ಕಾರ್ಕಳ : ಕಾರ್ಕಳ ತಾಲೂಕು ಪಳ್ಳಿ ಗ್ರಾಮದ ಕೃಷ್ಣ ಹಾಲ್ನಲ್ಲಿ ಎ. 21ರಂದು ನಡೆದ ಮದುವೆ ಸಮಾರಂಭದಲ್ಲಿ ಚಿನ್ನದ ಸರ ಕಳ್ಳತನಗೈದ ಆರೋಪಿಯನ್ನು ಕಾರ್ಕಳ ನಗರ ಪೊಲೀಸ್ ಠಾಣೆ ಪೊಲೀಸರು ಎ. 28ರಂದು ಬಂಧಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ಅಚ್ಚಿನಡ್ಕ ಭವಾನಿ ಅವರು ಮದುಮಗನ ಡ್ರೆಸ್ಸಿಂಗ್ ರೂಂ ನಲ್ಲಿರಿಸಿದ ವ್ಯಾನಿಟಿ ಬ್ಯಾಗ್ ಕಾಣೆಯಾಗಿತ್ತು. ಬ್ಯಾಗ್ ನಲ್ಲಿ 52 ಸಾವಿರ ರೂ. ಮೌಲ್ಯದ ಚಿನ್ನದ ಸರ, 6 ಸಾವಿರ ರೂ. ಮೌಲ್ಯದ ವಿವೋ ಕಂಪೆನಿಯ ಮೊಬೈಲ್ ಫೋನ್, 1,200 ರೂ. ಹಣವಿತ್ತು. ಕಳ್ಳತನವಾದ ಬಗ್ಗೆ ಭವಾನಿ ಅವರು ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಹಾಲ್ ನ ಸಿಸಿ ಕ್ಯಾಮರ ಪರಿಶೀಲಿಸಿದರು. ಸಂಶಯದ ಮೇರೆಗೆ ಪಳ್ಳಿ ಗ್ರಾಮದ ದಿಡಿಂಬೊಟ್ಟು ಸುರೇಶ್ ಪೂಜಾರಿಯನ್ನು ವಿಚಾರಣೆಗೊಳಪಡಿಸಿದರು. ಈ ವೇಳೆ ಸುರೇಶ್ ಕಳ್ಳತನ ಕೃತ್ಯವೆಸಗಿರುವ ಕುರಿತು ಬಾಯಿಬಿಟ್ಟಿದ್ದಾನೆ. ಚಿನ್ನವನ್ನು ಕಾರ್ಕಳ ಮುತ್ತೂಟ್ ಫೈನಾನ್ಸ್ ನಲ್ಲಿ ಅಡವು ಇಟ್ಟು ಹಣ ಸಾಲ ಪಡೆದಿರುವುದಾಗಿ ತಿಳಿಸಿರುತ್ತಾನೆ.
ಕಾರ್ಕಳ ಡಿವೈಎಸ್ಪಿ ವಿಜಯ ಪ್ರಸಾದ್, ವೃತ್ತ ನಿರೀಕ್ಷಕ ಸಂಪತ್ ಕುಮಾರ್ ಮಾರ್ಗದರ್ಶನದಲ್ಲಿ ನಗರ ಠಾಣಾ ಎಸ್ಐ ಪ್ರಸನ್ನ ಎಂ.ಎಸ್., ದಾಮೋದರ ಕೆ.ಬಿ., ಎಎಸ್ಐ ರಾಜೇಶ್, ಕಾನ್ ಸ್ಟೇಬಲ್ ಘನಶ್ಯಾಮ್, ಸಿದ್ದರಾಯಿ ಸುರೇಶ್ ಪೂಜಾರಿಯನ್ನು ವಶಕ್ಕೆ ಪಡೆದಿರುತ್ತಾರೆ.