ನವದೆಹಲಿ : ಕಳೆದ ನವೆಂಬರ್ನಲ್ಲಿ ಕೇಂದ್ರ ಸರ್ಕಾರವು ಅಬಕಾರಿ ಸುಂಕವನ್ನು ಕಡಿತಗೊಳಿಸಿದ್ದರೂ ಕೆಲವು ರಾಜ್ಯಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ಕಡಿಮೆ ಮಾಡಿಲ್ಲ ಮತ್ತು ಜನರಿಗೆ “ಅನ್ಯಾಯ” ಮಾಡಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ.
ದೇಶದಲ್ಲಿ ಉದಯೋನ್ಮುಖ ಕೋವಿಡ್-19 ಪರಿಸ್ಥಿತಿಯ ಕುರಿತು ಮುಖ್ಯಮಂತ್ರಿಗಳೊಂದಿಗಿನ ಸಂವಾದದಲ್ಲಿ ಮಾತನಾಡಿದ ಮೋದಿ, ಜಾಗತಿಕ ಪರಿಸ್ಥಿತಿಯಿಂದಾಗಿ ಜನರು ಎದುರಿಸುತ್ತಿರುವ ಸವಾಲುಗಳ ಪ್ರತ್ಯೇಕ ವಿಷಯವನ್ನು ಚರ್ಚೆ ಮಾಡಲು ಬಯಸುವುದಾಗಿ ಹೇಳಿದರು.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ವಿಚಾರವಾಗಿ ಬಿಜೆಪಿಯೇತರ ಸರ್ಕಾರಗ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಕಳೆದ ನವೆಂಬರ್ನಲ್ಲಿ ಜನರ ಮೇಲಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಹೊರೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರವು ಅಬಕಾರಿ ಸುಂಕವನ್ನು ಕಡಿಮೆ ಮಾಡಿದೆ. ಅಂತೆಯೇ ಹಲವು ರಾಜ್ಯ ಸರ್ಕಾರಗಳು ತೆರಿಗೆಯನ್ನು ಕಡಿಮೆ ಮಾಡಿ ಅದರ ಲಾಭವನ್ನು ನಾಗರಿಕರಿಗೆ ವರ್ಗಾಯಿಸಿದೆ. ಆದರೆ ಇನ್ನೂ ಕೆಲ ರಾಜ್ಯಗಳು ಮಾತ್ರ ಆ ಕೆಲಸ ಮಾಡಿಲ್ಲ. ರಾಜ್ಯ ಸರ್ಕಾರಗಳು ವ್ಯಾಟ್ ಕಡಿತಗೊಳಿಸಿ ಅದರ ಲಾಭವನ್ನು ನಾಗರಿಕರಿಗೆ ವರ್ಗಾಯಿಸುವಂತೆ ಮೋದಿ ಒತ್ತಾಯಿಸಿದರು.
ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ತೆಲಂಗಾಣ, ಆಂಧ್ರಪ್ರದೇಶ, ಕೇರಳ, ಜಾರ್ಖಂಡ್ ಮತ್ತು ತಮಿಳುನಾಡು ಮುಂತಾದ ಹಲವು ರಾಜ್ಯಗಳು ಯಾವುದೋ ಕಾರಣಕ್ಕೆ ಕೇಂದ್ರ ಸರ್ಕಾರದ ಮಾತನ್ನು ಕೇಳಲಿಲ್ಲ ಮತ್ತು ಆ ರಾಜ್ಯಗಳ ನಾಗರಿಕರಿಗೆ ಹೊರೆಯಾಗುತ್ತಲೇ ಇದೆ. ನೀವು ವ್ಯಾಟ್ ಅನ್ನು ಕಡಿಮೆ ಮಾಡುವ ಮೂಲಕ ನಾಗರಿಕರಿಗೆ ಪ್ರಯೋಜನವನ್ನು ನೀಡಬೇಕು ಎಂದು ನಾನು ವಿನಂತಿಸುತ್ತೇನೆ” ಎಂದು ಮೋದಿ ಹೇಳಿದರು.