Homeಸುದ್ದಿರೆಡಿಯಾಗುತ್ತಿದೆ ಕಾರ್ಕಳಕ್ಕೊಂದು ಸುಂದರ ವಾಕಿಂಗ್‌ ಟ್ರ್ಯಾಕ್‌

Related Posts

ರೆಡಿಯಾಗುತ್ತಿದೆ ಕಾರ್ಕಳಕ್ಕೊಂದು ಸುಂದರ ವಾಕಿಂಗ್‌ ಟ್ರ್ಯಾಕ್‌

ಕಾರ್ಕಳ: ಸರ್ವಾಂಗೀಣವಾಗಿ ಅಭಿವೃದ್ಧಿಗೊಳ್ಳುತ್ತಿರುವ ಕಾರ್ಕಳ ನಗರಕ್ಕೆ ಸುಸಜ್ಜಿತವಾದ ವಾಕಿಂಗ್‌ ಟ್ರ್ಯಾಕ್‌ ಇಲ್ಲ ಎಂಬ ಕೊರತೆಯೊಂದಿತ್ತು. ಇದೀಗ ಈ ಕೊರತೆಯೂ ನೀಗುವ ಕಾಲ ಸನ್ನಿಹಿತವಾಗಿದೆ. ಕಾರ್ಕಳದ ಅಭಿವೃದ್ಧಿಗೆ ಪಣತೊಟ್ಟು ಹಗಲಿರುಳು ಶ್ರಮಿಸುತ್ತಿರುವ ಕ್ಷೇತ್ರದ ಶಾಸಕರೂ ಆಗಿರುವ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್‌ ಕುಮಾರ್‌ ಅವರ ಪ್ರಯತ್ನದ ಫಲವಾಗಿ ನಗರದ ಆನೆಕೆರೆ ಸುತ್ತ ವಾಕಿಂಗ್‌ ಟ್ರ್ಯಾಕ್‌ ನಿರ್ಮಾಣವಾಗುತ್ತಿದೆ. ಬೆಳೆಯುತ್ತಿರುವ ಕಾರ್ಕಳ ನಗರಕ್ಕೆ ಈ ಮಾದರಿಯ ವಾಕಿಂಗ್‌ ಟ್ರ್ಯಾಕ್‌ನ ಅಗತ್ಯವಿತ್ತು. ವಾಕಿಂಗ್‌ ಟ್ರ್ಯಾಕ್‌ ಆನೆಕೆರೆಯ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ ನಗರಿಗೆ ಮುಕುಟಪ್ರಾಯವಾಗಿ ಮೂಡಿಬರಲಿದೆ. ಇದೀಗ ಕಾಮಗಾರಿ ಭರದಿಂದ ಸಾಗುತ್ತಿದ್ದು ರವಿವಾರ ಸಚಿವರು ಕಾಮಗಾರಿ ಪ್ರಗತಿ ಪರಿಶೀಲಿಸಿದರು.

