Tuesday, May 17, 2022
spot_img
Homeಸುದ್ದಿಇಂಧನ ಸಚಿವರಾಗಿ ಕಾರ್ಕಳಕ್ಕೆ ಸುನೀಲ್‌ ಕುಮಾರ್‌ ಕೊಡುಗೆ

ಇಂಧನ ಸಚಿವರಾಗಿ ಕಾರ್ಕಳಕ್ಕೆ ಸುನೀಲ್‌ ಕುಮಾರ್‌ ಕೊಡುಗೆ

ಕಾರ್ಕಳ : ಸುನೀಲ್‌ ಕುಮಾರ್‌ ಅವರು ಇಂಧನ ಸಚಿವರಾಗಿ ಅಧಿಕಾರ ವಹಿಸಿಕೊಂಡು ಮೊದಲು ಮಾಡಿದ ಕಾರ್ಯ ಕಾರ್ಕಳಕ್ಕೆ ಮೆಸ್ಕಾಂ ವಿಭಾಗೀಯ ಕಚೇರಿ ಮಂಜೂರುಗೊಳಿಸಿದ್ದು. ಕಾರ್ಕಳ-ಹೆಬ್ರಿ ಉಭಯ ತಾಲೂಕಿನ ವಿದ್ಯುತ್‌ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಕಳದಲ್ಲಿ ವಿಭಾಗೀಯ ಕಚೇರಿ ಸ್ಥಾಪಿಸುವುದು ಅಗತ್ಯವಿತ್ತು. ಈ ನಿಟ್ಟಿನಲ್ಲಿ ಶಾಸಕರಾಗಿದ್ದ ಸುನೀಲ್‌ ಕುಮಾರ್‌ ಕಳೆದ ಮೂರ್ನಾಲ್ಕು ವರ್ಷಗಳಿಂದ ಸತತ ಪ್ರಯತ್ನ ನಡೆಸಿದ್ದರು. ಆದರೂ ಪ್ರಸ್ತಾವನೆಗೆ ಸರಕಾರದಿಂದ ಮಂಜೂರಾತಿ ಮುದ್ರೆ ದೊರೆತಿರಲಿಲ್ಲ. ಇದೀಗ ಬೊಮ್ಮಾಯಿ ಅವರ ಸಂಪುಟದಲ್ಲಿ ಇಂಧನ ಸಚಿವರಾಗಿರುವ ಸುನೀಲ್‌ ಕುಮಾರ್‌ ಅವರು ಕಾರ್ಕಳಕ್ಕೆ ವಿಭಾಗೀಯ ಕಚೇರಿ ಮಂಜೂರಾತಿ ಮಾತ್ರವಲ್ಲದೇ 20 ವರ್ಷಗಳ ದೂರದೃಷ್ಟಿ ಯೋಚನೆಯೊಂದಿಗೆ ಭರಪೂರ ಯೋಜನೆ ಅನುಷ್ಠಾನಗೊಳಿಸುತ್ತಿದ್ದಾರೆ.

80 ಸಾವಿರ ವಿದ್ಯುತ್‌ ಸಂಪರ್ಕ
ಸಚಿವರಾಗುತ್ತಿದ್ದಂತೆ ಕಾರ್ಕಳದ ಋಣ ತೀರಿಸುವೆ ಎಂದು ಹೇಳಿದ್ದ ಸುನೀಲ್‌ ಕುಮಾರ್‌ ಆ ನಿಟ್ಟಿನಲ್ಲಿ ಅಕ್ಷರಶಃ ಮುಂದುವರಿಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮೆಸ್ಕಾಂ ಇಲಾಖೆಗೆ ಸಂಬಂಧಿಸಿದಂತೆ ಯಾವೊಂದು ಸಮಸ್ಯೆಯೂ ಎದುರಾಗಬಾರದೆಂದ ಕಾಳಜಿಯಿಂದ ನೂರಾರು ಕೋಟಿ ಯೋಜನೆಯನ್ನು ಕಾರ್ಕಳಕ್ಕೆ ತಂದಿದ್ದಾರೆ. ಕಾರ್ಕಳ ಹೆಬ್ರಿಯಲ್ಲಿ ಮನೆ, ವಾಣಿಜ್ಯ ಉದ್ದೇಶಕ್ಕಾಗಿ ಒಟ್ಟು 80 ಸಾವಿರ ವಿದ್ಯುತ್‌ ಸಂಪರ್ಕವಿದ್ದು, ಪ್ರತಿಯೊಬ್ಬರಿಗೂ ಗುಣಮಟ್ಟದ, ನಿರಂತರ ವಿದ್ಯುತ್‌ ಸರಬರಾಜುಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ.

ಮಂಜೂರಾತಿ
ಆರ್ ಡಿಎಸ್ಎಸ್ ನಲ್ಲಿ 110 ಕೋಟಿ ರೂ. ಕಾಮಗಾರಿಗೆ ಮಂಜೂರಾತಿ, 194 ಟಿಸಿ ಅಳವಡಿಕೆಗೆ ಅನುದಾನ, ನಿರಂತರವಾಗಿ ಗುಣಮಟ್ಟದ ವಿದ್ಯುತ್‌ ನೀಡುವ ನಿಟ್ಟಿನಲ್ಲಿ ಬಜಗೋಳಿ, ಬೈಲೂರು, ಅಜೆಕಾರಿನಲ್ಲಿ 33/11 ಕೆವಿ ವಿದ್ಯುತ್‌ ಉಪಕೇಂದ್ರ, ಮುಂಡ್ಕೂರು, ಹೊಸ್ಮಾರು, ಸಾಣೂರು, ಮುದ್ರಾಡಿಯಲ್ಲಿ ಹೊಸದಾಗಿ ಶಾಖೆ ನಿರ್ಮಾಣಕ್ಕೆ ಅನುದಾನ ಮಂಜೂರುಗೊಳಿಸಿರುತ್ತಾರೆ.

ಆರ್‌ಡಿಎಸ್‌ಎಸ್‌ ನ ಅನುದಾನದಡಿ ಇಡೀ ಕಾರ್ಕಳ ಹೆಬ್ರಿ ತಾಲೂಕಿನ ಹಳೆಯ ತಂತಿಗಳನ್ನು ತೆಗೆದು ಹೊಸ ತಂತಿಗಳ ಬದಲಾವಣೆ ಕಾರ್ಯ, ನಗರದಲ್ಲಿ ಅಂಡರ್‌ಗ್ರೌಂಡ್‌ ಕೇಬಲ್‌ ಅಳವಡಿಕೆ ಕಾಮಗಾರಿ ನಡೆಯಲಿದೆ. ಇದರಿಂದ ವಿದ್ಯುತ್‌ ವ್ಯತ್ಯಯವನ್ನು ಕಡಿಮೆ ಮಾಡಬಹುದಾಗಿದೆ. ಇದಕ್ಕೆ ಪೂರಕವಾಗಿ ಲಿಂಕ್‌ ಲೈನ್‌ ಕಾರ್ಯವೂ ಆಗಲಿದೆ. 4 ತಿಂಗಳೊಳಗಡೆ ಕಾಮಗಾರಿಗೆ ಚಾಲನೆ ದೊರೆಯಲಿದೆ.

194 ಟಿಸಿ
ಹೊಸದಾಗಿ 129 ಟ್ರಾನ್ಸ್‌ಫರ್‌ ಅಳವಡಿಕೆಗೆ 5.62 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಲಾಗಿದ್ದು, ಅದರಲ್ಲಿ ಈಗಾಗಲೇ 60 ಟಿಸಿಗಳು ಚಾರ್ಜ್‌ ಆಗಿವೆ. ಇದೀಗ ಹೆಚ್ಚುವರಿಯಾಗಿ 65 ಟಿಸಿ ಅಳವಡಿಕೆಗೆ 5.61 ಕೋಟಿ ರೂ. ಮಂಜೂರಾಗಿದೆ. ವಿವಿಧೆಡೆ ಉಪಕೇಂದ್ರ, ಶಾಖೆ ತೆರೆಯುವುದರಿಂದ ಲೋ ವೋಲ್ಟೇಜ್‌ ಸಮಸ್ಯೆ ಬಗೆಹರಿಯಲಿದೆ. ಒಂದೊಂದು ಶಾಖೆಗಳಲ್ಲಿ 10 ಮಂದಿ ಪವರ್‌ ಮ್ಯಾನ್‌ಗಳು ಕರ್ತವ್ಯ ನಿರ್ವಹಿಸುವುದರಿಂದ ವಿದ್ಯುತ್‌ ಸಮಸ್ಯೆಗಳು ಕ್ಷಣಾರ್ಧದಲ್ಲಿ ಪರಿಹಾರವಾಗಲಿದೆ.

