು ಪಡೆಯುವ ಯಾವುದೇ ವ್ಯಕ್ತಿ ಮತ್ತು ಕೇಂದ್ರ, ಪ್ರಾಂತೀಯ ಅಥವಾ ರಾಜ್ಯ ಸರಕಾರದ ಅಧಿನಿಯಮ ಅಥವಾ ಆದೇಶಗಳ ಮೂಲಕ ಸ್ಥಾಪಿತವಾದ ನಿಗಮ ಅಥವಾ ಮಂಡಳಿ ಅಥವಾ ಪ್ರಾಧಿಕಾರ ಮುಖಾಂತರ ಸರಕಾರದಿಂದ ವೇತನ ಅಥವಾ ಇತರ ಸೌಲಭ್ಯಗಳನ್ನು ಪಡೆಯುತ್ತಿರುವ ವ್ಯಕ್ತಿಗಳು ನ್ಯಾಯಾಲಯವು ನೇಮಕ ಮಾಡಿದ ಲಿಕ್ವಿಡೇಟರ್, ರಿಸೀವರ್ ಅಥವಾ ಕಮಿಷನರ್ ಸೇರಿದಂತೆ ನ್ಯಾಯಾಡಳಿತಕ್ಕೆ ಸಂಬಂಧಿಸಿದಂತೆ ಯಾವುದೇ ಕರ್ತವ್ಯವನ್ನು ನಿರ್ವಹಿಸುವ ಬಗ್ಗೆ ಅಧಿಕೃತವಾಗಿ ನೇಮಕಾತಿ ಹೊಂದಿರುವ ವ್ಯಕ್ತಿ, ನ್ಯಾಯಾಲಯವು ಅಥವಾ ಸಕ್ಷಮ ಸಾರ್ವಜನಿಕ ಪ್ರಾಧಿಕಾರವು ಯಾವುದೇ ವ್ಯಾಜ್ಯ ವಿಷಯದ ಕುರಿತು ತೀರ್ಮಾನ ಅಥವಾ ವರದಿ ಸಲ್ಲಿಕೆಗಾಗಿ ನೇಮಿಸಿರುವ ಮಧ್ಯಸ್ಥ ಅಥವಾ ಇತರ ವ್ಯಕ್ತಿ ಮತ್ತು ಸಾರ್ವಜನಿಕ ಚುನಾವಣೆ ಬಗ್ಗೆ ಮತದಾರ ಪಟ್ಟಿಯನ್ನು ಸಿದ್ಧಪಡಿಸಲು, ಪ್ರಕಟಿಸಲು ಅಥವಾ ಪರಿಷ್ಕರಿಸಲು ಸಾರ್ವಜನಿಕ ಅಧಿಕಾರವನ್ನು ಹೊಂದಿರುವ ವ್ಯಕ್ತಿ ಮತ್ತು ಕೇಂದ್ರ ಸರಕಾರ ಅಥವಾ ರಾಜ್ಯ ಸರಕಾರದ ಅಥವಾ ಸ್ಥಳೀಯ ಅಥವಾ ಇತರ ಸಾರ್ವಜನಿಕ ಪ್ರಾಧಿಕಾರದಿಂದ ಯಾವುದೇ ಹಣಕಾಸಿನ ನೆರವನ್ನು ಸ್ವೀಕರಿಸುತ್ತಿರುವ ಯಾವುದೇ ಶಿಕ್ಷಣ, ವೈಜ್ಞಾನಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಪದಾಧಿಕಾರಿ, ಯಾವುದೇ ವಿಶ್ವವಿದ್ಯಾನಿಲಯದ ಕುಲಪತಿ, ಇದರ ಆಡಳಿತ ಮಂಡಳಿ ಮತ್ತು ಪ್ರಾಧ್ಯಾಪಕ ವರ್ಗದವರು ಸೇರಿರುತ್ತಾರೆ.
