ಬೆಂಗಳೂರು : ಕಳೆದ 16 ದಿನಗಳಿಂದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ತಪ್ಪಿಸಿಕೊಂಡಿದ್ದ ಕಾಮಾಕ್ಷಿ ಪಾಳ್ಯ ಆ್ಯಸಿಡ್ ದಾಳಿ ಪ್ರಕರಣದ ಆರೋಪಿ ನಾಗೇಶ್ ನನ್ನು ಕೊನೆಗೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ನಡೆದಿದ್ದ ಯುವತಿ ಮೇಲಿನ ಆ್ಯಸಿಡ್ ದಾಳಿ ಆರೋಪಿ ನಾಗೇಶ್ ನನ್ನು ಕೊನೆಗೂ ಪೊಲೀಸರು ಬಂಧಿಸಿದ್ದು, ಪ್ರಕರಣದ ಬಳಿಕ ತಲೆಮರೆಸಿಕೊಂಡಿದ್ದ ನಾಗೇಶ್ ನನ್ನು ಕರ್ನಾಟಕ ಪೊಲೀಸರು ತಮಿಳುನಾಡಿನ ತಿರುವಣ್ಣಾ ಮಲೈನಲ್ಲಿ ಬಂಧಿಸಿದ್ದಾರೆ.
ಈ ಹಿಂದೆ ಕೂಡ ನಾಗೇಶ್ ಬೇರೆ ಬೇರೆ ಯುವತಿಯರನ್ನ ಪ್ರೀತಿಸುವಂತೆ ಕಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ನಾಗೇಶ್ ಮೂಲತಃ ಕೃಷ್ಣಗಿರಿ ಜಿಲ್ಲೆಯ ಕೊಡಿಯಾಲಂ ನಿವಾಸಿಯಾಗಿದ್ದು, 7 ವರ್ಷದ ಹಿಂದೆ ಬೆಂಗಳೂರಿಗೆ ಬಂದು ಯುವತಿ ದೊಡ್ಡಮ್ಮ ಮನೆಯಲ್ಲಿ ಬಾಡಿಗೆಗೆ ಇದ್ದ. ಪ್ರೀತಿ ಮಾಡು ಅಂತಾ ಯುವತಿಯ ಹಿಂದೆ ಬಿದ್ದಿದ್ದ. ಮನೆ ಖಾಲಿ ಮಾಡಿಸಿದ ಬಳಿಕ ತಮ್ಮ ಸ್ವಂತ ಊರು ಕೊಡಿಯಾಲಂಗೆ ಹೋಗಿದ್ದ.
ಎರಡು ವರ್ಷದ ಹಿಂದೆ ಮತ್ತೋರ್ವ ಯುವತಿಗೂ ಹೀಗೆ ಕಾಟ ಕೊಟ್ಟಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕೊಡಿಯಾಲಂನಲ್ಲಿರುವ ತಮ್ಮ ಮನೆ ಪಕ್ಕದಲ್ಲಿದ್ದ ಯುವತಿಯನ್ನು ಪೀಡಿಸುತ್ತಿದ್ದನಂತೆ. ಆತನ ಕಾಟ ತಾಳಲಾರದೇ ಯುವತಿ ಪೋಷಕರಿಗೆ ವಿಚಾರ ತಿಳಿಸಿದ್ದಳು. ಯುವತಿ ಪೋಷಕರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಂದು ಪೊಲೀಸರು ಬುದ್ಧಿ ಹೇಳಿ ಕಳುಹಿಸಿದ್ದರು. ನಂತರ ಆ ಯುವತಿಯನ್ನ ಬೇರೆ ಹುಡುಗನಿಗೆ ಮದುವೆ ಮಾಡಿಕೊಡಲಾಗಿತ್ತು. ನಂತರ ಮತ್ತೆ ಕೊಡಿಯಾಲಂ ಬಿಟ್ಟು ಬೆಂಗಳೂರಿಗೆ ಬಂದಿದ್ದ.
ಮತ್ತೆ ಬೆಂಗಳೂರಿಗೆ ಬಂದು ಅದೇ ಯುವತಿಗೆ ಪ್ರೀತಿಸುವಂತೆ ಪೀಡಿಸಿದ್ದ. ಪ್ರೀತಿ ತಿರಸ್ಕರಿಸಿದಕ್ಕೆ ಆ್ಯಸಿಡ್ ಹಾಕಿ ಪರಾರಿಯಾಗಿದ್ದ.