ತನ್ನ ಸ್ವಂತ ಸಂಪಾದನೆಯಿಂದ ಅಥವಾ ಆಸ್ತಿಯಿಂದ ತನ್ನನ್ನು ತಾನು ಪಾಲನೆ – ಪೋಷಣೆ ಮಾಡಿಕೊಳ್ಳಲು ಅಸಮರ್ಥನಾಗಿರುವ ತಂದೆ ಅಥವಾ ತಾಯಿ ಸೇರಿದಂತೆ ಯಾರೇ ಹಿರಿಯ ನಾಗರಿಕರಿಗೆ ಕಾನೂನಿನ ರಕ್ಷಣೆ ನೀಡುವ ಉದ್ದೇಶದಿಂದ ತಂದೆ-ತಾಯಿಯರ ಮತ್ತು ಹಿರಿಯ ನಾಗರಿಕರ ಪಾಲನೆ – ಪೋಷಣೆ ಮತ್ತು ಕಲ್ಯಾಣ ಅಧಿನಿಯಮ 2007” ಎಂಬ ಅಧಿನಿಯಮ (ಕಾನೂನು) ಜಾರಿಯಲ್ಲಿದ್ದು ತಮ್ಮ ಮಕ್ಕಳಿಂದ ನಿರ್ಲಕ್ಷ್ಯಕ್ಕೊಳಪಟ್ಟ ತಂದೆ ತಾಯಿಯರು ಮತ್ತು ಹಿರಿಯ ನಾಗರಿಕರು ಈ ಕಾನೂನಿನ ಮೂಲಕ ಸೂಕ್ತ ರಕ್ಷಣೆ ಮತ್ತು ತಮ್ಮ ಜೀವನ ನಿರ್ವಹಣೆಗೆ ಅಗತ್ಯವಿರುವ ಆರ್ಥಿಕ ಪರಿಹಾರವನ್ನು ತಮ್ಮ ಮಕ್ಕಳಿಂದ ಮತ್ತು ನಿರ್ಲಕ್ಷಿತ ವ್ಯಕ್ತಿಯಿಂದ ಯಾವುದೇ ಪ್ರತಿಫಲ ರಹಿತವಾಗಿ ಆಸ್ತಿ ಹೊಂದಿರುವ ಸಂಬಂಧಿಕರಿಂದ ಪಡೆದುಕೊಳ್ಳಬಹುದಾಗಿದೆ.
ಹಿರಿಯ ನಾಗರಿಕ/ತಂದೆ-ತಾಯಿ ಅವರ ಸಾಮಾನ್ಯ ಜೀವನ ನಿರ್ವಹಣೆಗೆ ಏನೆಲ್ಲಾ ಅಗತ್ಯವಿದೆಯೋ ಅವುಗಳನ್ನು ಪೂರೈಸುವ ಮತ್ತು ಅವರ ಪಾಲನೆ-ಪೋಷಣೆ ಮಾಡುವ ಜವಾಬ್ದಾರಿಯು ಅವರ ಮಕ್ಕಳದ್ದಾಗಿರುತ್ತದೆ. ನಿರ್ಲಕ್ಷ್ಯಕ್ಕೊಳಪಟ್ಟ ಹಿರಿಯ ನಾಗರಿಕ, ತಂದೆ ಅಥವಾ ತಾಯಿ ತನ್ನ ಪಾಲನೆ – ಪೋಷಣೆ ಬಗ್ಗೆ ಸರಿಯಾದ ವ್ಯವಸ್ಥೆ ಹೊಂದಿರದಿದ್ದಲ್ಲಿ ಅವರು ನೇರವಾಗಿ ಅಥವಾ ಯಾವುದೇ ನೊಂದಾಯಿತ ಸ್ವಯಂ ಸೇವಾ ಸಂಸ್ಥೆ ಮುಖಾಂತರ ಸೂಕ್ತ ರಕ್ಷಣೆ ಮತ್ತು ಪರಿಹಾರಕ್ಕಾಗಿ ಸರಕಾರದಿಂದ ನಿಯಮಿಸಿರುವ ನ್ಯಾಯಾಧೀಕರಣಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ಅಂತಹ ನ್ಯಾಯಾಧೀಕರಣವು ಸ್ವಯಂ ಪ್ರೇರಣೆಯಿಂದ ಪ್ರಕರಣವನ್ನು ದಾಖಲಿಸಿಕೊಂಡು ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ನಿರ್ಲಕ್ಷ್ಯಕ್ಕೊಳಗಾದ ಹಿರಿಯ ನಾಗರಿಕರಿಗೆ ಅಥವಾ ತಂದೆ ತಾಯಿಯವರಿಗೆ ಸೂಕ್ತ ಪರಿಹಾರ ನೀಡುವಂತೆ ಅವರ ಮಕ್ಕಳಿಗೆ ಅಥವಾ ಸಂಬಂಧಿಕರಿಗೆ ಆದೇಶಿಸಬಹುದಾಗಿದೆ. ಈ ರೀತಿಯಾಗಿ ಅರ್ಜಿ ಸ್ವೀಕರಿಸಿದ ಅಥವಾ ಪ್ರಕರಣ ನೋಂದಾಯಿಸಿದ ನಂತರ ನಿರ್ಲಕ್ಷ್ಯಕ್ಕೊಳಪಟ್ಟವರ ಮಕ್ಕಳಿಗೆ ಅಥವಾ ಸಂಬಂಧಿಕರಿಗೆ ನ್ಯಾಯಾಧಿಕರಣವು ಸೂಕ್ತ ನೋಟಿಸ್ ನೀಡಿ ಅವರು ತಮ್ಮ ಅಹವಾಲನ್ನು ಹೇಳಿಕೊಳ್ಳಲು ಒಂದು ಅವಕಾಶ ನೀಡಿದ ನಂತರ ಪ್ರಕರಣದ ವಿಚಾರಣೆಯನ್ನು ಪ್ರಾರಂಭಿಸಿ ಪ್ರಕರಣದ ನೋಟಿಸನ್ನು ಜಾರಿ ಮಾಡಿದ 90 ದಿವಸಗೊಳಗಾಗಿ ಪ್ರಕರಣವನ್ನು ವಿಲೇವಾರಿ ಮಾಡಬೇಕಾಗುತ್ತದೆ. ಈ ರೀತಿಯ ಅರ್ಜಿಯನ್ನು ನಿರ್ಲಕ್ಷ್ಯಕ್ಕೊಳಗಾದ ಹಿರಿಯ ನಾಗರಿಕ ಅಥವಾ ತಂದೆ-ತಾಯಿ ತಮ್ಮ ಮಕ್ಕಳ ಅಥವಾ ಸಂಬಂಧಿಕರ ಪೈಕಿ ಒಬ್ಬ ಅಥವಾ ಹೆಚ್ಚು ವ್ಯಕ್ತಿಗಳ ವಿರುದ್ಧ ದಾಖಲಿಸಬಹುದು. ಇಂತಹ ಪ್ರಕರಣದಲ್ಲಿ ನಿರ್ಲಕ್ಷಿತ ಹಿರಿಯ ನಾಗರಿಕರ ಅಥವಾ ತಂದೆ-ತಾಯಿಯ ಪಾಲನೆ ಪೋಷಣೆಗಾಗಿ ಮತ್ತು ಇತರ ವೆಚ್ಚಗಳಿಗಾಗಿ ಹಣ ಪಾವತಿ ಮಾಡಬೇಕೆನ್ನುವ ಆದೇಶ ಪಡೆದ ಮಕ್ಕಳು ಅಥವಾ ಸಂಬಂಧಿಕರು ಸಕಾರಣವಿಲ್ಲದೆ ಆದೇಶವನ್ನು ಪರಿಪಾಲಿಸದಿದ್ದಲ್ಲಿ ಅವರ ವಿರುದ್ಧ ವಾರಂಟನ್ನು ಹೊರಡಿಸುವ ಮತ್ತು ಹಣ ವಸೂಲಾತಿಗಾಗಿ ಆದೇಶ ಪಡೆದ ಮಕ್ಕಳನ್ನು ಅಥವಾ ಸಂಬಂಧಿಕರನ್ನು ಶಿಕ್ಷೆಗೆ ಗುರಿಪಡಿಸುವ ಅಧಿಕಾರವನ್ನು ಆದೇಶ ಮಾಡಿರುವ ನ್ಯಾಯಾಧಿಕರಣ ಹೊಂದಿರುತ್ತದೆ.
