Thursday, May 26, 2022
spot_img
Homeಅಂಕಣಕಾನೂನು ಕಣಜ : ಸಾರ್ವಜನಿಕ ವಲಯದಲ್ಲಿನ ಅಪರಾಧ - ವಿವಿಧ ಕಾರಣಗಳು

ಕಾನೂನು ಕಣಜ : ಸಾರ್ವಜನಿಕ ವಲಯದಲ್ಲಿನ ಅಪರಾಧ – ವಿವಿಧ ಕಾರಣಗಳು

ಸಮಾಜವು ಕಾಲಮಾನಕ್ಕನುಸರಿಸಿ ಬದಲಾವಣೆಯಾಗುತ್ತಲೇ ಇರುತ್ತದೆ. ಈ ಕಾರಣದಿಂದ ಸಮಾಜದ ಕೆಲ ವ್ಯಕ್ತಿಗಳು, ಸಾಮಾಜಿಕ ಪರಿಸ್ಥಿತಿ ಮತ್ತು ಸಂದರ್ಭಕ್ಕೆ ಅನುಸಾರವಾಗಿ ಅಪರಾಧಗಳನ್ನು ಮಾಡಲು ಪ್ರಾರಂಭಿಸುತ್ತಾರೆ. ಈ ರೀತಿಯಾಗಿ ಸಮಾಜದಲ್ಲಿನ ಪರಿಸ್ಥಿತಿ, ವಾತಾವರಣಕ್ಕೆ ಮತ್ತು ಸಮಾಜದ ಅಂಗವಾದ ವ್ಯಕ್ತಿಯು ಮಾಡುವ ಅಪರಾಧಕ್ಕೆ ಪರಸ್ಪರ ಸಂಬಂಧ ಇರುವುದು ಸಹಜ.

ಯಾವಾಗಲೂ ಮಾನವನ ದೇಹ ರಚನೆ ಮತ್ತು ಆತನ ಮನಸಿಕ ಕ್ರಿಯೆ ಇವು ಒಂದಕ್ಕೊಂದು ಪರಸ್ಪರ ಸಂಬಂಧವನ್ನು ಹೊಂದಿವೆ. ಅಸಹಜ ದೈಹಿಕ ರಚನೆಯನ್ನು ಹೊಂದಿದ ವ್ಯಕ್ತಿಗಳು ಕೆಲವೊಮ್ಮೆ ಅಪರಾಧದಲ್ಲಿ ತೊಡಗಬಹುದು. ವಿಪರೀತ ಲೈಂಗಿಕ ಬಯಕೆ, ಅಸ್ಥಿರ ಸ್ವಭಾವ, ಸಿಡುಕು ಸ್ವಭಾವ ಮುಂತಾದವುಗಳನ್ನು ಅವರು ತಮ್ಮ ತಂದೆ ತಾಯಿಗಳಿಂದ ಬಳುವಳಿಯಾಗಿ ಪಡೆದಿರಬಹುದು. ಇಂತಹ ಗುಣಗಳು ಅವರನ್ನು ವಿವಿಧ ರೀತಿಯ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಬಹುದು.

ವ್ಯಕ್ತಿಯ ಶರೀರದಲ್ಲಿಯ ರಸಗ್ರಂಥಿಗಳು ಆತನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಮೇಲೆ ಪ್ರಭಾವ ಬೀರಬಹುದು. ಈ ರಸ ಗ್ರಂಥಿಗಳಲ್ಲಿಯ ಅಸ್ತವ್ಯಸ್ತತೆಗಳು ವ್ಯಕ್ತಿಯ ನಡತೆಯನ್ನು ರೂಪಿಸಬಹುದು. ವ್ಯಕ್ತಿಯು ದೈಹಿಕವಾಗಿ ಸದೃಡವಾಗಿದ್ದರೆ ಆತನ ಬುದ್ದಿಯೂ ಚುರುಕಾಗಿರುತ್ತದೆ. ಒಂದು ವೇಳೆ ಆತನು ದೈಹಿಕವಾಗಿ ವಿಕಲತೆಗಳಿಂದ ಕೂಡಿದ್ದರೆ, ಅದು ಅವನ ದೈನಂದಿನ ವ್ಯವಹಾರಗಳ ಮೇಲೆ ಪರಿಣಾಮ ಬೀರಬಹುದು.

