ನಾವು ನಕಾರಾತ್ಮಕ ಸುದ್ದಿಗಳಿಂದ ಬೇಗ ಆಕರ್ಷಿತರಾಗುತ್ತಿದ್ದೇವೆ ಇದು ನಮ್ಮ ಮಾನಸಿಕ ಸ್ಥಿತಿಯನ್ನು ತೋರಿಸುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ಓದುವ ಸಮಾಚಾರ ಪತ್ರಿಕೆಗಳು ಇರಬಹುದು ಅಥವಾ ಇಪ್ಪತ್ತ್ನಾಲ್ಕು ಗಂಟೆ ನಮ್ಮ ಮೊಬೈಲ್ ನಲ್ಲಿ ಬರುವ ಅಪರಾಧಗಳ ಸುದ್ದಿ ಇರಬಹುದು ನಮ್ಮ ಗಮನ ಸೆಳೆಯುವುದು. ಈ ಮನಸ್ಸಿಗೆ ನಕಾರಾತ್ಮಕತೆಯನ್ನು ತುಂಬುವ ದೃಶ್ಯಗಳು. ಇದು ಏಕೆ ಹೀಗೆ ಎಂದು ಯೋಚನೆ ಮಾಡುವುದು ಅಗತ್ಯ.
ನಕಾರಾತ್ಮಕ ತುಂಬಿದ ಈ ಜಗತ್ತಿನಲ್ಲಿ ಧನ್ಯಾತ್ಮಕ ಯೋಚನೆಗಳು ಬರುವುದಾದರೂ ಹೇಗೆ? ವಾರ್ತಾಪತ್ರಿಕೆ ಇರಲಿ ನ್ಯೂಸ್ ಚಾನೆಲ್ ಗಳೇ ಇರಲಿ ಇಪ್ಪತ್ತ್ನಾಕು ಗಂಟೆ ಅದನ್ನೇ ತಿರುಗು ಮುರುಗ, ಅಪರಾಧಗಳ ಸಾವು ನೋವುಗಳ ಸುದ್ದಿ ನಿರಂತರ ಹರಿದಾಡುತ್ತಿರುತ್ತದೆ. ನಮ್ಮ ಮನಸ್ಸು ಹೇಗೆಂದರೆ ಒಳ್ಳೆಯ ಸಂತೋಷದ ಸುದ್ದಿಯನ್ನು ಬೇಗ ಮರೆತು ಬಿಡುತ್ತದೆ. ಅದು ಏಕೆಂದರೆ ಅದಕ್ಕೆ ದುಃಖದಿಂದಲೇ ನಕಾರಾತ್ಮಕ ಆಲೋಚನೆಗಳಿಂದಲೇ ಚಿಕ್ಕಂದಿನಿಂದ ರೂಢಿಯಾಗಿಬಿಟ್ಟಿರುತ್ತದೆ. ಜೀವನವೇ ದುಃಖಮಯ ಎಂದು ನಂಬಿ ಬಿಡುತ್ತೇವೆ. ಜೀವನವನ್ನು ನಕಾರಾತ್ಮಕ ದೃಷ್ಟಿಯಿಂದಲೇ ನೋಡುತ್ತಿರುತ್ತೇವೆ. ಅದು ಎಷ್ಟರಮಟ್ಟಿಗೆ ಎಂದರೆ ನಮ್ಮೆದುರು ಆಗುವ ಒಳ್ಳೆಯ ಕಾರ್ಯದಲ್ಲಿಯೂ ನಕಾರಾತ್ಮಕ ಭಾವನೆಯನ್ನು ಅಂಟಿಸಿ ಬಿಡುತ್ತೇವೆ. ಇದರ ಮೂಲ ಕಾರಣ ನಾವು ಜೀವನವನ್ನು ನೋಡುವ ರೀತಿಯಿಂದ, ನಮ್ಮ ಆಲೋಚನೆಗಳಿಗೆ ಅದು ರೂಢಿಯಾಗಿರುತ್ತದೆ ಅದನ್ನೇ ನಂಬಿ ಬಿಡುತ್ತದೆ. ಈ ನಂಬಿಕೆಯಿಂದ ಹೊರಬರಲು ಪ್ರಯತ್ನಿಸಬೇಕು. ಅದಕ್ಕಿಂತ ಮುಂಚೆ ನಾವು ನಕಾರಾತ್ಮಕ ಆಲೋಚನೆಗಳನ್ನು ಮಾಡುತ್ತಿದ್ದೇವೆ ಎಂಬುದನ್ನು ತಿಳಿಯಬೇಕು. ತಿಳಿದರೆ ತಾನೇ ಅದನ್ನು ಸರಿಪಡಿಸಲು ಸಾಧ್ಯ.
