ಅನೇಕ ಕಾರಣಗಳಿಂದ ಸಂದು ನೋವು ಕಾಣಿಸಿಕೊಳ್ಳಬಹುದು. ಸಂಧಿವಾತ, ಆಮವಾತ, ವಾತರಕ್ತ, ಆಘಾತವಾದಾಗ ಇದ್ಯಾವುದೇ ಕಾರಣಗಳಿಂದ ಸಂಧಿ ನೋವು ಕಾಣಿಸಿಕೊಳ್ಳಬಹುದು. ವಯಸ್ಸಾದ ಮೇಲೆ ದೊಡ್ಡ ಸಂದುಗಳಲ್ಲಿ, ಹೆಚ್ಚಾಗಿ ಮೊಣಕಾಲು ಸಂಧಿಗಳಲ್ಲಿ ಕಂಡುಬರುವ ಸಂಧಿವಾತ ಅಥವಾ ಸಂಧಿಗತವಾತದ ಬಗ್ಗೆ ನಾವಿಂದು ತಿಳಿದುಕೊಳ್ಳೋಣ.
ಸಂಧಿವಾತಕ್ಕೆ ಕಾರಣಗಳು :
ಮಾಡರ್ನ್ ಸೈನ್ಸ್ ಪ್ರಕಾರ ಇದನ್ನು ಆಸ್ಟಿಯೋಪೊರೋಸಿಸ್ ಎಂದು ಹೇಳುತ್ತಾರೆ. ಸಂದುಗಳಲ್ಲಿ ಕಾರ್ಟಿಲೇಜ್ ಹಾಗೂ ಸೈನೋವಿಯಲ್ ಫ್ಲೂಯಿಡ್ ಇರುವುದರಿಂದ ನಮ್ಮ ಚಲನೆಯಲ್ಲಿ ಧಕ್ಕೆ ಬರುವುದಿಲ್ಲ. ಆದರೆ ವಯಸ್ಸಾದಂತೆ ಸೈನೋವಿಯಲ್ ಫ್ಲೂಯಿಡ್ ಕಮ್ಮಿಯಾಗುವುದು ಹಾಗೂ ಕಾರ್ಟಿಲೇಜ್ ಕ್ಷೀಣಿಸುತ್ತದೆ. ಆಗ ಎರಡು ಅಸ್ಥಿಗಳು ಒಂದಕ್ಕೊಂದು ತಾಗಿ ನೋವು ಕಾಣಿಸಿಕೊಳ್ಳುತ್ತದೆ. ಚಲನೆಯಲ್ಲಿ ಕಷ್ಟವಾಗುತ್ತದೆ. ಆಗ ಉರಿಯೂತ ಕೂಡ ಕಾಣಿಸಿಕೊಳ್ಳಬಹುದು.
ಆಯುರ್ವೇದದಲ್ಲಿ ಇದನ್ನು ಸಂಧಿವಾತ ಎಂದು ಕರೆಯಲಾಗುತ್ತದೆ. ದೇಹದ ಚಲನೆಯಲ್ಲಿ ವಾತ ದೋಷವು ಮುಖ್ಯ ಪಾತ್ರ ವಹಿಸುತ್ತದೆ. ಸಂಧಿವಾತದಲ್ಲಿ ವಾತ ದೋಷವು ಕುಪಿತಗೊಂಡು ನೋವು ಕಾಣಿಸಿಕೊಳ್ಳುತ್ತದೆ. ವಾತ ದೋಷವು ಅನೇಕ ಕಾರಣಗಳಿಂದ ವೃದ್ಧಿಸುತ್ತದೆ. ವಯಸ್ಸಾದಂತೆ ವಾತ ದೋಷವು