ಪ್ರತಿಯೊಬ್ಬ ವ್ಯಕ್ತಿಯ ಆಸೆ ಆಕಾಂಕ್ಷೆಗಳು ಅವನ ಸಾಮಾಜಿಕ ಪ್ರಕ್ರಿಯೆಗಳ ಮೇಲೆ ಅವಲಂಬಿಸಿದ್ದು, ಆತನ ವ್ಯಕ್ತಿತ್ವವು ಅವನ ಸಾಮಾಜಿಕ ಪರಿಸರಗಳ ಪ್ರತಿರೂಪವಾಗಿರುತ್ತದೆ. ಆದ್ದರಿಂದ, ಅಪರಾಧಿಗಳಿಗೆ ವ್ಯಕ್ತಿಯ ಪರಿಸರದ ಪ್ರಭಾವವಿರುತ್ತದೆ.
ವ್ಯಕ್ತಿಯು ಬಡತನದಿಂದ ತನ್ನ ಎಲ್ಲ ನೈತಿಕ ಆದರ್ಶಗಳನ್ನು ಗಾಳಿಗೆ ತೂರುತ್ತಾನೆ. ಆದುದರಿಂದ ಆತನ ಆರ್ಥಿಕ ಪರಿಸ್ಥಿತಿಗಳು ಅಪರಾಧಕ್ಕೆ ಕಾರಣವಾಗಬಹುದು. ಒಮ್ಮೊಮ್ಮೆ ಆರ್ಥಿಕವಾಗಿ ಹಿಂದುಳಿದ ಜನರು ತಮಗೆ ಆದ ಅನ್ಯಾಯವನ್ನು ಪ್ರತಿಭಟಿಸಿ ಅಪರಾಧಕ್ಕಿಳಿಯಬಹುದು.
ಬೆಳೆಯುತ್ತಿರುವ ಜನಸಂಖ್ಯಾ ಸಮಸ್ಯೆಯು ಜನರ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಆಸ್ಪದ ಕೊಡುವುದಿಲ್ಲ. ಬೇಡಿಕೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಇರುವಾಗ ಸಹಜವಾಗಿ ನಿರುದ್ಯೋಗವು ಕಾಣಿಸಿಕೊಳ್ಳುತ್ತದೆ. ಸಮಾಜದ ಕೆಲವು ಸನ್ನಿವೇಶಗಳು ಜನರನ್ನು ಸೋಮಾರಿಗಳನ್ನಾಗಿ ಮಾಡುತ್ತದೆ. ಒಮ್ಮೊಮ್ಮೆ ಅನಿವಾರ್ಯವಾಗಿ ಉದ್ಯೋಗ ಸಿಗದೇ ನಿರಾಶರಾಗಿ ಅಪರಾಧ ಮಾರ್ಗ ಹಿಡಿಯಬಹುದು. ಅರೆಉದ್ಯೋಗ, ಸಾಕಷ್ಟು ಆಧಾರವಿಲ್ಲದ ಕೆಲಸ ಮುಂತಾದ ಸನ್ನಿವೇಶಗಳು ವ್ಯಕ್ತಿಯ ವಿವೇಚನಾಶಕ್ತಿಯನ್ನು ಕುಂದಿಸುತ್ತದೆ.