ಲೋಡ್‌ ಶೆಡ್ಡಿಂಗ್‌ ಇಲ್ಲ
ಸಚಿವ ಸುನೀಲ್‌ ಕುಮಾರ್‌ ಇಂಧನ ಮಂತ್ರಿಯಾದ ಬಳಿಕ ಕಾರ್ಕಳದಲ್ಲಿ ಲೋಡ್‌ ಶೆಡ್ಡಿಂಗ್‌ ಹೆಸರಲ್ಲಿ ಪವರ್‌ ಕಟ್‌ ಮಾಡಲಾಗುತ್ತಿಲ್ಲ. ವಿದ್ಯುತ್‌ ತಂತಿ ಮೇಲೆ ಮರ ಬಿದ್ದಾಗ, ಪಕ್ಷಿಗಳು ಕೂತಗ ವಿದ್ಯುತ್‌ ಸಂಪರ್ಕ ಕಡಿತವಾಗುತ್ತಿದ್ದೆಯೇ ವಿನಾಃ ಲೋಡ್‌ ಶೆಡ್ಡಿಂಗ್‌ ಮಾಡಲಾಗುತ್ತಿಲ್ಲ. ಲೈನ್‌ ದುರಸ್ತಿ, ನಿರ್ವಹಣೆ ಮೊದಲಾದ ಕಾರಣಗಳಿಗಾಗಿ ಮಂಗಳವಾರ ಮಾತ್ರ ಕೆಲ ಹೊತ್ತು ವಿದ್ಯುತ್‌ ಕಡಿತ ಮಾಡಲಾಗುತ್ತಿದೆ.

ವಿಭಾಗೀಯ ಕಚೇರಿಯಿಂದ ಏನು ಅನುಕೂಲ
ವಿಭಾಗೀಯ ಕಚೇರಿ ಸ್ಥಾಪನೆಯಿಂದ ಪ್ರತಿ ವರ್ಷ ಮೆಸ್ಕಾಂ ಇಲಾಖೆಯಿಂದ ಕಾರ್ಕಳ ವಿಭಾಗೀಯ ಕಚೇರಿಗೆ ಮರುನಿರ್ವಹಣೆ, ಟಿಸಿ ಅಳವಡಿಕೆಗಾಗಿ 3 ಕೋಟಿ ರೂ. ಅನುದಾನ ದೊರೆಯಲಿದೆ. ವಿದ್ಯುತ್‌ ಉಪಕರಣ ಮಂಜೂರಾತಿಗೆ ಉಡುಪಿ ಕಚೇರಿ ಅಲೆದಾಡುವುದು ನಿಲ್ಲಲಿದೆ. ವಿದ್ಯುತ್‌ ಸಂಪರ್ಕ ನೀಡಲು ತಾಂತ್ರಿಕ ಅನುಮೋದನೆ, ಇನ್ನಿತರ ಆಡಳಿತಾತ್ಮಕ ಮಂಜೂರಾತಿಗೆ ಕಾರ್ಕಳದ ಗುತ್ತಿಗೆದಾರರು ಮತ್ತು ವಿದ್ಯುತ್‌ ಗ್ರಾಹಕರು ಉಡುಪಿಯನ್ನು ಅವಲಂಬಿಸುವುದು ತಪ್ಪಲಿದೆ. ಇದರಿಂದ ಅನಗತ್ಯ ವಿಳಂಬಕ್ಕೆ ಕಡಿವಾಣ ಬೀಳಲಿದೆ. ಟ್ರಾನ್ಸ್‌ಫಾರ್ಮರ್‌, ಮೀಟರ್‌ ದುರಸ್ತಿ ಕಾರ್ಯ, ತಾಂತ್ರಿಕ ಸಮಸ್ಯೆಗಳಿಗೆ ಬೇಗ ಪರಿಹಾರ ಸಿಗಲಿದೆ. ಪ್ರಸ್ತುತ ಕಾರ್ಕಳ ಮೆಸ್ಕಾಂ ಕಚೇರಿಯಲ್ಲಿ ಒಟ್ಟು 90 ಕ್ಕೂ ಅಧಿಕ ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಿಭಾಗೀಯ ಕಚೇರಿ ಆಗುತ್ತಿರುವುದರಿಂದ ಹೆಚ್ಚುವರಿಯಾಗಿ 62 ಮಂದಿ ದೊರೆಯಲಿದ್ದಾರೆ.

ದಕ್ಷ ತಂಡ
ಸಚಿವ ಸುನೀಲ್‌ ಕುಮಾರ್‌ ಅವರ ಅಭಿವೃದ್ಧಿ ಕಾರ್ಯಗಳಿಗೆ ಹೊಸದಾಗಿ ಕಾರ್ಕಳ ಮೆಸ್ಕಾಂ ಉಪವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್‌ ಆಗಿರುವ ದಕ್ಷ ಅಧಿಕಾರಿ ನರಸಿಂಹ, ಈಗಾಗಲೇ ತನ್ನ ಕರ್ತವ್ಯ ನಿಷ್ಠೆ, ಕಾರ್ಯತತ್ಪರತೆಯ ಮೂಲಕ ಕಾರ್ಕಳದ ಜನತೆಯ ಪ್ರಶಂಸೆಗೆ ಪಾತ್ರರಾಗಿರುವ ಎಇಇ ದಿಲೀಪ್‌ ಅವರೊಂದಿಗೆ ಇಡೀ ಮೆಸ್ಕಾಂ ಸಿಬ್ಬಂದಿ ಹಗಲಿರುಳು ಕಾರ್ಯನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!