ಅಧಿಕವಾಗುತ್ತದೆ. ಆಹಾರದಲ್ಲಿ ರೂಕ್ಷ, ಶೀತ ಆಹಾರ, ಉಪವಾಸ ಮಾಡುವುದರಿಂದ, ಖಾರ, ಕಷಾಯ ಹಾಗೂ ಕಹಿ ಆಹಾರ ಅಧಿಕ ಸೇವನೆಯಿಂದ ವಾತ ದೋಷವು ಪ್ರಕುಪಿತ ಗೊಳ್ಳುತ್ತದೆ. ಮಾನಸಿಕ ಒತ್ತಡ, ಕ್ರೋಧ, ಲೋಭ ಚಿಂತೆಯೂ ಕೂಡ ವಾತದೋಷವನ್ನು ಪ್ರಕುಪಿತಗೊಳಿಸುತ್ತದೆ. ರಾತ್ರಿ ನಿದ್ದೆ ಸರಿಯಾಗದಿದ್ದರೆ ವಾತ ದೋಷವು ಹೆಚ್ಚುತ್ತದೆ. ಬೊಜ್ಜುತನ ಕೂಡ ಒಂದು ಕಾರಣ. ದೇಹದ ತೂಕ ಹೆಚ್ಚಾದಂತೆ ಮೊಣಕಾಲನ್ನು ಮೇಲೆ ಒತ್ತಡ ಜಾಸ್ತಿಯಾಗುವುದು. ವ್ಯಾಯಾಮವಿಲ್ಲದ ಜೀವನ ಶೈಲಿ, ಅಪೌಷ್ಠಿಕತೆ, ಅತ್ಯಧಿಕ ವ್ಯಾಯಾಮ ಮಾಡುವುದು ಸಂಧಿವಾತಕ್ಕೆ ಇನ್ನಿತರ ಕಾರಣಗಳು.
ಚಿಕಿತ್ಸೆ
ಆಯುರ್ವೇದವು.ಯಾವುದೇ ರೋಗಳ ಚಿಕಿತ್ಸೆಯಲ್ಲಿ ಮೊದಲ ಆದ್ಯತೆ ನಿಧಾನ ಪರಿವರ್ಜನೆಗೆ ನೀಡುತ್ತದೆ. ನಿಧಾನ ಪರಿವರ್ಜನೆ ಅಂದರೆ ರೋಗಕ್ಕೆ ಕಾರಣವಾಗುವ ಅಂಶಗಳನ್ನು ದೂರ ಮಾಡುವುದು. ಇದನ್ನು ದೂರ ಮಾಡುವುದರಿಂದ ಐವತ್ತು ಪ್ರತಿಶತ ರೋಗ ವಾಸಿಯಾಗುತ್ತದೆ. ಕೆಲವು ರೋಗಗಳಲ್ಲಿ ಶತಪ್ರತಿಶತ ಚಿಕಿತ್ಸೆಯ ಅಗತ್ಯವಿರುವುದಿಲ್ಲ. ಬರೀ ಕಾರಣಗಳನ್ನು ದೂರ ಮಾಡುವುದರಿಂದ ರೋಗ ವಾಸಿಯಾಗುತ್ತದೆ. ಆದ್ದರಿಂದ ಯಾವಾಗಲೂ ಮದ್ದುಗಳಿಗಿಂತ ಅಧಿಕ ಮಹತ್ವ ನಮ್ಮ ಆಹಾರ ವಿಹಾರಕ್ಕೆ ನೀಡಬೇಕು. ಆಗ ರೋಗ ಬರುವುದಿಲ್ಲ.
