Saturday, May 21, 2022
spot_img
Homeಸುದ್ದಿಆಪರೇಶನ್ ಕಮಲ - ಬಿಜೆಪಿಗೆ ಏನು ಲಾಭ ?

ಆಪರೇಶನ್ ಕಮಲ – ಬಿಜೆಪಿಗೆ ಏನು ಲಾಭ ?

ಚುನಾವಣೆಗೆ ಇನ್ನೂ ಒಂದು ವರ್ಷ ಇರುವಾಗಲೇ ಆಡಳಿತಾರೂಢ ಬಿಜೆಪಿ ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ಆಪರೇಶನ್ ಕಮಲದ ಮೊರೆ ಹೊದಂತೆ ಕಾಣುತ್ತಿದೆ. ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಆಪರೇಶನ್ ಕಮಲದ ಪರವಾಗಿ ಮಾತಾಡಿದ್ದಾರೆ. ಈಗಾಗಲೇ ಹಳೆ ಮೈಸೂರು ಪ್ರಾಂತ್ಯದಲ್ಲಿ ವರ್ತೂರು ಪ್ರಕಾಶ್, ಉಡುಪಿಯಲ್ಲಿ ಪ್ರಮೋದ್ ಮಧ್ವರಾಜ್ ಆಪರೇಶನ್ ಕಮಲದ ಪರಿಣಾಮವಾಗಿ ಬಿಜೆಪಿ ಪಕ್ಷಕ್ಕೆ ಬಂದಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ನಿಜ ಅಂತಾದರೆ ಮುಂದಿನ ಗುರಿ ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್ ಆಗಿದ್ದಾರೆ. ಅವರನ್ನು ಬಿಜೆಪಿ ವರಿಷ್ಠರು ಸಂಪರ್ಕ ಮಾಡಿದ್ದಾರೆ ಎನ್ನಲಾಗಿದೆ ! ಮುಂದಿನ ಚುನಾವಣೆಗೆ ಇನ್ನೂ ಒಂದು ವರ್ಷ ಇರುವಾಗಲೇ ಈ ಆಪರೇಶನ್ ಕಮಲದ ವೇಗ ನೋಡುವಾಗ ಕಾಂಗ್ರೆಸ್ ಪಕ್ಷಕ್ಕೆ ಆತಂಕ ಆರಂಭವಾಗಿರಬಹುದು.
ಎಲ್ಲ ಪಕ್ಷಗಳಲ್ಲೂ ಅತೃಪ್ತರು ಇದ್ದಾರೆ. ಇರುತ್ತಾರೆ. ಬಿಜೆಪಿಯಲ್ಲಿ ಕೂಡ ಹಾಗೆಯೆ. ರಾಜಕೀಯದ ಮೂಲ ಉದ್ದೇಶವೇ ಅಧಿಕಾರ ಎಂದಾಗಿರುವಾಗ ಅತೃಪ್ತರು ಎಲ್ಲ ಕಡೆ ಸಿಗುತ್ತಾರೆ. ಆಗ ಅಂತವರನ್ನು ಲಾಲಸೆ ತೋರಿಸಿ, ಆಮಿಷಗಳನ್ನು ಒಡ್ದಿ ಪಕ್ಷಾಂತರ ಮಾಡುವುದು ಅಧಿಕಾರದಲ್ಲಿ ಇರುವ ಪಕ್ಷಕ್ಕೆ ಸುಲಭ. ಅದೇ ಈಗ ಆಗುತ್ತಿರುವುದು ಕೂಡ.

