ದಕ್ಷಿಣ ಕನ್ನಡ : ತಮ್ಮ ತಾಯ್ನಾಡಿನಿಂದ ಸ್ಥಳಾಂತರಗೊಂಡು ದೇಶದ ವಿವಿಧ ಸ್ಥಳಗಳಲ್ಲಿ ನೆಲೆಸಿರುವ ಕಾಶ್ಮೀರಿ ಪಂಡಿತರ ಮಕ್ಕಳಿಗೆ ಉಚಿತ ವಸತಿ ಸಹಿತ ಶಿಕ್ಷಣ ನೀಡುವುದಾಗಿ ಜಿಲ್ಲೆಯ ಶಿಕ್ಷಣ ಸಂಸ್ಥೆಯೊಂದು ಘೋಷಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಅಂಬಿಕಾ ಮಹಾವಿದ್ಯಾಲಯ ನಿರಾಶ್ರಿತ ಕಾಶ್ಮೀರಿ ಪಂಡಿತರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಮುಂದಾಗಿದೆ. ಈ ಕುರಿತು ಶನಿವಾರ ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಸ್ಥೆಯ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ್ ಅವರು ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವನ್ನು ವೀಕ್ಷಿಸಿದ ನಂತರ ಕಾಶ್ಮೀರಿ ಪಂಡಿತರ ಸದ್ಯದ ಪರಿಸ್ಥಿತಿಯನ್ನು ಮನಗಾಣಲು ಇತ್ತೀಚಿಗೆ ಜಮ್ಮುವಿಗೆ ಭೇಟಿ ನೀಡಿದ್ದರು. ಅಲ್ಲಿನ ಪರಿಸ್ಥಿತಿಯನ್ನು ಅಧ್ಯಯನ ಮಾಡಿದ ನಂತರ ಎಲ್ಲಾ ಸ್ಥಳಾಂತರಗೊಂಡ ಕಾಶ್ಮೀರಿ ಪಂಡಿತರ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡುವ ನಿರ್ಧಾರ ತೆಗೆದುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ. ಕಾಶ್ಮೀರಿ ವಿದ್ಯಾರ್ಥಿಗಳಿಗೆ ಆರನೇ ತರಗತಿಯಿಂದ ಪದವಿಯವರೆಗೆ ಉಚಿತ ಶಿಕ್ಷಣ ನೀಡುವ ಯೋಜನೆಯನ್ನು ರೂಪಿಸಿದ್ದು ಅವರಿಗೆ ಉಚಿತ ಹಾಸ್ಟೆಲ್ ಸೌಲಭ್ಯ ನೀಡುವುದಾಗಿ ಘೋಷಿಸಿದ್ದಾರೆ. ಅಂಬಿಕಾ ಮಹಾವಿದ್ಯಾಲಯದ ವಸತಿ ಶಾಲೆಯಲ್ಲಿ ಕಲಿಯುವ ಪ್ರತಿ ವಿದ್ಯಾರ್ಥಿಗೆ ವಾರ್ಷಿಕ ಸುಮಾರು 80,000 ರೂ. ಶುಲ್ಕ ವಿಧಿಸಲಾಗುತ್ತದೆ. ಇತರೆ ಸೌಲಭ್ಯಗಳಿಗೆ ಒಂದು ವರ್ಷಕ್ಕೆ 50,000 ರೂ. ವೆಚ್ಚ ತಗಲುತ್ತದೆ. ಆದರೆ ಕಾಶ್ಮೀರಿ ಪಂಡಿತರ ಮಕ್ಕಳಿಗೆ ಇವೆಲ್ಲವನ್ನೂ ಉಚಿತವಾಗಿ ನೀಡಲಾಗುವುದು ಎಂದು ಅವರು ಹೇಳಿದ್ದಾರೆ. ಕಾಶ್ಮೀರಿ ಪಂಡಿತರ ನಾಲ್ವರು ಮಕ್ಕಳು ಈಗಾಗಲೇ ತಮ್ಮ ಸಂಸ್ಥೆಗೆ ಸೇರಿಸಲಾಗಿದೆ ಎಂದು ನಟೋಜ್ ಅವರು ತಿಳಿಸಿದ್ದಾರೆ.
Recent Comments
ಕಗ್ಗದ ಸಂದೇಶ
on