ಆಹಾರದಲ್ಲಿ ತೆಂಗಿನೆಣ್ಣೆ, ಶುದ್ಧ ತುಪ್ಪ, ಸಿಹಿ, ಹುಳಿ, ಆಮ್ಲ ರಸವಿರುವ, ಬಿಸಿ ಆಹಾರ ಸೇವಿಸಿ. ಅಜೀರ್ಣವಾಗದಂತೆ ನೋಡಿಕೊಳ್ಳಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎರಡು ಚಮಚ ತೆಂಗಿನ ಎಣ್ಣೆ ಒಂದು ಲೋಟ ಬಿಸಿ ನೀರಿನ ಜೊತೆ ಸೇವಿಸುವುದರಿಂದ ವಾತ ದೋಷವು ಕಡಿಮೆಗೊಳ್ಳುತ್ತದೆ. ಯಾವುದೇ ಎಣ್ಣೆಯನ್ನು ಬಳಸಿ ಅಭ್ಯಂಗ ಸ್ನಾನ ಮಾಡುವುದರಿಂದ ವಾತವು ಶಮನಗೊಳ್ಳುತ್ತದೆ. ತೆಂಗಿನ ಎಣ್ಣೆ ಅಥವಾ ಎಳ್ಳೆಣ್ಣೆ ಬಳಸಬಹುದು. ನಾರಾಯಣ ತೈಲ, ಮಹಾನಾರಾಯಣ ತೈಲ, ಬಲಾತೈಲ, ನಿರ್ಗುಂಡಿ ತೈಲ, ಕರ್ಪುರತೈಲ ನೋವನ್ನು ಕಡಿಮೆ ಮಾಡುವಂತಹ ಎಣ್ಣೆಗಳು. ಜಾನುಬಸ್ತಿ ಒಳ್ಳೆಯ ಪರಿಣಾಮ ಬೀರುವುದು. ಜಾನು ಅಂದರೆ ಮೊಣಕಾಲು. ಇದರಲ್ಲಿ ಮೊಣಕಾಲಿನ ಮೇಲೆ ಉದ್ದಿನ ಹಿಟ್ಟಿನ ಕಟ್ಟೆಯನ್ನು ಮಾಡಿ ಎಣ್ಣೆಯನ್ನು ನಿಲ್ಲಿಸುತ್ತಾರೆ. ಮೂರು ಚಮಚ ದಶಮೂಲ ಕಷಾಯ ಮೂರು ಚಮಚ ನೀರಿನ ಜೊತೆ ಬೆರೆಸಿ ದಿನಕ್ಕೆ ಎರಡು ಸಲ ಸೇವಿಸುವುದು ಉತ್ತಮ. ಅರ್ಧ ಚಮಚ ಅಶ್ವಗಂಧ ಚೂರ್ಣ ಜೇನುತುಪ್ಪದ ಜೊತೆ ದಿನಕ್ಕೆ ಎರಡು ಬಾರಿ ಸೇವಿಸಿದರೆ ನೋವು ನಿವಾರಣೆಯಾಗುತ್ತದೆ. ಯೋಗಾಸನ ಮಾಡುವುದರಿಂದ ನೋವನ್ನು ಕಡಿಮೆಗೊಳಿಸಬಹುದು. ಹಸ್ತಪಾದಾಂಗುಷ್ಠಾಸನ, ತಾಡಾಸನ, ಸುಖಾಸನ, ವೀರಭದ್ರಾಸನ, ಪವನ ಮುಕ್ತಾಸನ ಗಂಟು ನೋವಿಗೆ ಒಳ್ಳೆಯದು. ದಿನಕ್ಕೆ ಸ್ವಲ್ಪ ಸಮಯವಾದರೂ ಯೋಗಾಸನ ಮಾಡಲು ಮೀಸಲಿಡಿ.
ಔಷಧಗಳಲ್ಲಿ, ಆಯುರ್ವೇದ ಔಷಧಗಳಲ್ಲಿ ಯೋಗರಾಜ ಗುಗ್ಗುಲು, ತ್ರಯೋದಶಾಂಗ ಗುಗ್ಗುಲು ಮುಂತಾದ ಔಷಧಗಳನ್ನು ನೀಡುತ್ತಾರೆ. ಔಷಧಗಳಿಂದ ಫಲಕಾರಿಯಾಗದಿದ್ದರೆ ಪಂಚಕರ್ಮ ಚಿಕಿತ್ಸೆಯಲ್ಲಿ ಬಸ್ತಿ ಕರ್ಮವು ಸರ್ವಶ್ರೇಷ್ಠ ಚಿಕಿತ್ಸೆ.
ಯಾವುದೇ ಔಷಧವನ್ನು ವೈದ್ಯರ ಸಲಹೆ ಪಡೆಯದೆ ಸೇವಿಸಬೇಡಿ.
