ಇಂದು ರಾಜ್ಯಸಭಾ ಕದನ ಕುತೂಹಲ

ರಾಜ್ಯಸಭೆಯ ಚುನಾವಣೆಗಳು ರಾಜ್ಯದಲ್ಲಿ ಇಷ್ಟರಮಟ್ಟಿಗೆ ಕುತೂಹಲ ಕೆರಳಿಸಿದ ನಿದರ್ಶನ ಹಿಂದೆ ಇರಲೇ ಇಲ್ಲ. ಇಂದು ನಡೆಯುವ ಚುನಾವಣೆ ಮೂರೂ ಪಕ್ಷದ ನಾಯಕರನ್ನು ತುದಿಗಾಲಿನಲ್ಲಿ ನಿಲ್ಲಿಸಿದೆ. ಮೂರೂ ಪಕ್ಷಗಳಿಗೆ ಇದು ಪ್ರತಿಷ್ಠೆಯ ಪ್ರಶ್ನೆ. ಸ್ಪರ್ಧಿಗಳಿಗೆ ರಾಜಕೀಯ ಭವಿಷ್ಯದ ಪ್ರಶ್ನೆ.
ಮೂವರು ಗೆಲ್ಲೋದು ಖಚಿತ
ಬಿಜೆಪಿಯಿಂದ ನಿರ್ಮಲಾ ಸೀತಾರಾಮನ್, ಜಗ್ಗೇಶ್ ಗೆಲ್ಲುವುದು ಖಚಿತ. ಕಾಂಗ್ರೆಸ್ಸಿನಿಂದ ಜೈರಾಮ್ ರಮೇಶ್ ಗೆಲುವು ಸುಲಭ. ಆದರೆ ನಾಲ್ಕನೇ ಅಭ್ಯರ್ಥಿಯ ವಿಷಯದಲ್ಲಿ ಮೂರೂ ಪಕ್ಷಗಳು ನಿರ್ಧಾರಕ್ಕೆ ಬರಲಾಗದೆ ಚಡಪಡಿಸುತ್ತಿವೆ. ಜಾತ್ಯತೀತ ಧೋರಣೆಯ ಪಕ್ಷಗಳು ಎಂದು ಹೇಳಿಕೊಳ್ಳುತ್ತಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಒಂದಾಗಿ ಕ್ಯಾಂಡಿಡೇಟ್‌ ಹಾಕಿದ್ದರೆ ನಾಲ್ಕನೇ ಸ್ಥಾನವನ್ನು ಸುಲಭದಲ್ಲಿ ಪಡೆಯಬಹುದಿತ್ತು. ಆದರೆ ಅವಕಾಶವಾದಿ ರಾಜಕಾರಣ ಅದಕ್ಕೆ ಅವಕಾಶ ಕೊಡಲಿಲ್ಲ. ಕೊನೆಯ ಕ್ಷಣದಲ್ಲಿ ನಾವು ಹಿಂದಿನ ಎಲ್ಲವನ್ನೂ ಮರೆತು ಮುಂದೆ ಹೋಗೋಣ ಎಂದು ಡಿಕೆಶಿ ಹೇಳಿದರೂ ಕುಮಾರಸ್ವಾಮಿ ಅದಕ್ಕೆ ಒಪ್ಪಿಗೆ ಕೂಡಲೇ ಇಲ್ಲ. ಅದರ ಜೊತೆಗೆ ಜೆಡಿಎಸ್ ಶಾಸಕರಿಗೆ ಸಿದ್ದು ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸಿ ಎಂದು ಪತ್ರ ಬರೆದದ್ದು ಕುಮಾರಸ್ವಾಮಿಯನ್ನು ಕೆರಳಿಸಿದೆ. ಇದರಿಂದ ಆ ಪಕ್ಷಗಳ ನಡುವೆ ಒಮ್ಮತ ಕೊನೆಯವರೆಗೂ ಮೂಡಲಿಲ್ಲ.