ಈ ಕಾನೂನಿನ ಅನ್ವಯದ ಪ್ರಕರಣದ ತನಿಖೆಗಾಗಿ ಸರಕಾರವು ಭ್ರಷ್ಟಾಚಾರ ನಿಗ್ರಹ ದಳ ಎಂಬ ವಿಶೇಷ ತನಿಖಾ ಸಂಸ್ಥೆಯನ್ನು ನೇಮಿಸಿದ್ದು ಈ ಸಂಸ್ಥೆಯು ರಾಜ್ಯದಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಪಟ್ಟ ವಿವಿಧ ಗುಪ್ತ ಮಾಹಿತಿಗಳನ್ನು ಸಂಗ್ರಹಿಸಿ ಇತರ ಇಲಾಖೆಗಳ ವಿಜಿಲೆನ್ಸ್ ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿ ವಿವಿಧ ಸರಕಾರಿ ಅಧಿಕಾರಿಗಳು ಪಾರದರ್ಶಕವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸುವಂತೆ ನೋಡಿಕೊಳ್ಳುವ, ಭ್ರಷ್ಟಾಚಾರ ನಿಯಂತ್ರಣಕ್ಕೆ ಅಗತ್ಯವುಳ್ಳ ಕ್ರಮಗಳನ್ನು ಕೈಗೊಳ್ಳುವ, ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದೂರುಗಳ ಬಗ್ಗೆ ತನಿಖೆಯನ್ನು ಕೈಗೊಂಡು ತಪ್ಪಿತಸ್ತರನ್ನು ಅಭಿಯೋಜನೆಗೆ ಒಳಪಡಿಸುವ ವಿಶೇಷ ಅಧಿಕಾರವನ್ನು ಮತ್ತು ಜವಾಬ್ದಾರಿಗಳನ್ನು ಹೊಂದಿರುತ್ತದೆ.
ಭ್ರಷ್ಟಾಚಾರದ ಅಪರಾಧದ ಕುರಿತು ವಿಚಾರಣೆ ಮಾಡುವುದಕ್ಕಾಗಿ ಸರಕಾರವು ವಿಶೇಷ ನ್ಯಾಯಾಧೀಶರನ್ನು ಹೊಂದಿರುವ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಿರುತ್ತದೆ. ಈ ವಿಶೇಷ ನ್ಯಾಯಾಲಯಗಳು ಭ್ರಷ್ಟಾಚಾರದ ಅಪರಾಧಕ್ಕೆ ಸಂಬಂಧಪಟ್ಟ ಪ್ರಕರಣವನ್ನು ಸಾಧ್ಯವಾದಷ್ಟರ ಮಟ್ಟಿಗೆ ಕ್ಷಿಪ್ರ ರೀತಿಯಲ್ಲಿ ಮತ್ತು ಸಾಧ್ಯವಾದಲ್ಲಿ ದೈನಂದಿನ ಆಧಾರದ ಮೇಲೆ ವಿಚಾರಣೆ ನಡೆಸಿ ಪ್ರಕರಣವನ್ನು ಇತ್ಯರ್ಥಗೊಳಿಸಬೇಕಾಗುತ್ತದೆ.
