ಬೆಳಗಾವಿ/ತಿರುವನಂತಪುರ : ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಕರ್ನಾಟಕಕ್ಕೂ ಕಾಲಿಟ್ಟಿದೆ. ಇಂದು ಶನಿವಾರ ಧಾರವಾಡ ಮತ್ತು ಹುಬ್ಬಳ್ಳಿಯಲ್ಲಿ ಸುಮಾರು 200 ಯುವಕರು ಯೋಜನೆ ಖಂಡಿಸಿ ರ್ಯಾಲಿ ನಡೆಸಿದರು. ಬಸ್ ಮೇಲೆ ಕಲ್ಲು ತೂರಾಟ ನಡೆಯಿತು. ಉದ್ರಿಕ್ತ ಯುವಕರ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಬೇಕಾಯಿತು, ಧಾರವಾಡದ ಕಲಾಭವನದಿಂದ ಹಳೆ ಡಿಎಸ್ ಪಿ ಸರ್ಕಲ್ ವರೆಗೆ ರ್ಯಾಲಿ ನಡೆಸಲಾಗಿತ್ತು.
ಬೆಳಗಾವಿಯಲ್ಲಿ ಪ್ರತಿಭಟನೆ
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನಲ್ಲಿ ಕೂಡ ಅಗ್ನಿಪಥ್ ವಿರೋಧಿ ಹೋರಾಟ ನಡೆಸುತ್ತಿದ್ದು, ಶಾಸಕಿ ಅಂಜಲಿ ನಿಂಬಾಳ್ಕರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಜೂ. 20ರಂದು ಖಾನಾಪುರ ಬಂದ್ಗೂ ಕರೆ ನೀಡಿದ್ದಾರೆ.
ಕೇರಳದಲ್ಲಿಯೂ ಭಾರೀ ಪ್ರತಿಭಟನೆ
ಸಶಸ್ತ್ರ ಪಡೆಗಳಿಗೆ ಕೇಂದ್ರ ಸರ್ಕಾರದ ವಿವಾದಾತ್ಮಕ ನೇಮಕಾತಿ ಯೋಜನೆಯನ್ನು ವಿರೋಧಿಸಿ ನೂರಾರು ಯುವಕರು ಬೀದಿಗಿಳಿದ ಸಂದರ್ಭದಲ್ಲಿ ಅಗ್ನಿಪಥ್ ವಿರುದ್ಧ ಕೇರಳದಲ್ಲೂ ಶನಿವಾರ ತಿರುವನಂತಪುರಂ ಮತ್ತು ಕೋಝಿಕ್ಕೋಡ್ನಲ್ಲಿ ಬೃಹತ್ ಪ್ರತಿಭಟನೆಗಳನ್ನು ನಡೆಸಲಾಯಿತು. ರಾಜ್ಯ ರಾಜಧಾನಿಯಲ್ಲಿ, ಪ್ರತಿಭಟನಾಕಾರರು ತಂಪನೂರಿನಿಂದ ರಾಜಭವನದವರೆಗೆ ಮೆರವಣಿಗೆ ನಡೆಸಿದರು.
ರೈಲ್ವೆ ಸಚಿವ ಮನವಿ
ಪ್ರತಿಭಟನಾಕಾರರು ರೈಲು ಸೇರಿದಂತೆ ಸಾರ್ವಜನಿಕ ಸಾರಿಗೆ, ಆಸ್ತಿಪಾಸ್ತಿಯನ್ನು ಗುರಿಯಾಗಿಟ್ಟುಕೊಂಡು ತಮ್ಮ ಆಕ್ರೋಶ ಹೊರಹಾಕುತ್ತಿರುವುದರಿಂದ 300ಕ್ಕೂ ಹೆಚ್ಚು ರೈಲುಗಳ ಸಂಚಾರಕ್ಕೆ ಅಡಚಣೆಯುಂಟಾಗಿದೆ. ಇದುವರೆಗೆ 200ಕ್ಕೂ ಹೆಚ್ಚು ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ. ಅಗ್ನಿಪಥ್ ಯೋಜನೆ ಜಾರಿ ವಿರೋಧಿಸಿ ಯುವಕರು ಹಿಂಸಾಚಾರದಲ್ಲಿ ತೊಡಗಿ ರೈಲ್ವೆ ಆಸ್ತಿ-ಪಾಸ್ತಿಗಳನ್ನು ಹಾನಿ ಮಾಡದಂತೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಪ್ರತಿಭಟನಾಕಾರರಲ್ಲಿ ಮನವಿ ಮಾಡಿದ್ದಾರೆ. ರೈಲ್ವೆ ಆಸ್ತಿ-ಪಾಸ್ತಿ ದೇಶದ್ದಾಗಿದ್ದು, ರಾಷ್ಟ್ರಕ್ಕೆ ಉತ್ತಮ ಸೇವೆ ಒದಗಿಸುತ್ತಿದೆ. ಕೇಂದ್ರ ಸರ್ಕಾರ ಸಹ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಅವರು ಹೇಳಿದ್ದಾರೆ.