ಇದು ರಹಸ್ಯ ಮತದಾನ ಅಲ್ಲ
ಬೇರೆ ಚುನಾವಣೆಗಳ ಹಾಗೆ ಇದು ರಹಸ್ಯ ಮತದಾನದ ಚುನಾವಣೆ ಅಲ್ಲ. ಮೂರೂ ಪಕ್ಷಗಳು ವಿಪ್ ಆದೇಶ ಜಾರಿ ಮಾಡಿ ಅಡ್ಡ ಮತದಾನ ಆಗದ ಹಾಗೆ ನೋಡಿಕೊಂಡಿವೆ. ಪ್ರತಿಯೊಬ್ಬ ಶಾಸಕನೂ ತಮ್ಮ ಪಾರ್ಟಿ ಏಜೆಂಟಗೆ ಮತಪತ್ರವನ್ನು ತೋರಿಸಿ ವೋಟ್ ಮಾಡಬೇಕು. ವಿಪ್ ಆದೇಶ ಉಲ್ಲಂಘನೆ ಮಾಡಿ ಅಡ್ಡ ಮತದಾನ ಮಾಡಿದರೆ ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆಯ ತೂಗು ಕತ್ತಿ ಇದೆ. ಅದರ ಜೊತೆಗೆ ಇದು ಪ್ರಾಶಸ್ತ್ಯದ ಮತಗಳ ಮೇಲೆ ನಿರ್ಧಾರ ಆಗುವ ಚುನಾವಣೆ. ಗೆಲ್ಲಲು ಪ್ರತಿ ಸ್ಪರ್ಧಿಗಳಿಗೆ ಶಾಸಕರ 45 ಪ್ರಥಮ ಪ್ರಾಶಸ್ತ್ಯದ ಮತಗಳು ಬೇಕು. ಅಷ್ಟು ಮತಗಳು ಸಿಗದೆ ಹೋದರೆ ದ್ವಿತೀಯ, ತೃತೀಯ ಪ್ರಾಶಸ್ತ್ಯದ ಮತಗಳು ಗಣನೆಗೆ ಬರುತ್ತವೆ. ಆದರಿಂದ ಕತ್ತೆ ವ್ಯಾಪಾರ, ಕುದುರೆ ವ್ಯಾಪಾರ ನಡೆಯುವ ಸಾಧ್ಯತೆ ತುಂಬಾ ಕಡಿಮೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಲ್ಲಿ ಹೆಚ್ಚು ಅತೃಪ್ತ ಶಾಸಕರು ಇದ್ದಾರೆ. ಜೆಡಿಎಸ್ ಪಕ್ಷದಲ್ಲಿ ಒಬ್ಬ ಕ್ಯಾಂಡಿಡೇಟ್ ಗೆಲ್ಲುವ ಮತಗಳು ಕೂಡ ಇಲ್ಲ. ಆದ್ದರಿಂದ ಜೆಡಿಎಸ್ ಪಕ್ಷದಲ್ಲಿ ಅಡ್ಡ ಮತಗಳು ಬೀಳುವ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿಯವರು ಸಣ್ಣ ಭರವಸೆ ಹೊಂದಿದ್ದಾರೆ. ಹಾಗೇನಾದರೂ ಆದರೆ ಅದು ಆಳುವ ಪಕ್ಷದ ಕಡೆಗೆ ಹೋಗುವ ಸಾಧ್ಯತೆ ಹೆಚ್ಚು. ಅಂದರೆ ಲೆಹರ್ ಸಿಂಗ್ ನಾಲ್ಕನೇ ಅಭ್ಯರ್ಥಿ ಆಗಿ ಗೆಲ್ಲುವ ಸಾಧ್ಯತೆ ಹೆಚ್ಚು. ಹಾಗೇನಾದರೂ ಆದರೆ ಕಾಂಗ್ರೆಸ್ ಪಕ್ಷವು ಹೆಚ್ಚು ಮುಖಭಂಗ ಅನುಭವಿಸಬಹುದು. ಸಿದ್ದು ತನ್ನ ಪಕ್ಷದಲ್ಲಿಯೇ ಮೂಲೆಗುಂಪು ಆಗಬಹುದು. ಮಲ್ಲಿಕಾರ್ಜುನ್ ಖರ್ಗೆ ಬಣ ಈಗಲೆ ಸಿದ್ದು ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ. ಆಕಸ್ಮಾತ್ ಆಗಿ ಕಾಂಗ್ರೆಸ್ ನಾಲ್ಕನೇ ಸ್ಥಾನವನ್ನು ಗೆದ್ದರೆ ಮತ್ತೆ ಸಿದ್ದು ಕಾಂಗ್ರೆಸ್ ಪಕ್ಷದ ಕಿಂಗ್ ಮೇಕರ್ ಆಗುತ್ತಾರೆ. ಈ ಆತಂಕ ಡಿಕೆಶಿ ಅವರಿಗೂ ಇದೆ. ಆ ಪಕ್ಷದ ಒಳಗೆ ಬೇಗುದಿ ಮತ್ತೆ ಹೆಚ್ಚಾಗುವ ಸಾಧ್ಯತೆ ಇದೆ. ಬಿಜೆಪಿಯಲ್ಲಿ ಮೇಲ್ನೋಟಕ್ಕೆ ಒಗ್ಗಟ್ಟು ಕಂಡುಬರುತ್ತಿದೆ. ಜೆಡಿಎಸ್ ಕತ್ತಲಲ್ಲಿ ಬಾಣವನ್ನು ಬಿಡುವ ಕೆಲಸ ಮಾಡುತ್ತಿದೆ. ಸಾವಿರ ಕೋಟಿಗಳ ಒಡೆಯ ಕುಪೇಂದ್ರ ರೆಡ್ಡಿ ಗೆಲ್ಲುವ ಸಾಧ್ಯತೆ ಬಹಳ ಕಡಿಮೆ. ಏನಿದ್ದರೂ ಸಂಜೆ ಆಗುವಾಗ ಗೆಲುವಿನ ಸ್ಪಷ್ಟ ಚಿತ್ರಣ ಹೊರಬೀಳಲಿದೆ. ಮುಂದೆ ಯಾರ್ಯಾರ ತಲೆದಂಡ ಆಗುವುದೋ ಯಾರಿಗೂ ಹೇಳಲು ಆಗುವುದಿಲ್ಲ.





























































































































































































































error: Content is protected !!
Scroll to Top