ಔದ್ಯೋಗೀಕರಣ ಗ್ರಾಮೀಣ ಪ್ರದೇಶದ ಜನರನ್ನು ಬರಮಾಡಿಕೊಂಡು, ಅವರ ಕೌಟುಂಬಿಕ ಜೀವನದ ಮೇಲೆ ಪ್ರಭಾವವನ್ನು ಬೀರುತ್ತದೆ. ಉದ್ಯೋಗಕ್ಕಾಗಿ ನಗರ ಪ್ರದೇಶಕ್ಕೆ ವಲಸೆ ಬಂದ ಗ್ರಾಮೀಣ ಪ್ರದೇಶದ ಜನರಿಗೆ ಸರಿಯಾದ ವ್ಯವಸ್ಥೆಗಳು ಸಿಗದೇ ಅವರ ಜೀವನ ಅಸ್ತವ್ಯಸ್ತಗೊಂಡು ವೈಯುಕ್ತಿಕ, ಕುಟುಂಬದ ವಿಘಟನೆಗೆ ದಾರಿಮಾಡಿಕೊಡುತ್ತದೆ. ಇಂತಹ ಸನ್ನಿವೇಶಗಳು ವ್ಯಕ್ತಿಗಳಿಗೆ ಕಾನೂನು ಉಲ್ಲಂಘನೆ ಮಾಡುವುದಕ್ಕೆ ಪ್ರೇರೇಪಿಸಬಹುದು.
ನಗರ ಜೀವನಕ್ಕೆ ಮಾರುಹೋಗಿ ಜನರು ನಗರಕ್ಕೆ ವಲಸೆ ಬರುತ್ತಿರುವುದರಿಂದ, ನಗರಗಳು ಮಿತಿಮೀರಿ ಬೆಳೆಯುತ್ತಿವೆ. ನಗರದಲ್ಲಿ ಜನ ಸಂಖ್ಯೆಯು ಹೆಚ್ಚಾಗಿ ಸಾಮಾಜಿಕ ನಿಯಂತ್ರಣ ಕಠಿಣವಾಗುತ್ತಿದೆ. ಜನಸಂಖ್ಯಾ ಒತ್ತಡದಿಂದ ಎಲ್ಲರಿಗೂ ಯೋಗ್ಯ ಸೌಲಭ್ಯಗಳು ದೊರೆಯಾದಾಗುತ್ತಿವೆ. ನಗರೀಕರಣವು ಸಮಾಜದ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸಿ, ಅನೈತಿಕ ವರ್ತನೆಗಳಿಗೆ ಪ್ರೋತ್ಸಾಹಿಸುತ್ತದೆ. ನಗರದ ಕೊಳಚೆ ಪರಿಸರ, ನಗರ ಸಂಸ್ಕೃತಿ ಇತ್ಯಾದಿಗಳು ವ್ಯಕ್ತಿಯ ಭೌತಿಕ ಮತ್ತು ಮಾನಸಿಕ ಬೆಳವಣಿಗೆಗೆ ಕೊರತೆಯನ್ನು ಉಂಟುಮಾಡಿ ಅಸಾಮಾಜಿಕ ಹಾಗೂ ಅನಾಗರಿಕ ವರ್ತನೆಗಳನ್ನು ರೂಪಿಸುತ್ತವೆ.

‘ಮನೆಯೇ ಮೊದಲ ಪಾಠಶಾಲೆ’ ಎಂಬಂತೆ ವ್ಯಕ್ತಿಯ ವ್ಯಕ್ತಿತ್ವವು ಮಗುವಾಗಿದ್ದಾಗಿನಿಂದಲೇ ಮೊಟ್ಟ ಮೊದಲಿಗೆ ಕುಟುಂಬದಲ್ಲಿಯೇ ಪ್ರಾರಂಭವಾಗುತ್ತದೆ. ಅಲ್ಲಿಂದಲೇ ಅವನು ತನ್ನ ಜೀವನದ ಮೊದಲ ಪಾಠಗಳನ್ನು ಕಲಿಯಲು ಪ್ರಾರಂಭಿಸುತ್ತಾನೆ. ಅವನ ವ್ಯಕ್ತಿತ್ವವು ಮನೆಯ ವಾತಾವರಣದಲ್ಲಿಯೇ ರೂಪುಗೊಳ್ಳುತ್ತದೆ. ಅಂದರೆ ಕುಟುಂಬದಲ್ಲಿಯ ಸದಸ್ಯರ ಸಂಬಂಧ, ರೀತಿ ನೀತಿಗಳ ಆಚರಣೆ, ನಿಯಂತ್ರಣ, ಸಂಪ್ರದಾಯ, ಸಂಸ್ಕ್ರತಿ ಇತ್ಯಾದಿಗಳು ಮಗುವಿನ ಬೆಳವಣಿಗೆಯಲ್ಲಿ ಮಹತ್ತರವಾದ ಪ್ರಭಾವವನ್ನು ಬೀರುತ್ತವೆ.

