ಬೆಂಗಳೂರು : ರಸ್ತೆ ಬದಿ ನಿಲ್ಲಿಸಿದ್ದ ಹಳೇ ಕಾರೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿರುವ ಘಟನೆ ಮಾಗಡಿ ರಸ್ತೆ ಠಾಣೆ ವ್ಯಾಪ್ತಿಯ ರಾಜಾಜಿನಗರ ಕೈಗಾರಿಕಾ ಪ್ರದೇಶದಲ್ಲಿ ಶುಕ್ರವಾರ ನಡೆದಿದೆ. ಮೃತ ವ್ಯಕ್ತಿಯು ಸುಮಾರು 45 ವರ್ಷದವರಾಗಿದ್ದು ಗುರುತು ಪತ್ತೆಯಾಗಿಲ್ಲ. ಮೇ. 13 ಶುಕ್ರವಾರ ಮಧ್ಯಾಹ್ನ ಕಾರಿನ ಬಳಿ ಕೆಟ್ಟ ವಾಸನೆ ಬರುತ್ತಿದ್ದರಿಂದ ಅನುಮಾನಗೊಂಡ ಸ್ಥಳೀಯರು ಕಾರಿನ ಬಾಗಿಲು ತೆರೆದು ನೋಡಿದಾಗ ಮೃತದೇಹ ಪತ್ತೆಯಾಗಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ಹೇಳಿದರು. ಗೋಪಿ ಎಂಬವವರಿಗೆ ಸೇರಿದ ಹಳೇ ಅಂಬಾಸಿಡರ್ ಕಾರನ್ನು ಕಳೆದೆರಡು ವರ್ಷಗಳಿಂದ ರಾಜಾಜಿನಗರ ಕೈಗಾರಿಕಾ ಪ್ರದೇಶದ ರಸ್ತೆ ಬದಿ ನಿಲುಗಡೆ ಮಾಡಲಾಗಿದ್ದು, ಕಾರಿಗೆ ವಿಭಿನ್ನವಾಗಿ ಪೇಟಿಂಗ್ ಮಾಡಲಾಗಿದೆ. ಕಾರನ್ನು ಮೊದಲು ಸಿನಿಮಾ ಶೂಟಿಂಗ್ಗೆ ಬಳಸುತ್ತಿದ್ದರೆಂಬ ಬಗ್ಗೆ ಮಾಹಿತಿ ದೊರಕ್ಕಿದ್ದು, ಕಾರಿನ ಮಾಲೀಕ ಸದ್ಯ ಬೇರೆಡೆ ಮನೆ ಸ್ಥಳಾಂತರಿಸಿದ್ದಾರೆ. ಕಾರನ್ನು ಜನಸಂದಣಿ ಕಡಿಮೆ ಇರುವ ರಸ್ತೆಯಲ್ಲಿ ನಿಲ್ಲಿಸಿ ಹೋಗಿದ್ದರು. ಹೀಗಾಗಿ ಎರಡು ವರ್ಷದಿಂದ ಕಾರು ಅಲ್ಲೇ ಇತ್ತು. ಇದೀಗ ಆ ಕಾರಿನ ಚಾಲಕನ ಆಸನದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ ಮತ್ತು ಸಾವಿನ ಕಾರಣ ತಿಳಿಯಲು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Recent Comments
ಕಗ್ಗದ ಸಂದೇಶ
on