ಸುಮಾರು ಏಳು ವರ್ಷಗಳ ಹಿಂದೆಯೇ ಆನೆಕೆರೆ ಸುತ್ತ ವಾಕಿಂಗ್‌ ಟ್ರ್ಯಾಕ್‌ ನಿರ್ಮಿಸಬೇಕೆಂಬ ಪ್ರಸ್ತಾವ ಇತ್ತು. ಆ ಕನಸು ಇದೀಗ ನನಸಾಗುತ್ತಿದೆ. ಸಣ್ಣ ನೀರಾವರಿ ಇಲಾಖೆ ಈ ಯೋಜನೆಯನ್ನು ಕೈಗೆತ್ತಿಕೊಂಡು ಕೆರೆಯ ಸುತ್ತ ವಾಕಿಂಗ್ ಟ್ರ್ಯಾಕ್ ಹಾಗೂ ಇತರೆ ಕಾಮಗಾರಿಗಳನ್ನು ಭರದಿಂದ ನಡೆಸುತ್ತಿದೆ.
1.5 ಮೀಟರ್ ಅಗಲ 480 ಮೀಟರ್ ಉದ್ದದ ಟ್ರ್ಯಾಕ್‌
1.5 ಕೋಟಿ ರೂ. ವೆಚ್ಚದಲ್ಲಿ 1.5 ಮೀಟರ್ ಅಗಲ 480 ಮೀಟರ್ ಉದ್ದದ ಸುಸಜ್ಜಿತವಾದ ಟ್ರ್ಯಾಕ್‌ ನಿರ್ಮಾಣವಾಗುತ್ತಿದೆ. ಡಿಸೆಂಬರ್ ಅಂತ್ಯದ ವೇಳೆಗೆ ವಾಕಿಂಗ್ ಟ್ರ್ಯಾಕ್ ಕಾಮಗಾರಿ ಪೂರ್ಣವಾಗಲಿದೆ. ವಾಕ್‌ ಮಾಡುವವರ ಸುರಕ್ಷತೆಗಾಗಿ ಟ್ರ್ಯಾಕ್‌ ಸುತ್ತ ತಡೆಬೇಲಿಯನ್ನೂ (ಫೆನ್ಸಿಂಗ್‌) ನಿರ್ಮಿಸಲಾಗುವುದು.
ಐತಿಹಾಸಿಕ ಆನೆಕೆರೆ
ಬೈರವರಸರ ಕಾಲದಲ್ಲಿ ಆನೆಗಳು ಕೆರೆಯಲ್ಲಿ ಆಟವಾಡುತ್ತಿದ್ದುದರಿಂದ ಈ ಕೆರೆಗೆ ಆನೆಕೆರೆ ಎಂಬ ಹೆಸರು ಬಂದಿದೆ ಎನ್ನಲಾಗುತ್ತಿದೆ. 9.78 ಹೆಕ್ಟೇರ್ ವಿಸ್ತೀರ್ಣ ಹೊಂದಿರುವ ವಿಶಾಲವಾಗಿರುವ ಆನೆಕೆರೆ ಪ್ರವಾಸೋದ್ಯಮಕ್ಕೆ ಹೇಳಿಮಾಡಿಸಿದ ತಾಣ. ಸಾವಿರಾರೂ ಪಕ್ಷಿಗಳ ಕಲರವವಿರುವ ಪರಿಸರ. ಈ ಕೆರೆಯನ್ನು ಅಭಿವೃದ್ಧಿಪಡಿಸಬೇಕೆಂಬ ಬೇಡಿಕೆ ಬಹಳ ಹಿಂದಿನಿಂದಲೂ ಇತ್ತು. ಇದಕ್ಕೆ ಪೂರಕವಾಗಿ ಈಗ ವಾಕಿಂಗ್‌ ಟ್ರ್ಯಾಕ್‌ ನಿರ್ಮಿಸಲಾಗುತ್ತದೆ.

ಪ್ರವಾಸಿ ತಾಣವಾಗಿ ಅಭಿವೃದ್ಧಿ

ಆಧುನಿಕ ಜೀವನ ಶೈಲಿಯಲ್ಲಿ ಆರೋಗ್ಯ ರಕ್ಷಣೆಗಾಗಿ ವಾಕಿಂಗ್‌ ಮಾಡುವುದು ಅಗತ್ಯವಾಗಿದೆ. ವಾಕಿಂಗ್‌ಗೆ ಪೂರಕವಾಗಿ ಮತ್ತು ನಗರದ ಆನೆಕೆರೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸುಂದರ ವಾಕಿಂಗ್‌ ಪಾರ್ಕ್‌ ನಿರ್ಮಾಣಗೊಳ್ಳುತ್ತಿದೆ. ಆನೆಕೆರೆಯ ಒಂದು ಅಂಚಿನಲ್ಲಿ ಮುಖ್ಯ ರಸ್ತೆಯಿರುವ ಕಾರಣ ರಸ್ತೆಯಿಂದ ಎತ್ತರದಲ್ಲಿ ಪಾಥ್‌ ನಿರ್ಮಿಸಲಾಗುವುದು. ಪಾಥ್‌ನ ಇಕ್ಕೆಲ್ಲ ಫೆನ್ಸಿಂಗ್ ಅಳವಡಿಸುವ ಮತ್ತು ಪಾಥ್‌ ಸುತ್ತಲೂ ಆಕರ್ಷಕವಾಗಿ ಗಾರ್ಡನ್‌ ಮಾಡಲಾಗುವುದು. ಈ ಕುರಿತು ಈಗಾಗಲೇ ಇಂಜಿನಿಯರ್‌ ಅವರಿಗೆ ತಿಳಿಸಿದ್ದೇನೆ.
ವಿ. ಸುನೀಲ್‌ ಕುಮಾರ್‌
ಸಚಿವರು

LEAVE A REPLY

Please enter your comment!
Please enter your name here

Latest Posts

error: Content is protected !!