ಹಣ ಗಳಿಕೆಯ ಉದ್ದೇಶದಿಂದ ಇಂದಿನ ಚಲನಚಿತ್ರ ಮತ್ತು ಸಮೂಹ ಮಾಧ್ಯಮಗಳು ಅರೆನಗ್ನತೆ, ಮದ್ಯಪಾನ, ಪ್ರೇಮಪ್ರಕರಣ, ಹಿಂಸಾಚಾರಗಳಿಂದ ಕೂಡಿದ ಮಾಹಿತಿಯನ್ನು ಜನರಿಗೆ ಕೊಡುತ್ತಿರುತ್ತಿವೆ. ಚಲನಚಿತ್ರಗಳಲ್ಲಿ ಕಂಡ ದೃಶ್ಯಗಳನ್ನು ನೋಡಿ ಅಪರಾಧಗಳನ್ನು ಮಾಡಿದ ಅನೇಕ ಉದಾಹರಣೆಗಳನ್ನು ನಾವು ಕೇಳಬಹುದು. ಚಲನಚಿತ್ರದಲ್ಲಿ ನೋಡಿದ ಅಪರಾಧಿಗಳ ಸುಖಜೀವನ, ಕಾನೂನಿನಿಂದ ನುಣಚಿಕೊಳ್ಳುವ ವಿಧಾನಗಳು ಜೀವನದ ಉತ್ತೇಜನಕಾರಕ ಅಂಶವೆಂದು ಜನರು ಬಗೆಯುತ್ತಾರೆ. ಪ್ರೇಮ ಪ್ರಸಂಗಗಳನ್ನು ಓದಿದ, ಇಲ್ಲವೆ ನೋಡಿದ ದೃಶ್ಯಗಳು ಯುವಕ ಯುವತಿಯರಿಗೆ ಆತ್ಮ ಹತ್ಯೆ ಇಲ್ಲವೆ ಲೈಂಗಿಕ ದುಷ್ಕೃತ್ಯಗಳಿಗೆ ಬಲಿಯಾಗುವಂತೆ ಮಾಡಬಹುದು.

ಆಧುನಿಕ ಶಿಕ್ಷಣ ಜನರ ಜೀವನದಲ್ಲಿ ನಿರಾಶೆಯನ್ನು ತರುತ್ತಿದೆ. ಈಗಿನ ಶಿಕ್ಷಣ ಪದ್ಧತಿಯಲ್ಲಿ ನೈತಿಕ ಹಾಗೂ ಧಾರ್ಮಿಕ ಶಿಕ್ಷಣಕ್ಕೆ ಎಳ್ಳಷ್ಟೂ ಅವಕಾಶವಿಲ್ಲ. ಬರಬರುತ್ತ ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವೆ ಇರುವ ಮಧುರ ಬಾಂಧವ್ಯ ಕಡಿಮೆಯಾಗುತ್ತಿದೆ. ಶಿಕ್ಷಣ ಹೊಂದಿದ ಯುವಕರು ಉದ್ಯೋಗಕ್ಕಾಗಿ ಪರದಾಡುತ್ತಿದ್ದಾರೆ. ವಿದ್ಯಾರ್ಥಿಗಳ ಈ ನಿರಾಶೆಯ ಜೀವನವು ಅವರನ್ನು ಅನೇಕ ಅವ್ಯವಹಾರಗಳ ಚಟುವಟಿಕೆಗಳಲ್ಲಿ ತೊಡಗಿಸಬಹುದು.
ಇತ್ತೀಚೆಗೆ ಧರ್ಮದ ಹೆಸರಿನಲ್ಲಿ ಅನೇಕ ಜನರು ಸಮಾಜ ವಿರೋಧಿ ಕೃತ್ಯಗಳಿಗೆ ಜನರನ್ನು ಪ್ರಚೋದಿಸುವುದನ್ನು ನಾವು ಕಾಣುತ್ತಿರುತ್ತೇವೆ. ರಾಜಕೀಯ ವ್ಯಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ಮತ, ಜಾತಿ, ಪಂಗಡಗಳನ್ನು ಬಳಸಿಕೊಳ್ಳುವ ಸಂದರ್ಭದಲ್ಲಿ ಸಮಾಜದ ಮುಗ್ಧ ಜನರ ಹಿತಾಸಕ್ತಿಯನ್ನು ಮರೆತು ಬಿಡುತ್ತಾರೆ. ಇದರಿಂದಾಗಿ ಅಪರಾಧಗಳ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಲೇ ಇದೆ.

ಕೆ. ವಿಜೇಂದ್ರ ಕುಮಾರ್
ಹಿರಿಯ ವಕೀಲರು, ಕಾರ್ಕಳ
ಮೊ : 98452 32490/ 96116 82681

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!