ನಮ್ಮ ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹ ದಳವನ್ನು ಒಟ್ಟು 7 ವಲಯಗಳಾಗಿ ವಿಂಗಡಿಸಿದ್ದು ಪ್ರತಿ ವಲಯಗಳು ಎರಡು ಅಥವಾ ಮೂರು ಜಿಲ್ಲೆಗಳನ್ನು ಹೊಂದಿರುತ್ತದೆ ಮತ್ತು ಪ್ರತಿ ಜಿಲ್ಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ (ಎ.ಸಿ.ಬಿ) ಠಾಣೆಯಿದ್ದು ಡಿ.ವೈ.ಎಸ್.ಪಿ. ದರ್ಜೆಯ ಪೋಲೀಸ್ ಅಧಿಕಾರಿಯು ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಾರೆ. ಪ್ರತಿ ಎ.ಸಿ.ಬಿ. ಠಾಣೆಯಲ್ಲಿ ಡಿ.ವೈ.ಎಸ್.ಪಿ. ಯವರಿಗೆ ಸಹಕರಿಸಲು ಇಬ್ಬರು ಪೋಲೀಸ್ ನಿರೀಕ್ಷಕರ ಮತ್ತು ಇತರ ದರ್ಜೆಯ ಅಧಿಕಾರಿಗಳ ತಂಡವಿರುತ್ತದೆ. ಭ್ರಷ್ಟಾಚಾರ ನಿಗ್ರಹ ದಳವು ಸ್ವ ಇಚ್ಛೆಯಿಂದ ಅಥವಾ ಇತರರ ದೂರಿನ ಮೇರೆಗೆ ಭ್ರಷ್ಟಾಚಾರದ ಬಗ್ಗೆ ಮಾಹಿತಿ ಸಂಗ್ರಹಿಸಿ ಎಫ್.ಐ.ಆರ್ ದಾಖಲಿಸುವ ಮತ್ತು ದೂರುಗಳನ್ನು ಸ್ವೀಕರಿಸಿದ ಸಂದರ್ಭದಲ್ಲಿ ಅನಿರೀಕ್ಷಿತ ತಪಾಸಣೆ, ಟ್ರ್ಯಾಪ್ ಕಾರ್ಯಾಚರಣೆ ಮತ್ತು ಬೌಪ್ಯ ವಿಚಾರಣೆಯನ್ನು ನಡೆಸುವ ಅಧಿಕಾರವನ್ನು ಹೊಂದಿರುತ್ತದೆ. ನ್ಯಾಯಾಲಯದಲ್ಲಿ ಯಾವುದೇ ಸಾರ್ವಜನಿಕ ನೌಕರ ಅಥವಾ ಅಧಿಕಾರಿಯು ದೋಷಿ ಎಂದು ಸಾಬೀತಾದಲ್ಲಿ ಆತನನ್ನು ಸೇವೆಯಿಂದ ವಜಾಗೊಳಿಸಬೇಕಾಗುತ್ತದೆ.
ಈ ಅಧಿನಿಯಮದ ಮೇರೆಗಿನ ಪ್ರಕರಣಗಳ ತನಿಖೆ ಬಗ್ಗೆ ಸರಕಾರವು ವಿವಿಧ ದರ್ಜೆಯ ಪೋಲೀಸ್ ಅಧಿಕಾರಿಗಳನ್ನು ವಿಶೇಷ ಆದೇಶದ ಮೂಲಕ ನೇಮಿಸಿ ಅವರಿಗೆ ವಿಶೇಷವಾದ ಅಧಿಕಾರವನ್ನು ನೀಡಲಾಗುತ್ತದೆ. ತನಿಖೆ ಸಂದರ್ಭದಲ್ಲಿ ಪೋಲೀಸರು ವಿಚಾರಣೆಯ ಉದ್ದೇಶಕ್ಕಾಗಿ ಯಾವುದೇ ಬ್ಯಾಂಕರುಗಳ ಪುಸ್ತಕಗಳನ್ನು ಅಥವಾ ಪ್ರಕರಣಕ್ಕೆ ಸಂಬಂಧಪಟ್ಟ ವ್ಯಕ್ತಿಯ ಲೆಕ್ಕಪತ್ರಗಳನ್ನು ಮತ್ತು ದಾಖಲೆಗಳನ್ನು ಪರಿಶೀಲಿಸುವ ಮತ್ತು ಅದರ ಪ್ರತಿಗಳನ್ನು ಹೊಂದುವ ವಿಶೇಷ ಅಧಿಕಾರವನ್ನು ಹೊಂದಿರುತ್ತಾರೆ.

ಕೆ. ವಿಜೇಂದ್ರ ಕುಮಾರ್
ಹಿರಿಯ ವಕೀಲರು, ಕಾರ್ಕಳ
ಮೊ: 98452 32490/ 96116 82681











---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!