ರಾಜ್ಯ ಸರಕಾರದ ಆಯಾಯ ಉಪವಿಭಾಗದ ಉಪವಿಭಾಗಾಧಿಕಾರಿ ಅಥವಾ ಅವರ ದರ್ಜೆಗಿಂತ ಮೇಲ್ಪಟ್ಟ ದರ್ಜೆಯ ಸರಕಾರಿ ಅಧಿಕಾರಿಯು ನ್ಯಾಯಾಧೀಕರಣದ ಅಧ್ಯಕ್ಷರಾಗಿರುವರು. ನ್ಯಾಯಾಧೀಕರಣದ ಆದೇಶದಿಂದ ಬಾಧಿತರಾಗುವ ಯಾವುದೇ ವ್ಯಕ್ತಿ ಆದೇಶದ ದಿನಾಂಕದಿಂದ 60 ದಿವಸ ದೊಳಗಾಗಿ ಅಪೀಲು ಸಲ್ಲಿಸುವ ಅವಕಾಶವನ್ನು ಹೊಂದಿರುತ್ತಾರೆ. ಇಂತಹ ಅಪೀಲು ನ್ಯಾಯಾಧೀಕರಣವನ್ನು ರಾಜ್ಯದ ಪ್ರತಿಯೊಂದು ಜಿಲ್ಲೆಯು ಹೊಂದಿರುತ್ತದೆ.
ಮೇಲ್ಕಾಣಿಸಿದ ಅಧಿನಿಯಮದ ಪ್ರಕಾರ ರಾಜ್ಯ ಸರ್ಕಾರವು ಅವಶ್ಯವೆಂದು ಭಾವಿಸುವ ಪ್ರದೇಶಗಳಲ್ಲಿ ಹಿರಿಯ ನಾಗರಿಕರಿಗಾಗಿ ಉಚಿತವಾಗಿ ವೃದ್ಧಾಶ್ರಮಗಳನ್ನು ಸ್ಥಾಪಿಸುವ ಮತ್ತು ವೃದ್ಧಾಶ್ರಮದಲ್ಲಿ ವಾಸಿಸುವ ನಿರ್ಲಕ್ಷಿತ ಹಿರಿಯ ನಾಗರಿಕರ ಮತ್ತು ತಂದೆ ತಾಯಿಯರ ವೈದ್ಯೋಪಚಾರಗಳಿಗಾಗಿ ಸೂಕ್ತ ಏರ್ಪಾಟನ್ನು ಮಾಡುವ ಜವಾಬ್ದಾರಿಯನ್ನು ಹೊಂದಿರುತ್ತದೆ.
ಕೆಲವು ಸಂದರ್ಭದಲ್ಲಿ ವಯಸ್ಸಾದ ಹಿರಿಯ ನಾಗರಿಕ ವ್ಯಕ್ತಿಗಳು ಮೋಸಕ್ಕೆ ಬಲಿಯಾಗಿ ತಮ್ಮ ಆಸ್ತಿಯನ್ನು ಕಳಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಅವರಿಗೆ ಸೂಕ್ತ ರಕ್ಷಣೆ ನೀಡುವುದು ಸರಕಾರದ ಆದ್ಯ ಕರ್ತವ್ಯವಾಗಿರುತ್ತದೆ. ಮಾತ್ರವಲ್ಲದೆ ಮೋಸದಿಂದ ಪರಾಭಾರೆಯಾಗಿರುವ ವ್ಯವಹಾರವನ್ನು ರದ್ದುಪಡಿಸುವ ಅಧಿಕಾರವನ್ನು ಸಹ ನ್ಯಾಯಾಧೀಕರಣ ಹೊಂದಿರುತ್ತದೆ. ವಯಸ್ಸಾದ ದಂಪತಿ ಮತ್ತು ಒಂಟಿಯಾಗಿ ಜೀವಿಸುತ್ತಿರುವ ವೃದ್ಧರ ಮೇಲೆ ಪೊಲೀಸರು ಸ್ನೇಹಮಯ ನಿಗಾ ಇಡಬೇಕಾಗುತ್ತದೆ.

ಹಿರಿಯ ವಕೀಲರು, ಕಾರ್ಕಳ
ಮೊ: 98452 32490