ಪಕ್ಷಕ್ಕೆ ಬಂದವರು ಸುಮ್ಮನೆ ಬರುತ್ತಾರಾ ?
ಆಪರೇಶನ್ ಕಮಲದ ಮೂಲಕ ಪಕ್ಷಕ್ಕೆ ಬಂದವರು ತಾವು ಅಧಿಕಾರದ ಆಸೆಗೆ ಬರುತ್ತಿಲ್ಲ. ತಾವು ಸಾಮಾನ್ಯ ಕಾರ್ಯಕರ್ತರಾಗಿ ಬರುತ್ತೇವೆ ಅನ್ನುತ್ತಾರೆ. ಆದರೆ ಮುಂದೆ..? ಪ್ರಮೋದ್, ವರ್ತೂರು ಅಂತವರು ಅಧಿಕಾರಶಾಹಿ ಮನಸ್ಸಿನವರು. ಅವರು ಮುಂದಿನ ವಿಧಾನಸಭಾ ಚುನಾವಣೆಗೆ ಟಿಕೆಟ್ ಕೇಳಿಯೇ ಕೇಳುತ್ತಾರೆ. ಆಗ ಮೂಲ ಕಾರ್ಯಕರ್ತರಿಗೆ ನೋವು ಆಗಿಯೇ ಆಗುವುದು. ಬಿಎಸ್‌ವೈ ಅಧಿಕಾರಕ್ಕೆ ಬರಲು ನಡೆದ ಆಪರೇಶನ್ ಕಮಲದ ಅಡ್ಡ ಪರಿಣಾಮ ಇನ್ನೂ ಕಣ್ಣ ಮುಂದೆ ಇದೆ. ಅವರಿಗೆಲ್ಲ ಮಂತ್ರಿ ಪದವಿಯ ಆಮಿಷ ಒಡ್ಡಲಾಗಿತ್ತು. ಕೆಲವರಿಗೆ ಸಚಿವ ಸ್ಥಾನ ಸಿಕ್ಕಿತು. ಕೆಲವರಿಗೆ ತಡವಾಗಿ ಸಿಕ್ಕಿತು. ಕೆಲವರಿಗೆ ಇನ್ನೂ ಸಿಕ್ಕಿಲ್ಲ ಅನ್ನುವುದು ಒಳಗುದಿಗೆ ಕಾರಣ ಆಗಿದೆ. ಮಂತ್ರಿ ಆದವರು ತಮಗೆ ಮುಖ್ಯವಾದ ಖಾತೆ ದೊರೆತಿಲ್ಲ ಅನ್ನುವ ಬೇಸರ ಇನ್ನೊಂದೆಡೆ. ಇದನ್ನು ಸರಿಮಾಡಲು ಪಕ್ಷದ ಹೈಕಮಾಂಡ್‌ ಗೆ ಇನ್ನೂ ಆಗಿಲ್ಲ. ಆಪರೇಶನ್ ಕಮಲಕ್ಕೆ ಒಳಗಾದ ಶಾಸಕರು ಪಕ್ಷಾಂತರ ಮಾಡಿದಾಗ ಅವರ ಕ್ಷೇತ್ರದ ಜನಾಭಿಪ್ರಾಯಕ್ಕೆ ಮನ್ನಣೆ ಕೊಡದೇ ಪಕ್ಷಾಂತರ ಮಾಡಿದರು ಎಂಬ ಅಸಮಾಧಾನ ಸ್ಥಳೀಯ ಮುಖಂಡರಲ್ಲಿರುವುದು. ಈ ಬಾರಿ ಅವರು ಬಿಜೆಪಿ ಪಕ್ಷದ ಟಿಕೆಟ್ ಪಡೆದು ಚುನಾವಣೆಗೆ ಸ್ಪರ್ಧೆ ಮಾಡಿದರೆ ಗೆಲ್ಲುವ ಭರವಸೆ ಇದೆಯಾ ? ಜನರ ಮನದಲ್ಲಿ ಏನಿದೆಯೋ ಯಾರಿಗೆ ಗೊತ್ತು?