ಆದದ್ದೆಲ್ಲಾ ಒಳಿತೇ ಆಯಿತು, ಎನ್ನುವ ಪುರಂದರದಾಸರ ಪದಗಳು ಎಷ್ಟು ಅದ್ಭುತವಲ್ಲವೇ?? ಎಷ್ಟೇ ಕಷ್ಟ, ದುಃಖ, ನಕಾರಾತ್ಮಕ ಆಲೋಚನೆಗಳು ಘಟನೆಗಳು ನಡೆದರೂ ಅದನ್ನೆಲ್ಲವನ್ನು ನಮ್ಮ ಒಳ್ಳೆಯದಕ್ಕಾಗಿ ಎಂದು ಯೋಚಿಸಿ ನೋಡಿ… ನಿಮ್ಮಲ್ಲಿ ಬದಲಾವಣೆಯಾಗುವುದು ಖಂಡಿತ.
ಈ ಪರಿಸ್ಥಿತಿ ಹೀಗೆಯೇ…. ನಾವು ದುಃಖ ಪಡಲೇ ಬೇಕು ಎನ್ನುವ ಧೋರಣೆಯನ್ನು ದೂರವಿಡಿ. ನಮ್ಮ ಮನಸ್ಸು ನಮ್ಮ ಕೈಯ್ಯಲ್ಲಿದೆ, ಯಾವ ಆಲೋಚನೆಗೆ ಎಷ್ಟು ಮಹತ್ವ ಕೊಡಬೇಕೆಂದು ನಾವು ನಿಶ್ಚಯ ಮಾಡಬೇಕು. ನಕಾರಾತ್ಮಕ ಆಲೋಚನೆಗಳಿಂದ ನಮಗೆಯೇ ಹಾನಿಯೇ ವಿನಃ ಇತರರಿಗಲ್ಲ. ಜೀವನದಲ್ಲಿ ನಮಗೇನು ಬೇಕು ಎನ್ನುವುದು ಮುಖ್ಯ. ಆಯ್ಕೆ ನಮ್ಮದು, ಸುಖವಾಗಿರಬೇಕೊ ಅಥವಾ ಜೀವನವಿಡೀ ನಕರಾತ್ಮಕ ಅಂಶಗಳಿಂದ ನರಳಬೇಕೊ ಎಂದು.
ಇದೆಲ್ಲದರಿಂದ ಹೊರಬರಲು ಒಂದೇ ಉಪಾಯ ಅದೇನೆಂದರೆ ನ್ಯೂಸ್ ಚಾನಲ್, ನ್ಯೂಸ್ ಪೇಪರ್ ಸುದ್ದಿ, ಜಾಲ ತಾಣಗಳಿಂದ ಸ್ವಲ್ಪ ದಿನಗಳ ಮಟ್ಟಿಗೆ ದೂರವಿರುವುದು. ಒಂದು ದಿನ ಅಥವಾ ಒಂದು ವಾರ ಕೂಡ ಆಗಬಹುದು. ಇದರಿಂದ ಮನಸ್ಸಿನ ಶಾಂತತೆಯನ್ನು ಕಾಪಾಡಬಹುದು ನಾವು ನೋಡುವ, ಕೇಳುವ, ವಿಷಯಗಳು ಮನಸ್ಸಿನ ಮೇಲೆ ಅಗಾಧ ಪರಿಣಾಮ ಬೀರಿರುವುದು ಸುಳ್ಳಲ್ಲ. ಇದನ್ನು ಪ್ರಯತ್ನಿಸಿ ನೋಡಿ. ಅದರ ಜೊತೆಗೆ ಧ್ಯಾನವನ್ನು ರೂಢಿಸಿಕೊಳ್ಳಿ. ಜೀವನವನ್ನು ನಮಗೆ ಬೇಕಾದ ಹಾಗೆ ತಿರುಗಿಸಬಹುದು. ನಾನು ಮಾನಸಿಕ ಉಪವಾಸವನ್ನು ಪಾಲಿಸುತ್ತಿದ್ದೇನೆ ನೀವು ಪಾಲಿಸುತ್ತೀರಿ ಅಲ್ಲವೇ?

ಹರ್ಷಾ ಕಾಮತ್