ದೇವ ದುರ್ಲಭ ಕಾರ್ಯಕರ್ತರ ಕಷ್ಟ
ಬಿಜೆಪಿ ಪಕ್ಷವು ತನ್ನ ಪಕ್ಷದ ಕಾರ್ಯಕರ್ತರನ್ನು ದೇವದುರ್ಲಭ ಕಾರ್ಯಕರ್ತರು ಎಂದು ಕರೆದುಕೊಂಡು ಬಂದಿದೆ. ಅಂತಹ ಕಾರ್ಯಕರ್ತರಲ್ಲಿ ಹೆಚ್ಚಿನವರು ಆರ್‌ಎಸ್‌ಎಸ್‌ ಸಂಘಟನೆಯಲ್ಲಿ ತರಬೇತಿಯಾಗಿ ಬಂದವರು. ಅವರ ಇಚ್ಛೆಗೆ ವಿರುದ್ಧವಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹೊರಗಿಂದ ಬಂದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲು ಸಾಧ್ಯವೇ ? ಮಾಡಿದರೂ ಭಾವನಾತ್ಮಕವಾಗಿ, ಅಂತರಾಳದಿಂದ ಮಾಡಬಹುದೇ ? ಉದಾಹರಣೆಗೆ ಪ್ರಮೋದ್ ಮಧ್ವರಾಜ್ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಪುವಿನಲ್ಲಿ ಸ್ಪರ್ಧೆ ಮಾಡಿದರೆ ಕಾರ್ಯಕರ್ತರ ಪಾಡೇನು ? ಅದರಲ್ಲಿಯೂ ಈಗಲೇ ಆ ಸೀಟ್ ಮೇಲೆ ದೃಷ್ಟಿ ಇಟ್ಟು ಕೆಲಸ ಮಾಡುತ್ತಿರುವ ಯಶಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ ಅವರು ಒಪ್ಪಿಕೊಳ್ಳಲು ಸಾಧ್ಯ ಇದೆಯೇ ? ಅಲ್ಲದೇ ಹಾಲಿ ಶಾಸಕ ಲಾಲಾಜಿ ಮೆಂಡನ್‌ ಅವರು ಎಲ್ಲವನ್ನೂ ನೋಡಿ ಸುಮ್ಮನಿರುವರೇ ? ಇಲ್ಲ ಅನ್ನುವುದು ಉತ್ತರ.

ಸರಕಾರದ ಇಮೇಜಿಗೆ ಧಕ್ಕೆ ?
ಬಿಜೆಪಿಯಲ್ಲಿ ಈಗಲೇ ಮೂಲ ಬಿಜೆಪಿಯವರು, ಹೊರಗಿನಿಂದ ಬಂದವರು ಎಂಬ ಸ್ಪಷ್ಟವಾದ ವರ್ಗೀಕರಣವಿದೆ. ಅದು ಹೊರಗಿನವರಿಗೆ ಕೂಡ ಗೊತ್ತಾಗುವಷ್ಟರ ಮಟ್ಟಿಗೆ. ಮೂಲ ಬಿಜೆಪಿಗರು ಹೊರಗಿನಿಂದ ಬಂದವರನ್ನು ಸಂಶಯದಿಂದ ನೋಡುವ ಪರಿಸ್ಥಿತಿ ಇನ್ನೂ ಇದೆ. ಪಕ್ಷಾಂತರ ಮಾಡಿ ಬಂದವರಿಗೆ ಟಿಕೆಟ್ ಕೊಟ್ಟರೂ ಸಮಸ್ಯೆ. ಕೊಡದಿದ್ದರೂ ಸಮಸ್ಯೆ. ಇದನ್ನು ಸಮದೂಗಿಸುವುದು ತುಂಬಾ ಕಷ್ಟ.
ಸರಕಾರಕ್ಕೆ ಕ್ಲೀನ್ ಇಮೇಜ್ ಇದೆ ಎಂದು ನಳೀನ್ ಕುಮಾರ್ ಕಟೀಲ್ ಅವರು ಹೇಳುತ್ತಾರೆ. 150 ಸೀಟ್ ಖಂಡಿತ ಅನ್ನುತ್ತಾರೆ ಅಮಿತ್ ಶಾ. ಹಾಗಿರುವಾಗ ಮತ್ತೆ ಆಪರೇಶನ್ ಕಮಲ ಯಾಕೆ ಎನ್ನುವುದು ಪ್ರಶ್ನೆ. ಪಕ್ಷದ ಕಾರ್ಯಕರ್ತರು ಕೂಡ ಈ ವಿಷಯದಲ್ಲಿ ಖುಷಿ ಆಗಿಲ್ಲ. ಹಾಗಿರುವಾಗ ಇದನ್ನು ಪಕ್ಷದ ವರಿಷ್ಠರಿಗೆ ಹೇಳಬೇಕಾದವರು ಯಾರು ? ಉತ್ತರ ಸಿಗದ ಮಿಲಿಯನ್ ಡಾಲರ್ ಪ್ರಶ್ನೆ ಇದು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!